ಬೈ ಎಲೆಕ್ಷನ್ ರಿಸಲ್ಟ್: ಅನರ್ಹರು ಈಗ ಅರ್ಹರು, ಸೋತ್ರೂ ವಿಶ್ವನಾಥ್‌ಗೆ ಸಿಕ್ತು ಭರವಸೆ
ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವು ಸೋಮವಾರ(ಡಿಸೆಂಬರ್ 09)ದಂದು ಹೊರ ಬಂದಿದೆ. ವಿಶ್ವನಾಥ್ ಹೊರತುಪಡಿಸಿ ಉಳಿದೆಲ್ಲ ಅನರ್ಹರು ಈಗ ಬೈ ಎಲೆಕ್ಷನ್‌ನಲ್ಲಿ ಗೆದ್ದು ಅರ್ಹರಾಗಿದ್ದೇವೆ ಎಂದು ತೋರಿಸಿದ್ದಾರೆ.
ಬೆಂಗಳೂರು, (ಡಿ. 09): ಯಡಿಯೂರಪ್ಪ ಸರ್ಕಾರದ ಅಳಿವು ಉಳಿವಿಗೆ ಕಾರಣವಾಗಿರುವ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸರ್ಕಾರ ಸೇಫ್ ಆಗಿದೆ.
ಬಿಜೆಪಿ ಬಹುತೇಕ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವತ್ತ ದಾಪುಗಾಲಿರಿಸಿದ್ದರೆ, ಕಾಂಗ್ರೆಸ್ 2, 1 ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ (ಪಕ್ಷೇತರ) ಗೆಲುವಿನ ನಗೆ ಬೀರುವ ಟ್ರೆಂಡ್ ಕಾಣಿಸುತ್ತಿದೆ. ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಹೊರತುಪಡಿಸಿ ಉಳಿದೆಲ್ಲ ಅನರ್ಹರು ಈಗ ಬೈ ಎಲೆಕ್ಷನ್‌ನಲ್ಲಿ ಗೆದ್ದು ಅರ್ಹರಾಗಿದ್ದೇವೆ ಎಂದು ತೋರಿಸಿದ್ದಾರೆ.
LIVE: ಮುಕ್ತಾಯದ ಹಂತಕ್ಕೆ ಮತ ಎಣಿಕೆ, 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧ್ಯತೆ
ಇನ್ನು ಇದೇ ವಿಚಾರವಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದು, ನಮ್ಮ ಅಭ್ಯರ್ಥಿಗಳನ್ನು ಅನರ್ಹರು, ನಾಲಾಯಕ್ ಗಳು ಎಂದು ಟೀಕಿಸುತ್ತಾ ಜನರ ಮುಂದೆ ಹೋದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಆಡಳಿತ ನಡೆಸಲು ನೀವು ಅನರ್ಹರು ಎಂದು ನಿರ್ಧರಿಸುವ ಮೂಲಕ ಮತದಾರ ಪ್ರಭುಗಳು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಸ್ಥಿರ ಮತ್ತು ಅಭಿವೃದ್ಧಿಯ ಆಡಳಿತವನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಮತ್ತು ಅಭಿನಂದನೆಗಳು ತಿಳಿಸಿ ಟ್ವೀಟ್ ಮಾಡಿದ್ದಾರೆ.
ಮುಖ್ಯವಾಗಿ ಶ್ರೀರಾಮುಲು ಉಸ್ತುವಾರಿ ಹೊತ್ತಿದ್ದ ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಂಜುನಾಥ್ ಅವರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಶ್ರೀರಾಮುಲುಗೆ ಭಾರೀ ಮುಖಭಂಗವಾಗಿದೆ.
ಇನ್ನು ಈ ಬಗ್ಗೆಯೂ ಟ್ವೀಟ್ ಮಾಡಿರುವ ರಾಮುಲು, ಸೋತರೂ ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ ಎಂದು ಎಚ್.ವಿಶ್ವನಾಥ್‌ಗೆ ಭರವಸೆ ನೀಡಿದರು.
ಹುಣಸೂರಿನಲ್ಲಿ ಮತದಾರರ ತೀರ್ಪನ್ನು ಗೌರವಿಸುತ್ತಾ ಸೋಲಿಗೆ ನೆಪಗಳನ್ನು ಹೇಳದೆ ಒಪ್ಪಿಕೊಳ್ಳುತ್ತೇವೆ. ಆದರೆ, ನಮ್ಮ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಬೆಂಬಲಿಸಿ ಈ ಚುನಾವಣೆಯಲ್ಲಿ ಬಿಜೆಪಿಯನ್ನು ಎರಡನೇ ಸ್ಥಾನಕ್ಕೆ ಕೊಂಡೊಯ್ಯುವ ಮೂಲಕ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ ಎಂದು ತೋರಿಸಿಕೊಟ್ಟ ಮತದಾರರಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: