ಬರ ಪರಿಹಾರ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ: ಸಚಿವ ಎಂ.ಸಿ.ಸುಧಾಕರ್
ರಾಜ್ಯದಲ್ಲಿ 232 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಸುಮಾರು 40 ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಡಳಿತವೂ ಸಹ ಬರವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ.
ಚಿಕ್ಕಬಳ್ಳಾಪುರ (ಅ.30): ರಾಜ್ಯದಲ್ಲಿ 232 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಸುಮಾರು 40 ಸಾವಿರ ಕೋಟಿ ಪರಿಹಾರಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಡಳಿತವೂ ಸಹ ಬರವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ. ಅಗತ್ಯಕ್ಕನುಗುಣವಾಗಿ ಕಾಲಕಾಲಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಲು ನಮ್ಮ ಸರಕಾರ ಮತ್ತು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ನಗರದಲ್ಲಿ ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ ಎಲ್ಲಿಯೂ ಮೇವಿಗೆ ಬರವಿಲ್ಲ, ಗೋಶಾಲೆ ಸ್ಥಾಪನೆ ಮಾಡುವ ಬಗ್ಗೆ ಯಾವ ತಾಲೂಕಿನ ರೈತರು ಬೇಡಿಕೆಯಿಟ್ಟಿಲ್ಲ.ಗೋಶಾಲೆ ಸ್ಥಾಪನೆ ಮಾಡುವ ಸಂದರ್ಭ ಎದುರಾದರೆ ಜಿಲ್ಲಾಡಳಿತ ತುರ್ತುಕ್ರಮ ತೆಗೆದುಕೊಳ್ಳಲಿದೆ ಎಂದರು.
ಕುಡಿಯುವ ನೀರಿಗೆ ಆದ್ಯತೆ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಸಮಸ್ಯೆಯನ್ನೂ ನೀಗಿಸಲು ಕ್ರಮತೆಗೆದುಕೊಳ್ಳಲಾಗಿದೆ ಎಂದರು. ಬರದ ವಿಚಾರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಕಂದಾಯ ಇಲಾಖೆ ಸಚಿವರು ಸೇರಿ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಲು ಸತತ ಪ್ರಯತ್ನ ಮಾಡಿದ್ದರೂ ಭೇಟಿಗೆ ಸಮಯ ನಿಗದಿ ಮಾಡಿಲ್ಲ. ಅನುಮತಿ ನೀಡಿಲ್ಲ. ಆದರೂ ಉನ್ನತ ಮಟ್ಟದ ಅಧಿಕಾರಿಗಳ ಜತೆ ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿ ತುರ್ತಾಗಿ 40 ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಬೇಡಿಕೆಯಿಟ್ಟು ಬಂದಿದ್ದಾರೆ. ಈ ವಿಚಾರದಲ್ಲಿ ಕೇಂದ್ರದಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ ಎಂದರು.
ಜಾನುವಾರು ಮಾರಾಟ: ಜಾನುವಾರುಗಳನ್ನು ಮಾರುವುದು, ಕೊಳ್ಳುವುದು ಸಹಜವಾದ ಪ್ರಕ್ರಿಯೆಯಾಗಿದೆ. ಬರದ ಹಿನ್ನೆಲೆಯಲ್ಲಿಯೇ ಜಾನುವಾರುಗಳನ್ನು ಹೆಚ್ಚಾಗಿ ಮಾರುತ್ತಿದ್ದಾರೆ ಎಂದು ಹೇಳುವುದು ತಪ್ಪು. ಅಂತಹ ಸಂದರ್ಭ ಎದುರಾದರೆ ಕೂಡಲೇ ಗೋಶಾಲೆ ಸ್ಥಾಪಿಸಿ ಆರೈಕೆ ಮಾಡಲಾಗುವುದು. ಈಗಲೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನೂ ಬಿಗಡಾಯಿಸುವ ಸೂಚನೆಯಿದ್ದು ಜಿಲ್ಲಾಡಳಿತ ಎಲ್ಲಕ್ಕೂ ಸಜ್ಜಾಗಿದೆ ಎಂದು ಹೇಳಿದರು.
ಕೊಟ್ಟ ಮಾತಿನಂತೆ ನಡೆದುಕೊಂಡಾಗ ಮಾತ್ರ ಜಿಲ್ಲೆ ಅಭಿವೃದ್ಧಿ: ಶಾಸಕ ಶಿವಲಿಂಗೇಗೌಡ
ಈ ವೇಳೆ ಶಾಸಕ ಪ್ರದೀಪ್ ಈಶ್ವರ್,ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ.ಎನ್.ರಮೇಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ.ಎನ್.ಭಾಸ್ಕರ್,ಉಪವಿಭಾಗಾಧಿಕಾರಿ ಅಶ್ವಿನ್,ತಹಶೀಲ್ದಾರ್ ಅನಿಲ್, ಯುವ ಮುಖಂಡ ಎಸ್.ಎಂ. ಜಗದೀಶ್, ಅಡ್ಡಗಲ್ ಶ್ರೀಧರ್,ವಕೀಲ ವಿನೋದ್ ಮತ್ತಿತರರು ಇದ್ದರು.