Asianet Suvarna News Asianet Suvarna News

ಬಲಹೀನ ವರ್ಗಗಳಿಗೆ ಕಾಂಗ್ರೆಸ್‌, ಜೆಡಿಎಸ್‌ ಮೋಸ: ಸಚಿವ ಸುಧಾಕರ್‌

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಹೆಚ್ಚಿನ ಬಿಜೆಪಿ ಶಾಸಕರ ಆಯ್ಕೆಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸಚಿವ ಸುಧಾಕರ್‌ ಮನವಿ

Minister K Sudhakar Slams Congress and JDS grg
Author
First Published Nov 10, 2022, 2:30 AM IST

ಚಿಕ್ಕಬಳ್ಳಾಪುರ(ನ.10):  ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅಧಿಕಾರ ಅನುಭವಿಸಿಯೂ ಬಲಹೀನ ವರ್ಗಗಳಿಗೆ ಯಾವುದೇ ನ್ಯಾಯ ಒದಗಿಸುವಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ವಿಫಲವಾಗಿವೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಟೀಕಿಸಿದರು. ತಾಲೂಕಿನ ನಂದಿ ಹಾಗೂ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಸ್ಥಳೀಯ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಅಲ್ಲದೆ ಎಲ್ಲ ವರ್ಗದ ಜನರಿಗೂ ಸಮಾನವಾಗಿ ಅವಕಾಶಗಳು ಮತ್ತು ಯೋಜನೆಗಳು ಸಿಗುತ್ತಿವೆ. ಹಾಗಾಗಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಬೇಕು ಎಂದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು, ನಾಡುಪ್ರಭು ಕೆಂಪೇಗೌಡರ ಪ್ರತಿಮೆ ಚುನಾವಣಾ ಗಿಮಿಕ್‌ ಎಂಬ ಆರೋಪ ಮಾಡುತ್ತಿವೆ. ಆದರೆ 108 ಅಡಿಗಳ ಕಂಚಿನ ಪ್ರತಿಮೆ ತಯಾರಿಸಲು ಒಂದೆರಡು ದಿನಗಳಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದ ಸಚಿವ ಸುಧಾಕರ್‌, ಪ್ರತಿಮೆ ನಿರ್ಮಾಣ ಕುರಿತು ಕಳೆದ ಮೂರು ವರ್ಷಗಳ ಹಿಂದೆಯೇ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಜಾತಿ ಮತ್ತು ಕೆಂಪೇಗೌಡರ ಹೆಸರಿನಲ್ಲಿ ಮತ ಪಡೆದ ಎರಡೂ ಪಕ್ಷಗಳೂ ಅವರಿಗೆ ಗೌರವ ನೀಡಲಿಲ್ಲ, ಪರಿಶಿಷ್ಟರಿಗೆ ಸಲ್ಲಬೇಕಿದ್ದ ಮೀಸಲಾತಿ ನೀಡಲಿಲ್ಲ. ಆದರೂ ಬಲಹೀನ ವರ್ಗಗಳ ವಿರೋಧಿ ಬಿಜೆಪಿ ಎಂದು ಆರೋಪಿಸುವುದು ಹಾಸ್ಯಾಸ್ಪದ ಎಂದರು.

Chikkaballapura : ಖರ್ಗೆ ಆಯ್ಕೆ, ಜೋಡೊ ‘ಕೈ’ಗೆ ಶಕ್ತಿ ತರಲಿದೆ

ಎಲ್ಲ ಜಾತಿ, ಧರ್ಮದ ಜನರನ್ನು ಉಳಿಸಿ, ಬೆಳೆಸಿ, ಮುಖ್ಯವಾಹಿಗೆ ತರುವ ಕಲ್ಪನೆ ಇರುವುದು ಬಿಜೆಪಿಗೆ ಮಾತ್ರ. ಅಲ್ಪ ಸಂಖ್ಯಾತರಿಗೂ ಕಾಂಗ್ರೆಸ್‌ ಟೋಪಿ ಹಾಕುತ್ತಲೇ ಇದೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಮೋದಿಯವರನ್ನು ಸ್ಮರಿಸುತ್ತಿದ್ದಾರೆ. ಇದಕ್ಕೆ ಕಾರಣ ತ್ರಿಬಲ್‌ ತಲಾಖ್‌ ತೆಗೆದಿರುವುದು. ಮುದ್ರಾ ಯೋಜನೆ ಅಲ್ಪಸಂಖ್ಯಾತ ಮಕ್ಕಳಿಗೆ ಅನುಕೂಲವಾಗಿದೆ. ಈ ನಾಡಿನ ಹೆಮ್ಮೆಯ ಕಾರ್ಯಕ್ರಮವಾಗಿರುವ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಸಮಾಜ ಸುಧಾರಕರಾದ ಕೈವಾರದ ತಾತಯ್ಯ, ವೀರಬ್ರಹ್ಮೇಂದ್ರ ಸ್ವಾಮಿಯಂತಹ ಮಹನೀಯರು ಜಿಲ್ಲೆಯಲ್ಲಿ ಜನಿಸಿದ್ದಾರೆ. ಇವರ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್‌, ವಾಲ್ಮೀಕಿ ಮಹರ್ಷಿಗಳ ಸಾಲಿಗೆ ಸೇರುವವರು ಕೆಂಪೇಗೌಡರು. ಇವರು ಸ್ವಯಂ ಪ್ರೇರಣೆಯಿಂದ ಮಹನೀಯರ ಮಾರ್ಗ, ಆಶಯಗಳಿಗೆ ಅನುಸಾರವಾಗಿ ನಡೆದುಕೊಂಡವರು ಎಂದು ಸುಧಾಕರ್‌ ಬಣ್ಣಿಸಿದರು.

Karnataka Assembly Election 2023 : ಕಾಂಗ್ರೆಸ್‌ಗೆ ರಾಜ್ಯದ ಚುಕ್ಕಾಣಿ

ಸಭೆಯಲ್ಲಿ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್‌ ಕಿರಣ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಲೀಲಾವತಿ ಶ್ರೀನಿವಾಸ, ನಿರ್ಮಲಾಪ್ರಭು, ಕೆ.ಎಂ. ನಾಗರಾಜ, ನಾರಾಯಣಸ್ವಾಮಿ, ಬೈರೇಗೌಡ, ಮಿಲ್ಟನ್‌ ವೆಂಕಟೇಶ, ಮಹಾಕಾಳಿ ಬಾಬು ಹಾಗೂ ನಂದಿಯಲ್ಲಿ ನಡೆದ ಸಭೆಯಲ್ಲಿ ಶ್ರೀನಿವಾಸ, ಮುರಳಿ, ಮಂಜುನಾಥ್‌, ಸುಧಾ ವೆಂಕಟೇಶ್‌, ಜೆಸಿಬಿ ಮಂಜುನಾಥ್‌, ಮಸೂದ್‌, ಮುನಿಸ್ವಾಮಿ, ಚನ್ನಕೇಶವ, ಸತೀಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದು ಪದಗ್ರಹಣ

ಬೃಹತ್‌ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ವಿ. ನವಿನ್‌ ಕಿರಣ್‌ ಅವರ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಸಮಾಜ ಸೇವೆ ಮತ್ತು ಶೈಕ್ಷಣಿಕ ಸೇವೆಯಲ್ಲಿ ತೊಡಗಿದ್ದು, ಅವರು ಗುರುವಾರ ಬಿಎಂಟಿಸಿ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.
 

Follow Us:
Download App:
  • android
  • ios