ಪ್ರಧಾನಿ ಮೋದಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ: ಸಚಿವ ಎಂ.ಸಿ.ಸುಧಾಕರ್
ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಮಾಧ್ಯಮಗಳ ಮುಂದೆ ಬಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ (ನ.08): ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಮಾಧ್ಯಮಗಳ ಮುಂದೆ ಬಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಲೂಟಿಯಲ್ಲಿ ತೊಡಗಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗೌರವವಿದೆ.
ಅವರಿಗೆ ಸಲಹೆ ನೀಡುವಷ್ಟು ದೊಡ್ಡವನು ನಾನಲ್ಲ. ಈ ಹಿಂದೆ ಅವರು ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿರವರ ಬಗ್ಗೆ ಬಹಳ ಹೇಳಿಕೆಗಳನ್ನು ಕೊಡುತ್ತಿದ್ದರು. ಈಗ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಎರಡು ಬಾರಿ ಪ್ರಧಾನಿಯಾಗಿದ್ದ ಮನ ಮೋಹನ್ ಸಿಂಗ್ ರವರು ಎಂದೂ ಯಾರನ್ನು ಮೋದಿಯವರಂತೆ ಕೀಳು ಮಟ್ಟದಲ್ಲಿ ಟೀಕಿಸಿರಲಿಲ್ಲ. ಇದು ಅವರ ಘನತೆಗೆ ಕ್ಷೋಭೆ ತರುವುದಿಲ್ಲಾ ಎಂದರು. ಕಳೆದ ಒಂಬತ್ತುವರೆ ವರ್ಷಗಳಿಂದ ಕೇವಲ ಮನ್ ಕಿ ಬಾತ್ ಮೂಲಕ ಸಿದ್ಧಪಡಿಸಿದ ವರದಿ ಓದುವುದಲ್ಲಾ, ಎಂದಾದರೂ ಮಾಧ್ಯಮಗಳ ಮುಂದೆ ಬಂದು ಅವರ ಒಂದು ಪ್ರಶ್ನೆಗೆ ಉತ್ತರಿಸಿದ್ದಾರಾ? ಎಂದು ಪ್ರಶ್ನಿಸಿ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿ ಆಗ ಅವರು ಹೇಳಿದಂತೆ ಕೇಳುವೆ ಎಂದರು.
ಬರ ಪರಿಹಾರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ಬರ, ಮುಂದಿನ ಅಧಿಕ ಮಳೆ ಎರಡನ್ನು ಎದುರಿಸಲು ಸೂಚನೆ: ಮಳೆ ಕೊರತೆಯ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 75,200 ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಜಿಲ್ಲೆಗೆ ಇತ್ತೀಚಿಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿ ಬಗ್ಗೆ ಪರಿಶೀಲನೆ ನಡೆಸಿದೆ. ಬೆಳೆಹಾನಿ ಪರಿಹಾರವಾಗಿ 64.70 ಕೋಟಿ ರು. ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯ ಗ್ರಾಮೀಣ ಪ್ರದೇಶದ ರೈತರು, ಕೃಷಿ ಕೂಲಿ ಕಾರ್ಮಿಕರಿಗೆ ಆಸರೆಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ಎರಡು ಲಕ್ಷ ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿತ್ತು. ಪ್ರಸಕ್ತ ವರ್ಷ ಮೂರು ಲಕ್ಷ ಮಾನವ ದಿನಗಳ ಗುರಿ ಸಾಧನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಫಸಲ್ ಭಿಮಾ ಯೋಜನೆಯಡಿ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕುಗಳ ವ್ಯಾಪ್ತಿಯಲ್ಲಿ ರಾಗಿ ಬೆಳೆಹಾನಿಯಾಗಿರುವುದಕ್ಕೆ ಸಂಬಂಧಿಸಿ 5,482 ನೋಂದಣಿಗಳಲ್ಲಿ ಒಟ್ಟು 2.63 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ ಎಂದರು.
ಸದ್ಯ ಜಿಲ್ಲೆಯಲ್ಲಿ 20 ವಾರಗಳಿಗೆ ಆಗುವಷ್ಟು ಜಾನುವಾರುಗಳ ಮೇವು ದಾಸ್ತಾನಿದೆ. ಅಲ್ಲದೇ ರೈತರ ಜಮೀನುಗಳಲ್ಲಿ ಬೆಳೆಯುತ್ತಿರುವ ಮೇವು ಹತ್ತು ವಾರಗಳಿಗೆ ಆಗುವಷ್ಟಿದೆ. ಜಿಲ್ಲೆಯಲ್ಲಿ ಬರದ ಹಿನ್ನೆಲೆಯಲ್ಲಿ ಗೋಶಾಲೆಗಳನ್ನು ಆರಂಭಿಸುವ ಬಗ್ಗೆಯೂ ಚರ್ಚೆಯಾಗಿದ್ದು, ಗೋಶಾಲೆ ಆರಂಭಿಸಬೇಕೆಂಬ ಬೇಡಿಕೆ ಸದ್ಯ ಯಾವ ತಾಲೂಕಿನಿಂದಲೂ ಬಂದಿಲ್ಲ. ಆದ್ದರಿಂದ ತಕ್ಷಣ ಗೋಶಾಲೆಗಳನ್ನು ತೆರೆಯುವ ಅವಶ್ಯಕತೆಯಿಲ್ಲ. ಜಿಲ್ಲೆಯ ಯಾವುದೇ ಶಾಸಕರೂ ಗೋಶಾಲೆಯ ಬೇಡಿಕೆ ಇಟ್ಟಿಲ್ಲ. ಆದಾಗ್ಯೂ ಗೋಶಾಲೆ ತೆರೆಯುವ ಸಂದರ್ಭ ಬಂದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ತೆರೆಯಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್
ಮಳೆಗೆ ಮುನ್ನೆಚ್ಚರಿಕೆ: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿಸಬೇಕು. ಬರದ ಸ್ಥಿತಿಯ ಜೊತೆಗೆ ಮುಂದೆ ಸುರಿಯುವ ಮಳೆ ಕಡೆ ಗಮನ ನೀಡಬೇಕು. ಮಳೆ ಪ್ರಮಾಣ ಹೆಚ್ಚಾದರೆ ಅದರಿಂದ ಆಗುವ ಹಾನಿಯ ಬಗ್ಗೆ ಗಮನವಹಿಬೇಕು ಎಲ್ಲೆಲ್ಲಿ ಮನೆಗಳು ಶಿಥಿಲವಾಗಿವೆ. ಎಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.