500 ಕೋಟಿ ಅರಣ್ಯ ನಿಧಿ ನೀಡದ ಕೇಂದ್ರ ಸರ್ಕಾರ: ಸಚಿವ ಈಶ್ವರ ಖಂಡ್ರೆ ಗರಂ
ಕೇಂದ್ರ ಸರ್ಕಾರವು ‘ಕ್ಯಾಂಪಾ’ (ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ನಿಧಿಯಲ್ಲಿರುವ 500 ಕೋಟಿ ರು. ಹಣ ಬಿಡುಗಡೆ ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಬೆಂಗಳೂರು (ಸೆ.06): ಕೇಂದ್ರ ಸರ್ಕಾರವು ‘ಕ್ಯಾಂಪಾ’ (ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ) ನಿಧಿಯಲ್ಲಿರುವ 500 ಕೋಟಿ ರು. ಹಣ ಬಿಡುಗಡೆ ಮಾಡಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಂಪಾ ನಿಧಿಯಲ್ಲಿ ನಮ್ಮದೇ 500 ಕೋಟಿ ರು. ಅನುದಾನ ಇದೆ. ದೆಹಲಿಗೆ ಹೋಗಿದ್ದ ವೇಳೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವರನ್ನು ಭೇಟಿ ಮಾಡಿ ಕ್ಯಾಂಪಾ ನಿಧಿ ಅಡಿ ಇರುವ ಹಣ ಬಿಡುಗಡೆ ಮಾಡಿದರೆ ಆನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬಹುದು ಎಂದು ಮನವಿ ಮಾಡಲಾಯಿತು.
ಆದರೆ 1.5 ಕೋಟಿ ರು. ವೆಚ್ಚ ಮಾಡಿ ರೈಲ್ವೆ ಬ್ಯಾರಿಕೇಡ್ ಏಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಜೀವಕ್ಕಿಂತ ಹಣ ಮುಖ್ಯವಲ್ಲ ಎಂದರು. ಆನೆ ಕಾರಿಡಾರ್‌ಗಳಲ್ಲಿ ರಸ್ತೆ, ರೈಲು, ವಿದ್ಯುತ್ ಕಂಬ, ನೀರಿನ ಕೊಳವೆ ಅಳವಡಿಕೆಗಾಗಿ ಕೆಲವು ಪ್ರದೇಶಗಳು ಬಳಕೆಯಾಗಿದೆ. ಆದರೆ, ಖಾಸಗಿಯವರಿಂದ ಒತ್ತುವರಿಯಾಗಿದ್ದರೆ ಅದನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಆನೆ ಕಾರಿಡಾರ್ ರಕ್ಷಿಸಲಾಗುವುದು. ಅರಣ್ಯದೊಳಗೆ ಅಥವಾ ಅರಣ್ಯದಂಚಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಅರಣ್ಯಾಧಿಕಾರಿಗಳ ಲೋಪ ಕಂಡುಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಅನಗತ್ಯ: ಸಿದ್ದರಾಮಯ್ಯ
15 ದಿನದಲ್ಲಿ 11 ಮಂದಿ ಸಾವು: ಕಳೆದ 15ದಿನದಲ್ಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ 11 ಜನರು ಸಾವಿಗೀಡಾಗಿದ್ದು, ಅಮೂಲ್ಯ ಜೀವಹಾನಿ ತಪ್ಪಿಸಲು ಅಗತ್ಯ ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಆನೆಗಳ ದಾಳಿಯಿಂದಲೇ ಅಧಿಕ ಸಾವು ಸಂಭವಿಸಿದ್ದು, ಕಳೆದ ಐದೂವರೆ ವರ್ಷದಲ್ಲಿ 148 ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಕಂದಕ ಮತ್ತು ಸೌರತಂತಿ ಬೇಲಿಗೆ ಪ್ರತಿವರ್ಷ ನಿರ್ವಹಣಾ ವೆಚ್ಚವಾಗುತ್ತಿದೆ. ಆದರೆ, ರೈಲ್ವೆ ಬ್ಯಾರಿಕೇಡ್ ಉತ್ತಮ ಪರಿಹಾರ ಎಂದು ಐಐಎಸ್‌ಸಿ ತಜ್ಞರ ವರದಿ ಹೇಳಿದೆ.
ರಾಜ್ಯದಲ್ಲಿ ಆನೆ ಹಾವಳಿ ತಪ್ಪಿಸಲು ಸುಮಾರು 640 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸುವ ಅಗತ್ಯವಿದೆ. ಈವರೆಗೆ 312 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಪ್ರತಿ ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಸುಮಾರು 1.50 ಕೋಟಿ ರು.ವೆಚ್ಚವಾಗುತ್ತದೆ ಎಂದು ವಿವರಿಸಿದ ಅವರು, ರಾಜ್ಯದಲ್ಲಿ ಈ ವರ್ಷ 38 ಆನೆಗಳು ಸಾವನ್ನಪ್ಪಿವೆ ಎಂದರು. ಈ ಪೈಕಿ ಒಂದು ಆನೆ ರೈಲು ಡಿಕ್ಕಿಯಿಂದ ಮೃತಪಟ್ಟಿದ್ದರೆ, ವಿದ್ಯುತ್ ಸ್ಪರ್ಶದಿಂದ 10 ಆನೆಗಳು ಸಾವನ್ನಪ್ಪಿವೆ. ಎರಡು ಆನೆಗಳು ಗುಂಡಿನೇಟಿನಿಂದ ಸಾವಿಗೀಡಾಗಿದ್ದರೆ 25 ಆನೆಗಳು ಸ್ವಾಭಾವಿಕ ಸಾವು ಕಂಡಿವೆ ಎಂದು ಮಾಹಿತಿ ನೀಡಿದರು.
ಜನರ ಭಾವನೆಗಳ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ: ಭಾರತ್ ಮರುನಾಮಕರಣಕ್ಕೆ ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯ
ಅರಣ್ಯ ಪ್ರದೇಶ ಕಡಿಮೆಯಾಗುತಿದ್ದು, ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಘರ್ಷಗಳು ಹೆಚ್ಚಾಗುತ್ತಿವೆ. ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರದ ಸಮಸ್ಯೆಯಿಂದಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ವನ್ಯಜೀವಿಗಳಿಗೆ ಸೂಕ್ತ ಆಹಾರ ದೊರಕುವಂತೆ ಮಾಡುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಇದೇ ವೇಳೆ ಸಚಿವರು ಮಾಹಿತಿ ನೀಡಿದರು.