ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸೋಲಿಸಿ: ಸಚಿವ ಖಂಡ್ರೆ
ಬೆಲೆ ಏರಿಕೆ ತಡೆಯುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡ್ತೇವೆ, ಮನೆಯಿಲ್ಲದವರಿಗೆ ಪಕ್ಕಾ ಮನೆ ಕಟ್ಟುತ್ತೇವೆಂದು ಹೇಳಿ ಏನೂ ಮಾಡದೇ ಕೈಕಟ್ಟಿಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದ ಖಂಡ್ರೆ
ಬೀದರ್(ಜೂ.13): ಮುಂದಿನ 10 ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಬಿಜೆಪಿಯವರು ಏನೂ ಮಾಡದೆ ಮೆರೆಯುತ್ತಿದ್ದಾರೆ. ನಾವು ಕೊಟ್ಟಮಾತಿನಂತೆ ನಡೆದುಕೊಂಡಿದ್ದು ನಮ್ಮ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.
ನಗರದಲ್ಲಿ ಭಾನುವಾರ ರಾತ್ರಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿಯವರು ಕೊಟ್ಟ ಒಂದು ಭರವಸೆಯಾದರೂ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿ, ಬೆಲೆ ಏರಿಕೆ ತಡೆಯುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡ್ತೇವೆ, ಮನೆಯಿಲ್ಲದವರಿಗೆ ಪಕ್ಕಾ ಮನೆ ಕಟ್ಟುತ್ತೇವೆಂದು ಹೇಳಿ ಏನೂ ಮಾಡದೇ ಕೈಕಟ್ಟಿಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದರು.
ಔರಾದ್: ಕಾಮಗಾರಿ ಕಳಪೆಯಾದಲ್ಲಿ ಸಹಿಸಲ್ಲ, ಶಾಸಕ ಪ್ರಭು ಚವ್ಹಾಣ್
ಕೆರೆಯ ನೀರು ಕೆರೆಗೆ ಚೆಲ್ಲಿ ಎಂಬಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಉಚಿತ ಯೋಜನೆಗಳನ್ನು ನೀಡುತ್ತಿದೆ. ನಾವು 5 ಗ್ಯಾರಂಟಿಗಳನ್ನು ಚುನಾವಣಾ ಪೂರ್ವದಲ್ಲಿ ಕೊಟ್ಟು ಇದೀಗ ಪೂರ್ಣಗೊಳಿಸಲು ಆರಂಭಿಸಿದ್ದು, ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಹೀಗೆಯೇ ಎಲ್ಲವನ್ನೂ ಜಾರಿಗೆ ತರುತ್ತಿದ್ದೇವೆ, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದರೂ ಮುಂದಿನ ಕೆಲ ತಿಂಗಳಲ್ಲಿ ತಾಪಂ ಹಾಗೂ ಜಿಪಂ ಚುನಾವಣೆಗಳೂ ಘೋಷಣೆಯಾಗಲಿದೆ. ಬಿಜೆಪಿಯ ಭ್ರಷ್ಟಾಚಾರ, ಪಕ್ಷಪಾತದಂಥ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ಗೆ ಅಧಿಕಾರ ನೀಡಿರುವ ಜನರ ಆಶೋತ್ತರಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂಬುವದನ್ನು ಜನತೆಯತ್ತ ಕೊಂಡೊಯ್ದು ಮತ್ತೊಮ್ಮೆ ಬಿಜೆಪಿ ಸೋಲಿಸಬೇಕೆಂದು ಕರೆ ನೀಡಿದರು.
ಎಲ್ಲ ನೀರಾವರಿ ಯಜನೆಗಳನ್ನು ಪೂರ್ಣಗೊಳಿಸಿ ರೈತರಿಗೆ ದೊಡ್ಡ ಕೊಡುಗೆ ಕೊಡಬೇಕಾಗಿದೆ. ಬ್ರಿಮ್ಸ್ನಲ್ಲಿ ತಜ್ಞ ವೈದ್ಯರ ನೇಮಕಾತಿ, ಟ್ರಾಮಾ ಕೇಂದ್ರ ಆರಂಭ ಹೀಗೆಯೇ ಅನೇಕ ಸಮಸ್ಯೆಗಳನ್ನು ಈಡೇರಿಸಲಾಗುವುದು, ಬಿಜೆಪಿ ಸರ್ಕಾರದಲ್ಲಿ ಬೀದರ್ ನೂತನ ವಿಶ್ವ ವಿದ್ಯಾಲಯ ಘೋಷಣೆ ಮಾಡಿ ಒಂದೂ ಹುದ್ದೆ ತುಂಬಿಲ್ಲ ಅದಕ್ಕೆ ನಾವು ಕಾಯಕಲ್ಪ ನೀಡಲು ಮುಂದಾಗುತ್ತೇವೆ ಎಂದರು.
ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರದಲ್ಲಿ ಕೈಪಾಳಯದ ಮುಖಂಡರದ್ದೆ ಆಡಳಿತ:
ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರದಲ್ಲಿ ಕೈಪಾಳಯದ ಮುಖಂಡರ ಸಲಹೆಗಳೊಂದಿಗೆ ಅಭಿವೃದ್ಧಿ ಮಾಡ್ತೇವೆ. ಆಯಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತವೇ ಇದೆ ಎಂಬಂತೆ ಅಭಿವೃದ್ಧಿ ಮಾಡ್ತೇವೆ, ಕಾರ್ಯಕರ್ತ, ಮುಖಂಡರಿಗೆ ನಿಗಮ, ಮಂಡಳಿಗಳಲ್ಲಿ ಪ್ರಾತಿನಿಧ್ಯವನ್ನು ನೀಡುವುದಕ್ಕೆ ಮುಂದಾಗುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಬೀದರ್: ಈಶ್ವರ್ ಖಂಡ್ರೆಗೆ ಜಿಲ್ಲೆ ಉಸ್ತುವಾರಿ, ಅಭಿವೃದ್ಧಿಯ ಜವಾಬ್ದಾರಿ!
ಈ ಸಂದರ್ಭದಲ್ಲಿ ಸಚಿವ ರಹೀಮ್ ಖಾನ್ ಮಾತನಾಡಿದರು. ಅರವಿಂದಕುಮಾರ ಅರಳಿ, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಮೂಲಗೆ, ಮಾಜಿ ಶಾಸಕ ವಿಜಯಸಿಂಗ್, ಡಾ. ಗುರಮ್ಮ ಸಿದ್ದಾರೆಡ್ಡಿ, ಆನಂದ ದೇವಪ್ಪ, ಇರ್ಷಾದ ಪೈಲ್ವಾನ್, ಪಂಡಿತ ಚಿದ್ರಿ, ಅಮೃತರಾವ್ ಚಿಮಕೋಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಬದ್ಧ
ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ಆವರಣದಲ್ಲಿಯೇ ಬೀದರ್ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಿದ್ದರೂ ಕೇವಲ ಸ್ಥಳ ನಿಗದಿ ಬಗ್ಗೆ ಅನಗತ್ಯ ಕ್ಯಾತೆ ಎತ್ತಿ ಜಿಲ್ಲಾ ಸಂಕೀರ್ಣ ನಿರ್ಮಾಣ ಆಗದಂತೆ ಬಿಜೆಪಿಯವರು ನೋಡಿಕೊಂಡರು ಆದರೆ ನಾವೀಗ ಜಿಲ್ಲಾ ಸಂಕೀರ್ಣ ಮಾಡಿ ತೋರಿಸುತ್ತೇವೆ ಎಂದು ಖಂಡ್ರೆ ಭರವಸೆ ನೀಡಿದರು.