ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ, ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ವಿರೋಧ ಪಕ್ಷಗಳ ತೀವ್ರ ಒತ್ತಡ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅವರು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಲಿದ್ದಾರೆ.
ಬೆಂಗಳೂರು (ಆ.28): ರಾಜ್ಯ ಕಾಂಗ್ರೆಸ್ ಸರ್ಕಾರದ 2ನೇ ಅವಧಿಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಂಪುಟದಲ್ಲಿ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ. ಈಗಾಗಲೇ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದು, ಅಧಿಕೃತವಾಗಿ ಅಂಗೀಕಾರ ಮಾಡಿ ರಾಜ್ಯಪಾಲರ ಅನುಮತಿಗೆ ಕಳುಹಿಸಿಲ್ಲ. ಆದರೆ, ಬಿ.ನಾಗೇಂದ್ರ ಅವರು ಸುದ್ದಿಗೋಷ್ಠಿಯನ್ನು ನಡೆಸಿ ಅಧಿಕರತವಾಗಿ ರಾಜೀನಾಮೆ ಘೋಷಣೆ ಮಾಡಲಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಪ್ರಮುಖ ಆರೋಪಿಯಾಗಿದ್ದರು. ಅವರನ್ನು ಬಂಧಿಸಿ ಜೈಲಿಗಟ್ಟಿದ್ದ ಬೆನ್ನಲ್ಲಿಯೇ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಆದರೆ, ಎಸ್‌ಐಟಿ ನಡೆಸಿದ ತನಿಖೆಯಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂದು ಅವರನ್ನು ದೋಷಮುಕ್ತಗೊಳಿಸಲಾಗಿತ್ತು. ಹೀಗಾಗಿ, ಇತರೆ ತನಿಖಾ ಸಂಸ್ಥೆಗಳ ತನಿಖೆ ಬಾಕಿಯಿದ್ದರೂ, ನಾಗೇಂದ್ರ ಅವರು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದರು.
₹100 ಕೋಟಿಗಿಂತ ಹೆಚ್ಚಿನ ಹಣದ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐ ತನಿಖಾ ಸಂಸ್ಥೆಗಳು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿದ್ದವು. ಇದರ ನಡುವೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, 2ನೇ ಅವಧಿಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಚಿವ ಸ್ಥಾನ ಹಂಚಿಕೆ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಪಕ್ಷದ ಹಿಡಿತವನ್ನು ಕಾಪಾಡಿಕೊಳ್ಳಲು ಸಚಿವ ಸ್ಥಾನವನ್ನು ನೀಡುವ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರಿಗೆ ಡಿಕೆಶಿ ಸಂಪುಟಕ್ಕೆ ನಾಗೇಂದ್ರ ಅವರನ್ನು ಸೇರ್ಪಡೆ ಮಾಡಿ ಸಚಿವ ಸ್ಥಾನವನ್ನು ನೀಡಲಾಗಿತ್ತು.
ಪಾದಯಾತ್ರೆಗೂ ಮುನ್ನ ರಾಜೀನಾಮೆ
ಸರ್ಕಾರದಲ್ಲಿ ಗಂಭೀರ ಹಗರಣದ ಆರೋಪವನ್ನು ಹೊಂದಿರುವ ಬಿ. ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಇನ್ನು ಮೊದಲ ಅಧಿವೇಶನದಲ್ಲಿ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಭಾರೀ ಹೋರಾಟ ಮಾಡಿದವು. ಜೊತೆಗೆ, ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಾರಗಟ್ಟಲೆ ಪ್ರತಿಭಟನೆಯನ್ನೂ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ಸರ್ಕಾರ ಮಣಿಯದಿದ್ದಾಗ, ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದ್ದವು. ಜೊತೆಗೆ, ಸಿಬಿಐ ತನಿಖಾ ಸಂಸ್ಥೆಯು ಕೂಡ ನಾಗೇಂದ್ರ ಅವರನ್ನು ವಶಕ್ಕೆ ಪಡೆಯಲು ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದಾರೆ.
ರಾಜ್ಯದಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಭಾರೀ ಮಟ್ಟದ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಮುಖ್ಯಸ್ಥ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಅರ್ಥೈಸಿದ್ದಾರೆ. ಈ ವೇಳೆ ನಾಗೇಂದ್ರ ಅವರು ಕೂಡ ದೆಹಲಿಗೆ ತೆರಳಿ ತಮ್ಮ ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅವರ ಪ್ರಯತ್ನದ ಹೊರತಾಗಿಯೂ ಹೈಕಮಾಂಡ್‌ನಿಂದ ನಾಗೇಂದ್ರ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದೆ.
ದೆಹಲಿಯಲ್ಲೇ ರಾಜೀನಾಮೆ ಸಲ್ಲಿಕೆ
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಬಿ. ನಾಗೇಂದ್ರ ಅವರು ದೆಹಲಿಯಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಕೊಟ್ಟಿದ್ದಾರೆ. ಆದರೆ, ರಾಜೀನಾಮೆ ಪತ್ರವನ್ನು ಇನ್ನೂ ಸಿಎಂ ಅಂಗೀಕಾರ ಮಾಡಿಲ್ಲ. ಆದರೆ, ನಾಗೇಂದ್ರ ಅವರೇ ಸ್ವತಃ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಸಲ್ಲಿಕೆ ಮಾಡಲಿದ್ದಾರೆ. ಇದಾದ ನಂತರ ಸಿಎಂ ರಾಜೀನಾಮೆ ಅಂಗೀಕಾರ ಮಾಡಿ ರಾಜ್ಯಪಾಲರಿಗೆ ಪತ್ರವನ್ನು ಕಳುಹಿಸುತ್ತಾರೆ. ರಾಜ್ಯಪಾಲರ ಅಂಕಿತ ಬಿದ್ದರೆ ರಾಜೀನಾಮೆ ಊರ್ಜಿತವಾಗುತ್ತದೆ.


