ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಅನಗತ್ಯ: ಸಿದ್ದರಾಮಯ್ಯ
ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ‘ಇಂಡಿಯಾ’ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಂಗಳೂರು (ಸೆ.06): ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ‘ಇಂಡಿಯಾ’ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ದೇಶಕ್ಕೆ ‘ರಿಪಬ್ಲಿಕ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡಲು ಹೊರಟಿದೆ. ಆದರೆ ಇದರ ಅಗತ್ಯವಿಲ್ಲ. ಈಗಾಗಲೇ ಇಂಡಿಯಾ ಹೆಸರನ್ನು ಎಲ್ಲರೂ ಒಪ್ಪಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಕಾವೇರಿ’ ನಿವಾಸಕ್ಕೆ ಸಿಎಂ ಸಿದ್ದು ಕೊನೆಗೂ ಸ್ಥಳಾಂತರ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 100 ದಿನಗಳ ಬಳಿಕ ತಮ್ಮ ನೆಚ್ಚಿನ ‘ಕಾವೇರಿ’ ನಿವಾಸಕ್ಕೆ ಸೋಮವಾರ ಸ್ಥಳಾಂತರಗೊಂಡಿದ್ದಾರೆ. ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ, ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕುಟುಂಬ ಸದಸ್ಯರು ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದರು ಎಂದು ತಿಳಿದುಬಂದಿದೆ.
ಜನರ ಭಾವನೆಗಳ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ: ಭಾರತ್ ಮರುನಾಮಕರಣಕ್ಕೆ ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯ
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೂ ಕಾವೇರಿ ನಿವಾಸದಲ್ಲೇ ವಾಸವಿದ್ದರು. ಬಳಿಕ 2018ರಲ್ಲಿ ಪಕ್ಷ ಸೋಲು ಅನುಭವಿಸಿ ಸಮ್ಮಿಶ್ರ ಸರ್ಕಾರ ಬಂದಾಗ ಸಚಿವ ಕೆ.ಜೆ. ಜಾಜ್‌ರ್ ಹೆಸರಿನಲ್ಲಿ ಕಾವೇರಿ ನಿವಾಸದಲ್ಲೇ ಮುಂದುವರೆದಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿ.ಎಸ್. ಯಡಿಯೂರಪ್ಪ ಅವರು ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದರು. ಇದೀಗ ಸಿದ್ದರಾಮಯ್ಯ ಅವರು ಪುನಃ ಮುಖ್ಯಮಂತ್ರಿ ಆದ ಬಳಿಕ ಕಾವೇರಿ ನಿವಾಸದಲ್ಲಿ ದುರಸ್ತಿ ಕಾರ್ಯ ನಡೆಸಿ ಸೋಮವಾರ ಸ್ಥಳಾಂತರಗೊಂಡಿದ್ದಾರೆ.
ತಮಿಳುನಾಡಿನಿಂದ ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ: ನಮ್ಮಲ್ಲಿಯೇ ನೀರಿಲ್ಲ. ಹೀಗಿರುವಾಗ ತಮಿಳುನಾಡಿಗೆ ಹೇಗೆ ನೀರು ಬಿಡಲು ಸಾಧ್ಯ?. ತಮಿಳುನಾಡಿಗೆ ನೀರು ಕೊಡಬಾರದು ಎಂಬ ಉದ್ದೇಶ ನಮ್ಮದಲ್ಲ. ಆದರೆ, ನಮ್ಮಲ್ಲಿಯೇ ನೀರಿಲ್ಲ. ಹೀಗಾಗಿ, ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಆಲಮಟ್ಟಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶನಿವಾರ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳಿ, ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಿದರು. ಆಲಮಟ್ಟಿಗೆ ತೆರಳುವ ಮಾರ್ಗ ಮಧ್ಯೆ ಬಳ್ಳಾರಿಯ ತೋರಣಗಲ್ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಪ್ರಧಾನಿ ಮೋದಿ 'ಗೇಮ್ ಚೇಂಜರ್ಸ್' ಅಲ್ಲ 'ನೇಮ್ ಚೇಂಜರ್ಸ್': ಇಂಡಿಯಾ ಹೆಸರು ಬದಲಾವಣೆಗೆ ಸಚಿವ ಪ್ರಿಯಾಂಕ್ ವಾಗ್ದಾಳಿ
ವಯನಾಡಲ್ಲಿ ಮಳೆಯಾಗಿಲ್ಲ. ಹೀಗಾಗಿ, ಕಬಿನಿ ಜಲಾಶಯ ಭರ್ತಿಯಾಗಿಲ್ಲ. ಇರುವ ನೀರಿನಲ್ಲಿಯೇ ನಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬೇಕು. ಕುಡಿಯಲು ನೀರು ಕೊಡಬೇಕು. ತಮಿಳುನಾಡಿನವರು ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಮೇಕೆದಾಟುವಿನಿಂದ 67 ಟಿಎಂಸಿ ನೀರು ಸಂಗ್ರಹಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.