Asianet Suvarna News Asianet Suvarna News

ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್‌ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್‌

ಕಾವೇರಿ ಹೆಸರಿನಲ್ಲಿ ಬಿಜೆಪಿ - ಜೆಡಿಎಸ್‌ ಪಕ್ಷಗಳು ರಾಜಕೀಯ ಮಾಡಲು ಹೊರಟಿವೆ. ಜನರು ಬುದ್ದಿವಂತರಿದ್ದು, ಅವರಿಗೆ ಎಲ್ಲವೂ ತಿಳಿದಿದೆ. ಕಾವೇರಿ ವಿವಾದ ಒಂದು ಸರ್ಕಾರಕ್ಕೆ ಸೀಮಿತವಾಗಿಲ್ಲ. ಅದು ಈ ಹಿಂದಿನ ಸಿಎಂ ಆಗಿದ್ದವರಿಗೂ ತಿಳಿದಿದೆ. ಕಾವೇರಿ ಪ್ರಾಧಿಕಾರದ ರಚನೆ ಬಳಿಕ ಸುಪ್ರೀಂಕೋರ್ಟ್, ಉಭಯ ರಾಜ್ಯಗಳ ಸರ್ಕಾರ, ಕೇಂದ್ರ ಸರ್ಕಾರಗಳ ಪಾಲು ಅದರಲ್ಲಿದೆ. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದೇವೆ: ಸಚಿವ ದಿನೇಶ್‌ ಗುಂಡೂರಾವ್‌ 

Minister Dinesh Gundu Rao Slams BJP JDS grg
Author
First Published Sep 28, 2023, 7:11 AM IST

ರಾಮನಗರ(ಸೆ.28): ವಿರೋಧ ಮಾಡುವುದೇ ವಿರೋಧ ಪಕ್ಷದ ಕೆಲಸ. ಕಾವೇರಿ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ರಾಜಕೀಯ ಲಾಭಕ್ಕಾಗಿ ಈ ಕೆಲಸ‌ ಮಾಡುತ್ತಿರಬಹುದು. ಆದರೆ, ಇದರಲ್ಲಿ ಅವರಿಗೆ ರಾಜಕೀಯ ಪ್ರತಿಫಲ ದೊರೆಯುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಹೆಸರಿನಲ್ಲಿ ಬಿಜೆಪಿ - ಜೆಡಿಎಸ್‌ ಪಕ್ಷಗಳು ರಾಜಕೀಯ ಮಾಡಲು ಹೊರಟಿವೆ. ಜನರು ಬುದ್ದಿವಂತರಿದ್ದು, ಅವರಿಗೆ ಎಲ್ಲವೂ ತಿಳಿದಿದೆ. ಕಾವೇರಿ ವಿವಾದ ಒಂದು ಸರ್ಕಾರಕ್ಕೆ ಸೀಮಿತವಾಗಿಲ್ಲ. ಅದು ಈ ಹಿಂದಿನ ಸಿಎಂ ಆಗಿದ್ದವರಿಗೂ ತಿಳಿದಿದೆ. ಕಾವೇರಿ ಪ್ರಾಧಿಕಾರದ ರಚನೆ ಬಳಿಕ ಸುಪ್ರೀಂಕೋರ್ಟ್, ಉಭಯ ರಾಜ್ಯಗಳ ಸರ್ಕಾರ, ಕೇಂದ್ರ ಸರ್ಕಾರಗಳ ಪಾಲು ಅದರಲ್ಲಿದೆ. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಅಕ್ಟೊಂಬರ್ ವರೆಗೂ ಅಷ್ಟೆ ನಮ್ಮಲ್ಲಿ ಮಳೆಯಾಗಬಹುದು. ಹೀಗಾಗಿ ಕನಿಷ್ಠ ಮಟ್ಟದಲ್ಲಿ ನೀರು ಬಿಡುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಒಗ್ಗಟ್ಟಿಂದ ಮಾತನಾಡಿ: ಸಚಿವ ದಿನೇಶ್ ಗುಂಡೂರಾವ್‌

ಹೋರಾಟಗಾರರ ಪರವಾಗಿ ನಮ್ಮ ಸರ್ಕಾರವೂ ಇದೆ. ಜನಪರ ಹೋರಾಟ ನಡೆಯುವುದೇ ಇದರ ಮೂಲ ಉದ್ದೇಶವಾಗಿರಲಿ. ಯಾವ ಬಂದ್ ಅನ್ನು ಕಾನೂನಿನ ಪ್ರಕಾರ ಮಾಡುವಂತಿಲ್ಲ. ಜನಪರ ಹೋರಾಟವಾಗಿದ್ದರಿಂದ ಶಾಂತಿಯುತ ಹೋರಾಟ ನಡೆಯಬೇಕು. ತಮಿಳುನಾಡಿನ ಬೇಡಿಕೆಯನ್ನೂ ಸಹ ನಿರ್ವಹಣಾ ಪ್ರಾಧಿಕಾರ ಈಡೇರಿಸಿಲ್ಲ. ಪ್ರಾಧಿಕಾರ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಹೇಳಿರುವುದು ನಮಗೂ ಒಳ್ಳೆಯದೇ ಆಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ನಡೆಯಬೇಕಿದೆ ಎಂದು ಹೇಳಿದರು.

ನಮ್ಮ ಸಲಹೆ ಸ್ವೀಕರಿಸಿದ್ರೆ ನೀರು ಉಳಿಯುತ್ತಿತ್ತು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್‌, ಇದರಲ್ಲಿ ಯಾವುದೇ ಗಾಂಭೀರ್ಯತೆ ಇಲ್ಲ. ಜನರ ಒಳಿತಿಗೆ ಅವರೇ ಸಲಹೆ ನೀಡಬಹುದಿತ್ತು. ಅದನ್ನು ನಾವೇ ಕೇಳಬೇಕಿತ್ತಾ? ಅವರು ಮಾಧ್ಯಮಕ್ಕೆ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ.

ರಾಜಕೀಯ ಹೇಳಿಕೆಗೆ ಒದನ್ನು ಬಳಸಿಕೊಳ್ಳಬಾರದು. ಕಾವೇರಿ ವಿಚಾರದಲ್ಲಿ ಎಲ್ಲರದ್ದೂ ಪಾತ್ರ ಇದೆ ಎಂದು ಟಾಂಗ್‌ ನೀಡಿದರು.

ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯ ಪ್ರವೇಶ ಮಾಡಬೇಕು. ನಮ್ಮ ಭೇಟಿಗೂ ಅವರು ಅವಕಾಶ ನೀಡಿಲ್ಲ. ದೆಹಲಿಗೆ ಹೋದ್ರೂ ಸಮಯ ನಿಗದಿ ಪಡಿಸುತ್ತಿಲ್ಲ. ನಮ್ಮ ರಾಜ್ಯದ ಸಂಸದರು ಏನು ಮಾಡುತ್ತಿಲ್ಲ. ಕೇವಲ ರಾಜಕೀಯ ಹೇಳಿಕೆ ಕೊಡುತ್ತಾ ಕೂತಿದ್ದಾರೆ ಎಂದು ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು. ಶಾಸಕ ಇಕ್ಬಾಲ್‌ ಹುಸೇನ್‌, ಮಾಜಿ ಶಾಸಕ ಕೆ.ರಾಜು ಮತ್ತಿತರರು ಹಾಜರಿದ್ದರು.

ಬಿಜೆಪಿಗೂ ಜೆಡಿಎಸ್‌ ಮೈತ್ರಿ ಕಹಿ ಅನುಭವ ಆಗಲಿದೆ

ಜೆಡಿಎಸ್‌ ಜೊತೆ ಮೈತ್ರಿಕೊಂಡು ನಾವು ಕಹಿ ಅನುಭವ ನೋಡಿದ್ದೇವೆ. ಅದೇ ಅನುಭವ ಈಗ ಮೈತ್ರಿ ಮಾಡಿಕೊಂಡಿರುವವರು ಅನುಭವಿಸಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟೀಕಿಸಿದರು. ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಾವು ಹಿಂದೆ ಮೈತ್ರಿ ಮಾಡಿ ಅನುಭವಿಸಿದ್ದೆವೆ. ನಮಗೆ ಆ ಮೈತ್ರಿ ಬೇಡ ಅಂತ ದೂರ ಉಳಿದಿದ್ದೇವೆ ಎಂದರು. ಈ ಹಿಂದೆ ಮೈತ್ರಿಯ ಕಹಿ ಅನುಭವ ನೋಡಿದ್ದೇವೆ. ಈಗ ಮೈತ್ರಿ ಮಾಡಿಕೊಂಡಿರುವವರು ಅನುಭವಿಸಲಿದ್ದಾರೆ. ಈ ಮೈತ್ರಿ ಜೆಡಿಎಸ್ ಪಕ್ಷದ ಕೊನೆ ಹಂತ ಎನ್ನಬಹುದು ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ 780 ವೈದ್ಯರ ನೇಮಕಾತಿ

ಆರೋಗ್ಯ ಇಲಾಖೆಯಲ್ಲಿ ಸರಿಯಾದ ಸಮಯಕ್ಕೆ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಶೀಘ್ರದಲ್ಲಿಯೇ ಕಲ್ಯಾಣ ಕರ್ನಾಟಕಕ್ಕೆ 280 ಸೇರಿದಂತೆ 780 ವೈದ್ಯರನ್ನು ನೇಮಕಾತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛ ಆಸ್ಪತ್ರೆ - ನಮ್ಮ ಆದ್ಯತೆ ಅಭಿಯಾನಕ್ಕೆ ಚಾಲನೆ ನೀಡಿದ ತರುವಾಯ ಆಸ್ಪತ್ರೆಯ ಸ್ವಚ್ಛತೆ ಹಾಗೂ ಸಿಬ್ಬಂದಿ ಕುರಿತು ಮಾಹಿತಿ ಸಂಗ್ರಹಿಸಿದ ಸಚಿವ ದಿನೇಶ್‌ ಗುಂಡೂರಾವ್‌ , ವೈದ್ಯರ ನೂರರಷ್ಟು ನೇಮಕಾತಿಗಳು ನಡೆಯಲಿವೆ. ಅಲ್ಲದೆ, ಇತರೆ ಅಧಿಕಾರಿಗಳ ನೇಮಕದ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಪಿಸಿಪಿಎನ್ ಡಿಟಿ ಆಕ್ಟ್ ಬಗ್ಗೆ ಕಟ್ಟುನಿಟ್ಟಿನ ಸೂಚನೆ ಇದೆ. ಸೆಕ್ಸ್ ರೇಷಿಯೋ ಕಡಿಮೆ ಇದೆ. ಲಿಂಗ ಪತ್ತೆಗೆ ಅವಕಾಶ ಇಲ್ಲ. ಲಿಂಗ ಪತ್ತೆ ನಡೆಸುವ ಆಸ್ಪತ್ರೆಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ನೈರ್ಮಲ್ಯ ಉದ್ದೇಶ ನಮ್ಮದು. ಆಸ್ಪತ್ರೆಗೆ ಜನರಿಗೆ ಇರುಸು ಮುರುಸು ಉಂಟು ಮಾಡಬಾರದು. ಹಳೆ ಪರಿಕರಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಆಸ್ಪತ್ರೆಯ ತ್ಯಾಜ್ಯ ವಿಲೇ ಬಗ್ಗೆಯು ಕಾಳಜಿ ವಹಿಸಿದ್ದೇವೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ತಜ್ಞ ವೈದ್ಯರು, ಶುಶೂಷ್ರ ಅಧಿಕಾರಿಗಳ, ಗ್ರೂಪ್ ಡಿ, ನರ್ಸ್ ಗಳ ಕೊರತೆ ಇದೆ. ಇಲ್ಲಿ ಆಸ್ಪತ್ರೆ ದೊಡ್ಡದಿದ್ದರೂ, ಸಿಬ್ಬಂದಿಗಳಿಲ್ಲ. ಕಡ್ಡಾಯವಾಗಿ ಗ್ರಾಮೀಣ ಸೇವೆಯಲ್ಲಿನ ವೈದ್ಯರನ್ನು ಸೇವೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯು ಸಿಬ್ಬಂದಿ ಕೊರತೆ ಇದೆ. ಇದರಿಂದ ಸೇವೆಗಳು ವ್ಯತ್ಯಯಗೊಂಡಿವೆ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು. ಶಾಸಕ ಇಕ್ಬಾಲ್‌ ಹುಸೇನ್‌, ಮಾಜಿ ಶಾಸಕ ಕೆ.ರಾಜು, ಜಿಪಂ ಸಿಇಒ ದಿಗ್ವಿಜಯ್‌ ಬೋಡ್ಕೆ, ಜಿಲ್ಲಾ ಆರೋಗ್ಯಾಧಿಕಾರಿ ಕಾಂತರಾಜು, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಪದ್ಮಾ ಮತ್ತಿತರರು ಹಾಜರಿದ್ದರು.

ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ-ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ

ಸ್ವಚ್ಛ ಆಸ್ಪತ್ರೆ-ನಮ್ಮ ಆದ್ಯತೆ ಅಭಿಯಾನದ ಮೂಲಕ ರಾಜ್ಯಾದ್ಯಂತ ಎಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಇರುವ ವ್ಯವಸ್ಥೆಗಳು ಹಾಗೂ ಸ್ವಚ್ಛತೆಯ ದೃಷ್ಟಿಯಿಂದ ಆಸ್ಪತ್ರೆಯ ವಾತಾವರಣದ ಕುರಿತು ವಿಶೇಷವಾಗಿ ಹೆಚ್ಚು ಗಮನಕೊಟ್ಟು, ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮಾಹೆಯ ಮೂರನೇ ಶನಿವಾರದಂದು ಆಸ್ಪತ್ರೆಯ ಎಲ್ಲಾ ವೈದ್ಯರು, ಸಿಬ್ಬಂದಿಗಳೆಲ್ಲರೂ ಸೇರಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಆರೋಗ್ಯ ಕರ್ನಾಟಕ ಅಡಿಯಲ್ಲಿ ಆಯುಷ್ಮಾನ್ ಭವ 3.0 ಅಭಿಯಾನ ಸ್ವಚ್ಛ ಆಸ್ಪತ್ರೆ-ನಮ್ಮ ಆದ್ಯತೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಸ್ಪತ್ರೆಯಲ್ಲಿ ಶೌಚಾಲಯ, ಸ್ಯಾನಿಟರಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೊರ ಹಾಗೂ ಒಳ ವಾತಾವರಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿ ಚಿಕಿತ್ಸೆಯನ್ನು ನೀಡಬೇಕು ಎಂದರು.
ರಕ್ತದಾನ ಶಿಬಿರ, ಜನರಿಗೆ ಆಸ್ಪತ್ರೆಯ ಕುರಿತು ಮಾಹಿತಿ ತಿಳಿಸುವ ಕೆಲಸ, ಸಾಂಕ್ರಾಮಿಕ ರೋಗಗಳು ಹರಡುವ ಕುರಿತು ಸಿಬ್ಬಂದಿಗಳು, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ರಾಜ್ಯಾದ್ಯಂತ ಈ ಅಭಿಯಾನವನ್ನು ಮಾಡಲು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರು, ನರ್ಸ್ ಗಳು, ವೈದ್ಯರು, ತಜ್ಞವೈದ್ಯರ ಹುದ್ದೆಗಳು ಖಾಲಿ ಇವೆ. ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿದೆ ಎಂದರು.

ಹಳೇ ಆಸ್ಪತ್ರೆಗೆ ಬೇಕಾಗಿರುವ ತಜ್ಞ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಹ ಭರ್ತಿ ಮಾಡಲು ಕ್ರಮ ವಹಿಸಲಾಗುವುದು. ಜನರಿಗೆ ಉಚಿತವಾಗಿ ಎಂ.ಆರ್.ಐ ಸ್ಕ್ಯಾನಿಂಗ್ ಅನ್ನು ಮಾಡಲು ಜಿಲ್ಲಾ ಆಸ್ಪತ್ರೆಗೆ ಆದಷ್ಟು ಬೇಗ ಎಂ.ಆರ್.ಐ ಸ್ಕ್ಯಾನಿಂಗ್‌ ಮಿಷನ್ ಹಾಗೂ ಸಲಕರಣೆಗಳನ್ನು ನೀಡಲಾಗುವುದು ಎಂದು ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಿ: ಸಚಿವ ದಿನೇಶ್‌ ಗುಂಡೂರಾವ್‌

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ನಮ್ಮ ಆರೋಗ್ಯವನ್ನು ಕಾಪಾಡಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಈ ಅಭಿಯಾನ ಕೈಗೊಂಡಿರುತ್ತದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ, ಸಲಕರಣೆಗಳ ಕುರಿತು ಹಾಗೂ ಹಳೆಯ ಆಸ್ಪತ್ರೆಯನ್ನು ಮುಂದುವರೆಸುವಂತೆ ಸಚಿವರಲ್ಲಿ ಮನವಿ ಮಾಡಿದ ಶಾಸಕರು, ಆಸ್ಪತ್ರೆ ಕುರಿತು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೆಚ್ಚಿನ ರೀತಿಯಲ್ಲಿ ಆಸಕ್ತಿ ವಹಿಸಿ ಕೆಲಸ ನಿರ್ವಹಿಸುವಂತೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಇಂದೂಮತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಾಂತರಾಜು, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಪದ್ಮಾ ಹಾಜರಿದ್ದರು.

Follow Us:
Download App:
  • android
  • ios