* ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನಸಂಖ್ಯೆ ಆಧಾರದ ಅನ್ವಯ ಮೀಸಲಾತಿ ಹೆಚ್ಚಿಸಬೇಕು* ಹೋರಾಟಗಾರರ ಮನವೊಲಿಸಿ ಮನವಿಪತ್ರ ಸ್ವೀಕರಿಸಿದ ಆನಂದ ಸಿಂಗ್‌, ಶ್ರೀರಾಮುಲು* ಸಿಎಂ ಬರಲೇಬೇಕು ಎಂದು ಪ್ರತಿಭಟನಾಕಾರರ ಪಟ್ಟು

ಹೊಸಪೇಟೆ(ಏ18): ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಜನಸಂಖ್ಯೆ ಆಧಾರದ ಅನ್ವಯ ಮೀಸಲಾತಿ ಹೆಚ್ಚಿಸಬೇಕು. ನ್ಯಾ. ನಾಗಮೋಹನ ದಾಸ್‌ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಹಾಗು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಸಮಸ್ಯೆ ಬಗೆಹರಿಯದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದೂ ಪ್ರಕಟಿಸಿದರು.

ನಗರದ ಬಸ್‌ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಲೇಬೇಕು ಎಂದು ಪಟ್ಟು ಹಿಡಿದರು. ಎಸ್ಟಿಸಮುದಾಯಕ್ಕೆ ಶೇ.7.5ರಷ್ಟುಮೀಸಲು ಹೆಚ್ಚಿಸಬೇಕು. ಇನ್ನೂ ಎಸ್ಸಿ ಸಮುದಾಯಕ್ಕೆ ಶೇ.17ರಷ್ಟುಮೀಸಲು ಹೆಚ್ಚಿಸಬೇಕು. ಮೀಸಲಾತಿ ಹೆಚ್ಚಳಕ್ಕೆ ನ್ಯಾ. ನಾಗಮೋಹನ ದಾಸ್‌ ಆಯೋಗ ಈಗಾಗಲೇ ವರದಿ ಕೂಡ ನೀಡಿದೆ. ಹೀಗಿದ್ದರೂ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಬಿಜೆಪಿ ಶಾಸಕ ಯತ್ನಾಳರನ್ನ ಪರೋಕ್ಷವಾಗಿ ರಾಕ್ಷಸ ಎಂದ ಸ್ವಾಮೀಜಿ

ಈ ವೇಳೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ನಾನು ಕೂಡ ಬಹಳ ರೋಷಾವೇಷವಾಗಿ ಮಾತನಾಡುವ ವ್ಯಕ್ತಿ. ನಾನು ಕೂಡ ರೋಡಿಗಿಳಿದ್ರೆ ನಿಮಗಿಂತ ಕೆಟ್ಟವನು. ನಾನು ಪರಿಸ್ಥಿತಿ ಸರಿ ಇಲ್ಲಾ ಅಂತ ಸುಮ್ಮನಿದ್ದೇನೆ. ಬಿಳಿ ಪಂಚೆ, ಬಿಳಿ ಶರ್ಚ್‌ ಉಟ್ಟುಕೊಂಡು ಇದ್ದೀನಿ ಅಂತ ಸ್ವಾಮೀಜಿ ಅಂತ ತಿಳ್ಕೋಬೇಡಿ, ನಾನು ನಿಮ್ಮ ಜಾತಿಯಲ್ಲೇ ಹುಟ್ಟಿದ್ದೇನೆ, ನನಗೂ ರೋಷಾಾವೇಷ ಇದೆ. ನಾನು ನಿಮ್ಮ ಜಾತಿಯಲ್ಲಿ ಹುಟ್ಟಿಲ್ಲಾ ಅಂತ ಅಲ್ಲಿ ಮೊಳಕಾಲ್ಮೂರಿನಲ್ಲಿ ಹೇಳ್ತಾರೆ ಎಂದು ಶ್ರೀರಾಮುಲು ಹೇಳಿದರು.

ರಾಜೀನಾಮೆ ಕೊಡುವೆ:

ನನ್ನ ರಾಜೀನಾಮೆಯಿಂದ ಮೀಸಲಾತಿ ಸಮಸ್ಯೆ ಸರಿ ಹೋಗುತ್ತೆ ಅನ್ನೋದಾದ್ರೆ ನಾಲ್ಕನೇ ಮೆಟ್ಟಿಲು ಇಳಿಯೊದರೊಳಗೆ ರಾಜೀನಾಮೆ ಕೊಡ್ತೀನಿ.

ನನ್ನ ಜತೆಗೆ ಆನಂದ್‌ ಸಿಂಗ್‌ ಸಹ ರಾಜೀನಾಮೆ ಕೊಡ್ತಾರೆ. ಅವರು ನಮ್ಮ ಜಾತಿಯಲ್ಲಿ ಹುಟ್ಟಿಲ್ಲ ಅಂದ್ರೂ ಅವರು ಕೊಡ್ತಾರೆ ಏನಪ್ಪ ಆನಂದ್‌ ಸಿಂಗ್‌ ಎಂದು ಶ್ರೀರಾಮುಲು ಕೇಳಿದರು.

ರಾಜೀನಾಮೆಗೂ ಸಿದ್ಧ: ಸಿಂಗ್‌

ಹೌದು, ಎಸ್ಸಿ, ಎಸ್ಟಿಸಮುದಾಯಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಧ್ವನಿಗೂಡಿಸಿದರು.

ನಮ್ಮ ಸರ್ಕಾರದ ಅವಧಿ ಮುಗಿಯೊದರೊಳಗೆ ಮೀಸಲಾತಿ ಕೊಡಿಸೇ ಕೊಡಿಸ್ತೀವಿ. ಸಿಎಂ ಬೊಮ್ಮಾಯಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಭರವಸೆ ಇದೆ. ನಾನು ಹೋರಾಟದ ಸ್ಥಳಕ್ಕೆ ಅವರನ್ನು ಕರೆದುಕೊಂಡು ಬರೋದಾಗಿ ಸಿಂಗ್‌ ಭರವಸೆ ನೀಡಿದರು.

ಈಗ ಕಾರ್ಯಕಾರಿಣಿ ಮುಗಿದ ಬಳಿಕ ಕೋರ್‌ ಕಮಿಟಿ ಸಭೆ ನಡೆಯುತ್ತಿದೆ. ನಾನು ಸಿಎಂ ಬಸವರಾಜ್‌ ಬೊಮ್ಮಾಯಿಯವರನ್ನು ಇಲ್ಲಿಗೆ ಬರಬೇಕು ಅಂತ ಮನವಿ ಮಾಡಿರುವೆ ಎಂದರು.

ಸಚಿವ ಬಿ. ಶ್ರೀ ರಾಮುಲು ಮಾತನಾಡುವ ವೇಳೆಯೇ ಸಿಎಂ ಸ್ಥಳಕ್ಕೆ ಆಗಮಿಸಬೇಕು ಅಂತ ಪ್ರತಿಭಟನಾಕಾರರು ಘೋಷಣೆ ಕೂಗಿದರು.

Tamil Nadu ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

ನನ್ನ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿಸುವೆ. ಏ. 17ಕ್ಕೆ ನಾನು ಮಾತು ಕೊಡ್ತಾ ಇರುವೆ. ನಮ್ಮ ಸರ್ಕಾರ ಇನ್ನೂ ಒಂದುವರೆ ವರ್ಷ ಇರುತ್ತೆ. ನಮ್ಮ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಹೆಚ್ಚಳ ಮಾಡಿಸುವೆ. ನನ್ನ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ನಾನು ಮುಂದೆ ಗ್ರಾಮ ಪಂಚಾಯತಿ ಚುನಾವಣೆಗೂ ಸ್ಪರ್ಧೆ ಮಾಡಲ್ಲ ಎಂದು ಶ್ರೀರಾಮುಲು ಘೋಷಿಸಿದರು.

ಸುಭಾಸ್‌ ಅಡಿ ವರದಿ ಹಿಂದಕ್ಕೆ

ಒಂದು ತಿಂಗಳೊಳಗೆ ನ್ಯಾ. ಸುಭಾಸ್‌ ಅಡಿಯವರ ವರದಿಯನ್ನು ಹಿಂದೆ ಪಡೆಯುತ್ತೇವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿ ಜಾರಿಗೊಳಿಸುತ್ತೇವೆ. ಸಮುದಾಯಕ್ಕಾಗಿ ನಾನು ಜೀವನವನ್ನೆ ಮೀಸಲಿಟ್ಟಿರುವೆ. ಶ್ರೀ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ಮೀಸಲಾತಿ ಸಿಗುವವರೆಗೂ ಎದ್ದೇಳಲ್ಲ ಅಂತಾರೆ ಎಂದರು.

ಸಚಿವರಿಂದ ಮನವೊಲಿಕೆ: ನನ್ನ ರಾಜೀನಾಮೆ ಬೇಕು ಅಂದ್ರೆ ಈಗಲೇ ಕೊಡುವೆ, ನಾನು ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಮೀಸಲಾತಿ ವಿಚಾರ ಹೊಸಪೇಟೆಗೆ ಮಾತ್ರ ಸೀಮಿತವಾಗಿಲ್ಲ, ಇದು ರಾಜ್ಯದ ಸಮಸ್ಯೆ ಆಗಿದೆ. ಹೋರಾಟ ಮೊಟಕುಗೊಳಿಸಿ ಸಚಿವ ಶ್ರೀರಾಮುಲು ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದಾರೆ. ಅವರ ಆತ್ಮವಿಶ್ವಾಸವನ್ನು ನೀವೂ ನಂಬಬೇಕು ಎಂದರು.

ಹೋರಾಟಗಾರರ ಮನವೊಲಿಸಿ, ಇಬ್ಬರು ಸಚಿವರು ಮನವಿ ಪತ್ರ ಸ್ವೀಕರಿಸಿದರು. ಮನವಿ ಸ್ವೀಕಾರ ಮಾಡಿ, ಸಿಎಂ ಬಸವರಾಜ್‌ ಬೊಮ್ಮಾಯಿಯವರ ಬಳಿ ಮಾತನಾಡುತ್ತೇವೆ ಎಂದರು.

ಹೋರಾಟ ಕ್ರಿಯಾಸಮಿತಿ ಸದಸ್ಯರಾದ ವೀರಸ್ವಾಮಿ, ಎಂ. ಜಂಬಯ್ಯ ನಾಯಕ, ಬಿ.ಎಸ್‌. ಜಂಬಯ್ಯ ನಾಯಕ, ದುರ್ಗಪ್ಪ ಪೂಜಾರಿ, ಗೋಸಲ ಭರಮಪ್ಪ, ಗುಜ್ಜಲ ನಾಗರಾಜ, ಗುಜ್ಜಲ ರಾಘವೇಂದ್ರ, ವೆಂಕೋಬ ಪೂಜಾರ ನಾಯಕ, ಸಣ್ಣ ಮಾರೆಪ್ಪ, ಗೌರೀಶ್‌ ಬಣಕಾರ್‌, ವೀರಭದ್ರ ನಾಯಕ, ನಿಂಬಗಲ್‌ ರಾಮಕೃಷ್ಣ, ಗುಂಡಿ ರಮೇಶ್‌ ಮತ್ತಿತರರಿದ್ದರು.