ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್
ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಹೇಳಿದ ಸುಳ್ಳುಗಳನ್ನೇ ಕಾಂಗ್ರೆಸ್ ಪಕ್ಷ ತೆಲಂಗಾಣ ಚುನಾವಣೆಯಲ್ಲಿಯೂ ಹೇಳುತ್ತಿದೆ. ಆ ಪಕ್ಷ ಮಾಡಿರುವ ಅನ್ಯಾಯಗಳ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ ಮಾಡಲಾಗುವುದು ಎಂದು ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ರಾಮನಗರ (ನ.08): ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಹೇಳಿದ ಸುಳ್ಳುಗಳನ್ನೇ ಕಾಂಗ್ರೆಸ್ ಪಕ್ಷ ತೆಲಂಗಾಣ ಚುನಾವಣೆಯಲ್ಲಿಯೂ ಹೇಳುತ್ತಿದೆ. ಆ ಪಕ್ಷ ಮಾಡಿರುವ ಅನ್ಯಾಯಗಳ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ ಮಾಡಲಾಗುವುದು ಎಂದು ರೈತಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹೇಳಿದ ಸುಳ್ಳುಗಳನ್ನೇ ಪಂಚರಾಜ್ಯ ಚುನಾವಣೆಯಲ್ಲೂ ಹೇಳುತ್ತಿದೆ. ನ.22ರವರೆಗೆ ನಾವು ಕಾಂಗ್ರೆಸ್ ಸರ್ಕಾರಕ್ಕೆ ಗಡುವು ನೀಡುತ್ತಿದ್ದೇವೆ.
ಅವರು ಕೂಡಲೇ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಮಾಡದೇ ಹೋದರೆ ರಾಜ್ಯ ರೈತಸಂಘ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಅಸಲಿ ಸತ್ಯವನ್ನು ತಿಳಿಸುವ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಮಾಡಿರುವ ಅನ್ಯಾಯಗಳ ವಿರುದ್ಧ ಪ್ರಚಾರ ಮಾಡುತ್ತೇವೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ 8 ತಾಸು ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇದೀಗ 5 ತಾಸು, 7 ತಾಸು ಎಂದು ಹೇಳುತ್ತಿದ್ದಾರೆ.
ರಾಮನಗರ ಜಿಲ್ಲೆ ಮರುನಾಮಕರಣ ನನಗೆ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಇನ್ನು ಬೆಸ್ಕಾಂ ಹೊಸದಾಗಿ ಕೊಳವೆ ಬಾವಿ ಕೊರೆಸುವ ರೈತರು ವಿದ್ಯುತ್ ಸಂಪರ್ಕಕ್ಕೆ ಅಗತ್ಯವಿರುವ ಕಂಬ, ತಂತಿ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಸ್ವಂತ ಖರ್ಚಿನಲ್ಲೇ ಖರೀದಿಸಬೇಕು ಎಂದು ಹೇಳುತ್ತಿದೆ. ರೈತರಿಗೆ ಕೊಳವೆ ಬಾವಿ ಕೊರೆಸಿ, ವಿದ್ಯುತ್ ಸಂಪರ್ಕ ಪಡೆಯಲು 5 ರಿಂದ 6 ಲಕ್ಷ ರು. ವರೆಗೆ ಹಣ ಖರ್ಚಾಗುತ್ತದೆ. ಸಿದ್ದರಾಮಯ್ಯ ಅವರ ರೈತಪರ ನೀತಿ ಇದೇನಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಆಡಳಿತಾ ರೂಢ ಕಾಂಗ್ರೆಸ್ ಸರ್ಕಾರದ ಚುನಾವಣೆ ಸಮಯದಲ್ಲಿ ನೀಡಿದ ಮಾತು ಮರೆತು ಬಿಜೆಪಿ ಅಜೆಂಡವನ್ನು ಜಾರಿಗೆ ತರುವ ಕೆಲಸಮಾಡುತ್ತಿದೆ.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕರೈತರನ್ನು ಮರೆತಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ರೈತಪರ ಹಿತಾಸಕ್ತಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಅಂದು ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಾಯಿದೆಯನ್ನು ಹಿಂದಕ್ಕೆ ಪಡೆಯುವುದಾಗಿ ದೆಹಲಿಯಲ್ಲಿ ರಾಹುಲ್ ಗಾಂಧಿ, ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಪ್ಪಿ ಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಮರೆತಿದ್ದಾರೆ ಎಂದು ಕಿಡಿಕಾರಿದರು.
ರೈತರ ಬಾಯಿಗೆ ಮಣ್ಣು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಏನು ಮಾಡಿದೆ. ಕೃಷಿ ಭೂಮಿಯನ್ನು ಉಳಿಸಲು 1961 ರಲ್ಲಿ ಜಾರಿಗೆ ತಂದ ಕೃಷಿ ಕಾಯಿದೆಯನ್ನು 2020 ರಲ್ಲಿ ಬದಲಿಸಿ ಯಾರು ಬೇಕಾದರು ಖರೀದಿಸಲು ಅವಕಾಶ ಮಾಡಿಕೊಟ್ಟರು. ಇದರಿಂದಾಗಿ ರೈತರ ಬಾಯಿಗೆ ಮಣ್ಣು ಸುರಿದು ರೈತರು ಭೂಮಿ ಕಳೆದು ಕೊಂಡು ಕೊಳಗೇರಿಗಳಲ್ಲಿ ವಾಸಿಸುವಂತಾಗುತ್ತದೆ. ಇವರು ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಂಗಳೂರಿಗೆ ರಾಮನಗರವನ್ನು ಸೇರಿಸಿದರೆ ರೈತರ ಕೃಷಿಭೂಮಿಗೆ ಸಂಚಕಾರ: ಅಶ್ವತ್ಥ ನಾರಾಯಣ
2020ರಲ್ಲಿ ಹೊಸ ಕೃಷಿ ಕಾಯಿದೆ ಜಾರಿಗೆಯಾಗಿದೆ. ಕೃಷಿ ಕಾಯಿದೆ ಜಾರಿಯಾಗುವ ಮುನ್ನಾ ರಾಜ್ಯ ಸರ್ಕಾರಕ್ಕೆ ಮುದ್ರಾಂಕ ಶುಲ್ಕದಿಂದ ಬರುವ ಆದಾಯ 5 ರಿಂದ 6 ಸಾವಿರ ಕೋಟಿ ರು. ಇತ್ತು. ಇದೀಗ 25 ರಿಂದ 30 ಸಾವಿರ ಕೋಟಿ ರು.ಗೆ ತಲುಪಿದೆ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ರಾತ್ರಿ 8 ಗಂಟೆಯ ವರೆಗೆ ಕೆಲಸ ಮಾಡಲಾಗುತ್ತಿದೆ. ರೈತರ ಜಮೀನು ಕೃಷಿಯೇತರ ಉದ್ದೇಶಕ್ಕೆ ವ್ಯಾಪಾರ ವಾಗುತ್ತಿರುವುದಕ್ಕೆ ಸಾಕ್ಷಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಟೀಕಿಸಿದರು. ಸುದ್ದಿಗೋಷ್ಟಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ಕೃಷ್ಣಪ್ಪ, ಕುಮಾರ್ ಶಂಕರ್ ನಾರಾಯಣಪ್ಪ, ನಾಗರಾಜು ಇದ್ದರು.