ದಲಿತ ಸಿಎಂ ಮಾಡುತ್ತೇವೆಂದು ತಮ್ಮ ಮಕ್ಕಳ ಮೇಲೆ ಸಿದ್ದು ಪ್ರಮಾಣ ಮಾಡಲಿ: ಶ್ರೀರಾಮುಲು
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಣೆ ಪ್ರಮಾಣದ ಮಾತುಗಳನ್ನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾಂಗ್ರೆಸ್‌ನಿಂದ ದಲಿತರನ್ನು ಸಿಎಂ ಮಾಡುತ್ತೇವೆ ಎಂದು ತಮ್ಮ ಮಕ್ಕಳ ಮೇಲೆ ಆಣೆ, ಪ್ರಮಾಣ ಮಾಡುತ್ತಾರಾ? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ.
ಬಳ್ಳಾರಿ (ಏ.28): ಮಾಜಿ ಪ್ರಧಾನಿ ದೇವೇಗೌಡರು (HD Devegowda) ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಆಣೆ ಪ್ರಮಾಣದ ಮಾತುಗಳನ್ನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah), ಕಾಂಗ್ರೆಸ್‌ನಿಂದ (Congress) ದಲಿತರನ್ನು ಸಿಎಂ (Dalit CM) ಮಾಡುತ್ತೇವೆ ಎಂದು ತಮ್ಮ ಮಕ್ಕಳ ಮೇಲೆ ಆಣೆ, ಪ್ರಮಾಣ ಮಾಡುತ್ತಾರಾ? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು (B Sriramulu) ಸವಾಲು ಹಾಕಿದ್ದಾರೆ.
ದೇವೇಗೌಡರು ಈ ದೇಶದ ಪ್ರಧಾನಮಂತ್ರಿಯಾದವರು. ಅವರ ಬಗ್ಗೆಯೇ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುತ್ತಾರೆ. ರಾಜಕೀಯ ವಿಚಾರದಲ್ಲಿ ತಾಯಿ, ಮಕ್ಕಳ ಮೇಲೆ ಆಣೆ ಮಾಡಿ ಎಂದು ಕೀಳು ಮಟ್ಟದ ಮಾತುಗಳನ್ನಾಡುತ್ತಾರೆ. ಹಾಗಾದರೆ ಈ ಸಿದ್ದರಾಮಯ್ಯ ತನ್ನ ಮಕ್ಕಳ ಮೇಲೆ ಪ್ರಮಾಣ ಮಾಡುತ್ತಾರಾ ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಿಲ್ಲದ ಪಕ್ಷವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಅಧಿಕಾರವಿಲ್ಲದೆ ವಿಚಲಿತರಾಗಿರುವ ಕಾಂಗ್ರೆಸ್‌ನ ಸಿದ್ದರಾಮಯ್ಯನಂತಹ ನಾಯಕರು ಆಣೆ ಪ್ರಮಾಣದ ಮಾತುಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
Ballari ಉಚಿತ ಆರೋಗ್ಯ ಮೇಳಕ್ಕೆ ಶ್ರೀ ರಾಮುಲು ಚಾಲನೆ
ಮುಂಬರುವ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯಿಂದ ಸಮೀಕ್ಷೆ ನಡೆಯುತ್ತಿದೆ. ಎಷ್ಟುಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಬಹುದು. ಯಾರಿಗೆ ಸೋಲಾಗಬಹುದು ಎಂಬಿತ್ಯಾದಿ ಮಾಹಿತಿ ಸಮೀಕ್ಷೆಯಿಂದ ಗೊತ್ತಾಗಲಿದೆ. ನಾನಾಗಿಯೇ ಯಾವುದೇ ವಿಶೇಷವಾಗಿ ಸಮೀಕ್ಷೆ ಮಾಡಿಸುತ್ತಿಲ್ಲ. ಪಕ್ಷದಿಂದ ನಡೆಯುತ್ತಿದೆ. ಬರುವ ಚುನಾವಣೆಯಲ್ಲಿ ನಾನು ಬಳ್ಳಾರಿಯಿಂದ ಸ್ಪರ್ಧಿಸಬೇಕು ಎಂಬ ಆಸೆ ಇರಬಹುದು. ಪಕ್ಷ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಸೂಚಿಸುತ್ತದೆಯೋ ಅಲ್ಲಿಂದಲೇ ಸ್ಪರ್ಧಿಸುವೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್‌ನಿಂದ ಕೋಮುಗಲಭೆ ಸೃಷ್ಟಿ: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ (Communal Riots) ಕಾಂಗ್ರೆಸ್ ಕಾರಣ. ಚುನಾವಣೆ ವರ್ಷವಾಗಿರುವುದರಿಂದ ಕಾಂಗ್ರೆಸ್‌ನವರು ವಿನಾಕಾರಣ ರಾಜ್ಯದಲ್ಲಿ (Karnataka) ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ದೂರಿದರು. ನಗರದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿದೆ. ಹೀಗಾಗಿ ರಾಜ್ಯಾದ್ಯಂತ ಗಲಭೆಗಳನ್ನು ಸೃಷ್ಟಿಸುತ್ತಿದೆ. ಹಿಂದು-ಮುಸ್ಲಿಂ (Hindu-Muslim) ಸಮುದಾಯದ ನಡುವೆ ಕೋಮುವಾದದ ವಿಷಬೀಜ ಬಿತ್ತುತ್ತಿರುವುದೇ ಕಾಂಗ್ರೆಸ್ ಹೊರತು ಬಿಜೆಪಿಯಲ್ಲ. ಕಾಂಗ್ರೆಸ್ಸಿನವರ ಮಾತಿಗೆ ಯಾರೂ ಮರುಳಾಗಬಾರದು.
ಪರಿಶಿಷ್ಟರ ಮೀಸಲು ಹೆಚ್ಚಳಕ್ಕಾಗಿ ರಾಜೀನಾಮೆಗೂ ಸಿದ್ಧ: ಸಚಿವದ್ವಯರ ಘೋಷಣೆ
ಬಿಜೆಪಿ (BJP) ಕಾರ್ಯಕರ್ತರು ಸಹ ಎಚ್ಚರಿಕೆಯಿಂದ ಇರಬೇಕು ಎಂದರು. ಗೃಹಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಗಲಭೆಗಳನ್ನು ನಿಯಂತ್ರಿಸುತ್ತಿದ್ದಾರೆ. ಕೆಜಿ ಹಳ್ಳಿ, ಡಿಜಿ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಗಲಭೆಗಳ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿದೆ. ಈ ಎಲ್ಲ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ ಎಂದರು. ಪಿಎಸ್‌ಐ ಅಕ್ರಮ ನೇಮಕಾತಿಯನ್ನು ಕಂಡು ಹಿಡಿದಿದ್ದೇ ನಮ್ಮ ಸರ್ಕಾರ. ಕಾಂಗ್ರೆಸ್ಸಿನವರು ಅಧಿಕಾರದಲ್ಲಿದ್ದಾಗ ಈ ರೀತಿಯ ಪ್ರಕರಣಗಳಿಗೆ ತನಿಖೆ ಮಾಡಿಸಲಿಲ್ಲ. ಪಿಎಸ್‌ಐ ನೇಮಕಾತಿ ಅಕ್ರಮವನ್ನು ನಾವೇ ಕಂಡು ಹಿಡಿದು ನಾವೇ ತನಿಖೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.