Asianet Suvarna News Asianet Suvarna News

ಮೇಕೆದಾಟು ಪಾದಯಾತ್ರೆ: 8 ಕೇಸ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆಶಿ

ಮೇಕೆದಾಟು ಡ್ಯಾಂ ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ವೇಳೆ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಂಟು ಪ್ರಕರಣಗಳನ್ನು ರದ್ದುಪಡಿಸಲು ಕೋರಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

mekedatu padayatra dk shivakumar moves high court seeking quashing of cases gvd
Author
First Published May 27, 2023, 12:31 PM IST

ಬೆಂಗಳೂರು (ಮೇ.27): ಮೇಕೆದಾಟು ಡ್ಯಾಂ ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆ ವೇಳೆ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಂಟು ಪ್ರಕರಣಗಳನ್ನು ರದ್ದುಪಡಿಸಲು ಕೋರಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳ ರದ್ದು ಕೋರಿ ಪ್ರತ್ಯೇಕವಾಗಿ ಶಿವಕುಮಾರ್‌ ಸಲ್ಲಿಸಿರುವ ಎಂಟು ಅರ್ಜಿಗಳು ಶುಕ್ರವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. 

ಅರ್ಜಿಗಳಿಗೆ ಸಂಬಂಧಿಸಿದಂತೆ ಕಚೇರಿ ಎತ್ತಿರುವ ಆಕ್ಷೇಪಣೆಗಳನ್ನು ನ್ಯಾಯಮೂರ್ತಿಗಳು ಗಮನಿಸಿ, ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಶಿವಕುಮಾರ್‌ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಒಂದು ವಾರದ ಕಾಲ ಮುಂದೂಡಿದರು. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ 2022ರ ಜ.9ರಿಂದ 10 ದಿನ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ವಿರುದ್ಧ ಸಾತನೂರು, ಉಪ್ಪಾರಪೇಟೆ, ಹಲಸೂರು ಗೇಟ್‌ ಮತ್ತು ಇಜೂರು ಪೊಲೀಸ್‌ ಠಾಣೆಗಳಲ್ಲಿ ಎಂಟು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.

ಲೋಕಸಭೆ ಚುನಾವಣೆಗೆ ಸಜ್ಜಾಗಿ: ಅಸೆಂಬ್ಲಿ ಪರಾಜಿತರಿಗೆ ಡಿಕೆಶಿ ಪತ್ರ

ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯ ನಿಯಮಗಳನ್ನು ಸೂಕ್ತ ನೋಟಿಫಿಕೇಷನ್‌ ಹೊರಡಿಸದೆ ಜಾರಿಗೊಳಿಸಲು ಅವಕಾಶವಿಲ್ಲ. ಹೀಗಿದ್ದರೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆಯಡಿ ಜಾರಿ ಮಾಡಲಾಗಿದ್ದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ. ಪಾದಯಾತ್ರೆ ನಡೆಸಲು ಸರ್ಕಾರಿ ಪ್ರಾಧಿಕಾರಗಳೇ ಅನುಮತಿ ನೀಡಿವೆ. ಅದಕ್ಕೆ ಹಲವು ದಾಖಲೆಗಳು ಇವೆ. ಹೀಗಿದ್ದರೂ ದೂರು ದಾಖಲಿಸಿರುವುದು ಸಂಪೂರ್ಣವಾಗಿ ಅಕ್ರಮವಾಗಿದೆ. ಆದ್ದರಿಂದ ಎಲ್ಲ ದೂರುಗಳನ್ನು ರದ್ದುಪಡಿಸುವಂತೆ ಡಿ.ಕೆ.ಶಿವಕುಮಾರ್‌ ಅರ್ಜಿಯಲ್ಲಿ ಕೋರಿದ್ದಾರೆ.

ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೇಲ್ಮನೆ 5 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ?

ದೋಷಾರೋಪ ಪಟ್ಟಿಗೆ ತಡೆ ನೀಡಿರುವ ಹೈಕೋರ್ಟ್‌: ಈ ಹಿಂದೆ ಮೇಕುದಾಟು ಪಾದಯಾತ್ರೆಯಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಶಾಸಕ ಟಿ.ಬಿ.ಜಯಚಂದ್ರ ಸೇರಿದಂತೆ ಕಾಂಗ್ರೆಸ್‌ನ 31 ಮುಖಂಡರ ವಿರುದ್ಧ ರಾಮನಗರ ತಹಶೀಲ್ದಾರ್‌ ಜ.13ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಪೊಲೀಸರು, ಫೆ.9ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ದೋಷಾರೋಪ ಪಟ್ಟಿಗೆ ಹೈಕೋರ್ಟ್‌, 2022ರ ಜೂ.28ರಂದು ತಡೆಯಾಜ್ಞೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios