ಗದಗ, (ಅ.19): ಈ ಬಾರಿ ಎರಡು‌ ವಿಧಾನಸಭಾ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆಗಳು ಎನ್ನುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಚಕ್ರವ್ಯೂಹ ಆಗಿದೆ. ಅದರಿಂದ ಹೊರಬರಲೂ ಡಿಕೆಶಿಗೆ ಸಾಧ್ಯವಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಏಳೂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿವುದು ನಿಶ್ಚಿತ. ಆದರೆ, ಈ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಅಸ್ಥಿತ್ವದ ಪ್ರಶ್ನೆಯಾಗಿದೆ. ತಮ್ಮ ಸಹೋದರ ಪ್ರತಿನಿಧಿಸುವ ಲೋಕಸಭಾ ಕ್ಷೆತ್ರ ವ್ಯಾಪ್ತಿಯ ಆರ್.ಆರ್.ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿ ಸಿಗದೇ, ಜೆಡಿಎಸ್ ನಾಯಕಿಯನ್ನು ಕರೆತಂದು ಟಿಕೆಟ್ ನೀಡಿದ್ದಾರೆ. ಅವರು ಸೋತರೆ ಡಿಕೆಶಿ ಬಗ್ಗೆ ಕಾಂಗ್ರೆಸ್ಸಿಗರೇ ಅಪಹಾಸ್ಯ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ಅದ್ಯಾವುದಪ್ಪ ನನಗೆ ಗೊತ್ತಿರದ ಸ್ಟ್ರ್ಯಾಟಜಿ.?: ವಿಜಯೇಂದ್ರಗೆ ಸಿದ್ದರಾಮಯ್ಯ ಪ್ರಶ್ನೆ

1978 ರಿಂದ ವಿಧಾನಮಂಡಲಕ್ಕೆ ಆಯ್ಕೆಯಾಗುತ್ತಿರುವ ಜಯಚಂದ್ರ ಈ ಬಾರಿ ಸೋಲುವುದು ಖಚಿತ. ಅದರೊಂದಿಗೆ ಪಶ್ಚಿಮ ಪದವೀಧರ ಕ್ಷೆತ್ರ ಸೇರಿದಂತೆ ಏಳೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಾಮುಲು, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಯಾ ಪೈಸೆ ಹಗರಣವಾಗಿಲ್ಲ. ಈ ಹಿಂದೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಒಂದೇ ಆಗಿದ್ದವು. ಕೋವಿಡ್ ನಿಯಂತ್ರಣದಲ್ಲಿ ಉಭಯ ಇಲಾಖೆಗಳ ಮಧ್ಯೆ ಸಮನ್ವಯತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳು, ಎರಡೂ ಖಾತೆಗಳನ್ನು ಡಾ| ಸುಧಾಕರ ಅವರಿಗೆ ವಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯವಿಲ್ಲದೇ ಕಾಂಗ್ರೆಸ್ ನಾಯಕರು ಕೋವಿಡ್ ನೆಪದಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಇನ್ನಷ್ಟೇ ಲೆಕ್ಕ ಪರಿಶೋಧನೆ ಆಗಬೇಕಿದ್ದು, ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದರು.