Asianet Suvarna News Asianet Suvarna News

ರಾಜಕೀಯವಾಗಿ ಬೆಳೆಯುತ್ತಿರುವ ನನ್ನನ್ನು ಕಂಡರೆ ಕಾಂಗ್ರೆಸ್‌ಗೆ ಭಯ: ಸಚಿವ ಸುಧಾಕರ್‌

ರಾಜಕೀಯವಾಗಿ ಬೆಳೆಯುತ್ತಿರುವ ಕಾರಣ ತಮ್ಮ ಬಗ್ಗೆ ಅವರಿಗೆ ಭಯ ಇದೆ. ಈ ಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಹಾಗಾಗಿ ಅವರು ಸತತ ಸುದ್ದಿಗೋಷ್ಠಿಗಳ ಮೂಲಕ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Minister Dr K Sudhakar Slams On Congress At Chikkaballapur gvd
Author
First Published Jan 28, 2023, 3:00 AM IST

ಚಿಕ್ಕಬಳ್ಳಾಪುರ (ಜ.28): ರಾಜಕೀಯವಾಗಿ ಬೆಳೆಯುತ್ತಿರುವ ಕಾರಣ ತಮ್ಮ ಬಗ್ಗೆ ಅವರಿಗೆ ಭಯ ಇದೆ. ಈ ಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ ಹಾಗಾಗಿ ಅವರು ಸತತ ಸುದ್ದಿಗೋಷ್ಠಿಗಳ ಮೂಲಕ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನವರು ಸತತವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ತಮ್ಮ ಬಗ್ಗೆ ಕಾಂಗ್ರೆಸ್‌ಗೆ ಭಯ ಇದೆ ಎಂದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ತಾವು ಸಚಿವರಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ರಾಜ್ಯದ ಜನತೆ ಮತ್ತು ನಮ್ಮ ಪಕ್ಷದ ಸರ್ಕಾರವೇ ಹೊರತು ಸಿದ್ದರಾಮಯ್ಯ ಅಲ್ಲ. ತಮ್ಮ ಅರ್ಹತೆ ಬಗ್ಗೆ ಸಿದ್ದರಾಮಯ್ಯನವರ ಪ್ರಮಾಣ ಪತ್ರ ಅಗತ್ಯವಿಲ್ಲ. ಸಿದ್ದರಾಮಯ್ಯ ಹೇಳಿದ ಕಾರಣಕ್ಕೆ ತಮ್ಮನ್ನು ಸಚಿವರನ್ನಾಗಿ ಮಾಡಿಲ್ಲ, ನಮ್ಮ ಪಕ್ಷದ ಸರ್ಕಾರ, ನಮ್ಮ ಮುಖ್ಯಮಂತ್ರಿ ಮತ್ತು ಈ ರಾಜ್ಯದ ಜನತೆ ತಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಹಾಗಾದರೆ ಜನತಾದಳದಲ್ಲಿದ್ದಾಗ ಯಾಕೆ ಇವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

Hampi Utsav 2023: ಐತಿಹಾಸಿಕ ಹಂಪಿ ಉತ್ಸವಕ್ಕೆ ಸಿಎಂ ಬೊಮ್ಮಾಯಿ ಚಾಲನೆ

ಬಾಯಿ ಚಪಲಕ್ಕೆ ಮಾತನಾಡುವುದು ಸರಿಯಲ್ಲ, ಬೀದರ್‌ನಿಂದ ಕೆಜಿಎಫ್‌ ವರೆಗೂ ತಮ್ಮ ಖಾತೆ ನಿರ್ವಹಣೆ ಬಗ್ಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ತಾವು ಸಚಿವ ಸ್ಥಾನಕ್ಕೆ ಲಾಯಕ್ಕಾ ಅಲ್ಲವಾ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ಸಿದ್ದರಾಮಯ್ಯ ಸರ್ಟಿಫಿಕೆಟ್‌ ಬೇಕಾಗಿಲ್ಲ ಎಂದು ಖಾರವಾಗಿಯೇ ಉತ್ತರಿಸಿದರು. ಸಿಎಂ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕರು ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್‌ ನವರ ಕಾಲ್ಪನಿಕ ಕನಸು ಕಂಡಿರಬೇಕು ಎಂದು ಲೇವಡಿ ಮಾಡಿದರು.

ಮೂರನೇ ನಾಯಕರೂ ಹುಟ್ಟಿಕೊಂಡಿದ್ದಾರೆ: ಕಾಂಗ್ರೆಸ್‌ ನಲ್ಲಿ ಇಬ್ಬರು ನಾಯಕರಿದ್ದಾರೆ, ಕೆಲವರು ಡಿ.ಕೆ. ಶಿವಕುಮಾರ್‌ ಅವರನ್ನು ಬಯಸುತ್ತಿದ್ದರೆ, ಮತ್ತೆ ಕೆಲವರು ಸಿದ್ದರಾಮಯ್ಯ ಪರ ಇದ್ದಾರೆ. ಈಗ ಮೂರನೇಯವರೂ ಹುಟ್ಟಿಕೊಂಡಿದ್ದು, ಮಲ್ಲಿಕಾರ್ಜುನ ಖರ್ಗೆರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು ಎಂದು ಮತ್ತೊಂದು ಗುಂಪು ಪ್ರಶ್ನಿಸುತ್ತಿದೆ. ಅಲ್ಲದೆ 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಹಿರಿಯ ನಾಯಕ ಪರಮೇಶ್ವರ್‌ ಅವರನ್ನು ಯಾಕೆ ಮೂಲೆಗುಂಪು ಮನಾಡಿದರು ಎಂಬ ಬಗ್ಗೆಯೂ ಪ್ರಶ್ನೆಗಳಿದ್ದು, ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ದಲಿತರ ಮತ ಪಡೆಯುತ್ತಾರೆ, ಅವರಿಗೆ ನ್ಯಾಯ ಒದಗಿಸಿಲ್ಲ ಎಂಬ ಆರೋಪಗಳೂ ಇವೆ ಎಂದರು.

ಫೆಬ್ರವರಿಯಲ್ಲಿ ಪ್ರಧಾನಿ ಜಿಲ್ಲೆಗೆ: ನಮ್ಮದೇ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ ವೈದ್ಯಕೀಯ ಕಾಲೇಜು ಈಗ ಉದ್ಘಾಟನೆಗೆ ಸಿದ್ಧವಾಗಿದ್ದು, ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದೆ. ಪ್ರಧಾನಿಯವರನ್ನು ಕಾಣಲು ಜಿಲ್ಲೆಯ ಲಕ್ಷಾಂತರ ಜನರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

Kalaburagi: ಯುವಕರೇ ಸಂಸ್ಕೃತಿಯ ರಕ್ಷಕರು: ನಟ ಸುಚೇಂದ್ರ ಪ್ರಸಾದ್

ಅಲ್ಪಸಂಖ್ಯಾತರ ನಿರ್ಲಕ್ಷ್ಯ ಕಾಂಗ್ರೆಸ್‌ ಷಡ್ಯಂತ್ರ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಕಾಂಗ್ರೆಸ್‌ ಷಡ್ಯಂತ್ರ ಎಂದು ಸಚಿವ ಸುಧಾಕರ್‌ ಹೇಳಿದರು. ಇತ್ತೀಚೆಗೆ ಪ್ರಕಟವಾದ ಪದ್ಮ ಪ್ರಶಸ್ತಿಗಳಲ್ಲಿ ರಾಜ್ಯಕ್ಕೆ 8 ಪ್ರಶಸ್ತಿ ಲಭಿಸಿದ್ದು, ಇದರಲ್ಲಿ ಇಬ್ಬರು ಅಲ್ಪಂಸಂಖ್ಯಾತರಾಗಿದ್ದಾರೆ. ಪ್ರಧಾನಿಯವರಾಗಲೀ, ಬಿಜೆಪಿಯಾಗಲೀ ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ ಹೊಂದಿಲ್ಲ. ಅಲ್ಪಸಂಖ್ಯಾತರ ಮತ ಪಡೆಯುವ ಹುನ್ನಾರದಿಂದ ಕಾಂಗ್ರೆಸ್‌ ಮಾಡಿರುವ ಷಡ್ಯಂತ್ರ ಹೇಳಿಕೆ ಎಂದರು.

Follow Us:
Download App:
  • android
  • ios