ಡಿಕೆಶಿ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಸಚಿವ ಅಶ್ವತ್ಥ ನಾರಾಯಣ್
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧ ಶುದ್ಧ ಮಾಡುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್, ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ರೀತಿ ಆಗಿದೆ ಎಂದು ಲೇವಡಿ ಮಾಡಿದ್ದಾರೆ.
ಶಿವಮೊಗ್ಗ (ಜ.26): ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿಧಾನಸೌಧ ಶುದ್ಧ ಮಾಡುತ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್, ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ರೀತಿ ಆಗಿದೆ ಎಂದು ಲೇವಡಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಎನ್ನುವುದು ಡಿ.ಕೆ. ಶಿವಕುಮಾರ್ ಅವರ ಕಣ ಕಣದಲ್ಲೂ ಅಡಗಿ ಕುಳಿತಿದೆ. ಅವರು ಮೊದಲು ಗಂಗಾಜಲ, ಗೋಮೂತ್ರ ಬಳಸಿ, ಸ್ನಾನ ಮಾಡಿಕೊಂಡು ಬರಲಿ. ಶಿವಕುಮಾರ್ ತಮ್ಮನ್ನು ತಾವು ದೈಹಿಕವಾಗಿ ಅಲ್ಲ, ಮಾನಸಿಕವಾಗಿಯೂ ಶುದ್ಧ ಮಾಡಿಕೊಳ್ಳಲಿ ಎಂದು ಛೇಡಿಸಿದರು.
ಭ್ರಷ್ಟಾಚಾರ ಹುಟ್ಟು ಹಾಕಿದ ಪಕ್ಷವೇ ಕಾಂಗ್ರೆಸ್. ಅವರ ಸರ್ಕಾರವಿದ್ದಾಗ ಮಧ್ಯವರ್ತಿಗಳ ಹಾವಳಿ ಇತ್ತು. ಅವರ ಕಾಲದಲ್ಲಿ 100 ರು. ಕೊಟ್ಟರೆ 20 ರು. ತಲುಪುತ್ತಾ ಇರಲಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೂರಕ್ಕೆ ನೂರು ರು. ತಲುಪುವಂತೆ ಮಾಡಿದೆ. ಆಡಳಿತ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ಹಸ್ತಕ್ಷೇಪ ಇಲ್ಲದೆ, ಅಧಿಕಾರ ವಿಕೇಂದ್ರೀಕರಣವನ್ನು ಬಿಜೆಪಿ ಮಾಡುತ್ತಿದೆ ಎಂದರು. ಮುಸ್ಲಿಂರನ್ನು ಜೊತೆಗೆ ಕರೆದೊಯ್ಯಲು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ತುಷ್ಟಿಕರಣ ಮಾಡಿ, ವಾತಾವರಣ ಹಾಳು ಮಾಡಿದೆ.
ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾರ್ಷಿಕ ಘಟಿಕೋತ್ಸವ: ಸಚಿವ ಅಶ್ವಥ್ ಭಾಗಿ
ಆದರೆ ನಾವು ಆ ರೀತಿ ತುಷ್ಟಿಕರಣ ರಾಜಕಾರಣ ಮಾಡುವುದಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಕಾಯ್ದೆ ವಿರೋಧಿಸುವುದನ್ನು ಬಿಟ್ಟರೆ ಬೇರೆ ಮಾತನಾಡಲಿಲ್ಲ. ಆ ಧೈರ್ಯ ಕೂಡ ಕಾಂಗ್ರೆಸ್ ನಾಯಕರಿಗೆ ಇರಲಿಲ್ಲ. ಗೊಂದಲ ಸೃಷ್ಟಿಸುವ ಕೆಲಸ ಆ ಸಂದರ್ಭದಲ್ಲಿ ಮಾಡಿದ್ದರು ಎಂದು ದೂರಿದರು. ವಂಶಪಾರಂಪರ್ಯ ರಾಜಕಾರಣ ಕುರಿತು ಮಾತನಾಡಿದ ಅವರು, ಕುಟುಂಬ ರಾಜಕೀಯಕ್ಕೆ ಬಿಜೆಪಿ ವಿರುದ್ಧವಾಗಿದೆ. ನಮಗೆ ಧ್ಯೇಯೋದ್ಧೇಶ ಇವೆ. ಗುರಿ ಸ್ಪಷ್ಟವಾಗಿದ್ದು, ಆ ನಿಟ್ಟಿನಲ್ಲಿ ಹೆಜ್ಜೆ ಇಡಲು ಸಿದ್ಧರಿದ್ದೇವೆ. ಮುಂಬರುವ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಆದ್ಯತೆ ಇಲ್ಲ. ಜಾತಿ ರಾಜಕಾರಣ ದೂರ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಪಕ್ಷಗಳು ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಪ್ರಯತ್ನ ನಡೆಸುತ್ತಿವೆ. ಬಸ್ ಹತ್ತಿಕೊಂಡು ಕೆಲವರು ಹೋಗುತ್ತಿದ್ದಾರೆ. ಆದರೆ ನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂಬ ಪಣ ತೊಟ್ಟಿದ್ದೇವೆ. ಶೇ. 50ಕ್ಕೂ ಅಧಿಕ ಮತ ಪಡೆಯಲು ಬಿಜೆಪಿ ಸಂಘಟನೆಯನ್ನು ಮತ್ತಷ್ಟುಬಲಪಡಿಸುತ್ತಿದೆ ಎಂದರು. ಕಾಂಗ್ರೆಸ್ ಮುಖಂಡರು ತಮಗೆ ಯೋಗ್ಯತೆ ಇಲ್ಲದೆ ಬಿಬಿಸಿ ಸಂಸ್ಥೆಯಿಂದ ಡಾಕ್ಯುಮೆಂಟರಿ ಮಾಡಿಸಿ ಅದನ್ನು ಬಿಡುಗಡೆ ಗೊಳಿಸಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್‌ನವರಿಗೆ ಸಂವಿಧಾನದಲ್ಲಿ, ನ್ಯಾಯಾಲಯದಲ್ಲಿ ನಂಬಿಕೆ ಇಲ್ಲವಾಗಿದೆ.
ಕೌಶಲ್ಯ ರಹಿತ ಶಿಕ್ಷಣ ಲಾಭದಾಯಕವಲ್ಲ: ಸಚಿವ ಅಶ್ವತ್ಥ ನಾರಾಯಣ್
ದೇಶದ ಆಂತರಿಕ ವಿಚಾರಗಳನ್ನು ವಿದೇಶದ ಬಿಬಿಸಿ ವಾಹಿನಿಗೆ ತೆಗೆದುಕೊಂಡು ಹೋಗುವ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಬಾರದಿತ್ತು ಎಂದು ಬೇಸರಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಪ್ರಮುಖರಾದ ಭಾನುಪ್ರಕಾಶ್, ಆರ್.ಕೆ. ಸಿದ್ರಾಮಣ್ಣ, ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಶಿವರಾಜ್, ಪಾಲಿಕೆ ಮೇಯರ್ ಶಿವಕುಮಾರ್, ಜಗದೀಶ್, ಕೆ.ವಿ. ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.