ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಮೇಲ್ಮನೆ 5 ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ?
ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಏಳು ಸ್ಥಾನಗಳ ಚುನಾವಣೆ ಯಾವಾಗ ಎಂಬ ಕುತೂಹಲ ಮೂಡಿದೆ. ಖಾಲಿ ಇರುವ ನಾಮ ನಿರ್ದೇಶಿತ ಎರಡು ಸ್ಥಾನಗಳನ್ನು ಹೊರತುಪಡಿಸಿದರೆ ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ವಿಧಾನ ಪರಿಷತ್ (ಮೇ.27): ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಏಳು ಸ್ಥಾನಗಳ ಚುನಾವಣೆ ಯಾವಾಗ ಎಂಬ ಕುತೂಹಲ ಮೂಡಿದೆ. ಖಾಲಿ ಇರುವ ನಾಮ ನಿರ್ದೇಶಿತ ಎರಡು ಸ್ಥಾನಗಳನ್ನು ಹೊರತುಪಡಿಸಿದರೆ ಉಳಿದ ಐದು ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದ ನಾಮನಿರ್ದೇಶಿತ ಸದಸ್ಯರಾದ ಮೋಹನ್‌ಕುಮಾರ್ ಕೊಂಡಜ್ಜಿ ಹಾಗೂ ಪಿ.ಆರ್.ರಮೇಶ್ ಅವರ ಅವಧಿ ಮೇ 17ಕ್ಕೆ ಮುಗಿದಿದ್ದು, ಈ ಸ್ಥಾನಗಳಿಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷ ನಾಮನಿರ್ದೇಶನ ಮಾಡಬೇಕಿದೆ. ಉಳಿದಂತೆ ವಿಧಾನ ಸಭೆಯಿಂದ ಪರಿಷತ್ತಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರು, ಆರ್.ಶಂಕರ್ ಹಾಗೂ ಲಕ್ಷ್ಮಣ ಸವದಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪುಟ್ಟಣ್ಣ ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಆಯನೂರು ಮಂಜುನಾಥ್ ಅವರ ಸದಸ್ಯತ್ವ ಮುಗಿಯುವ ಮುನ್ನವೇ ರಾಜೀನಾಮೆ ನೀಡಿರುವುದರಿಂದ ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಲೋಕಸಭೆ ಚುನಾವಣೆಗೆ ಸಜ್ಜಾಗಿ: ಅಸೆಂಬ್ಲಿ ಪರಾಜಿತರಿಗೆ ಡಿಕೆಶಿ ಪತ್ರ
ಬಾಬುರಾವ್ ಚಿಂಚನಸೂರು ಹಾಗೂ ಆಯನೂರು ಮಂಜುನಾಥ್ ಅವರ ಸದಸ್ಯತ್ವ ಅವಧಿ ಮುಂದಿನ ವರ್ಷ ಜೂನ್ ಮೂರನೇ ವಾರದವರೆಗೆ ಇತ್ತು. ಆರ್.ಶಂಕರ್ ಹಾಗೂ ಪುಟ್ಟಣ್ಣ ಅವರ ಸದಸ್ಯತ್ವ ಅವಧಿ ಮೂರು ವರ್ಷ ಮತ್ತು ಲಕ್ಷ್ಮಣ ಸವದಿ ಅವರ ಸದಸ್ಯತ್ವ ಅವಧಿ ಐದು ವರ್ಷ ಬಾಕಿ ಇತ್ತು. ಈ ಸ್ಥಾನಗಳು ಖಾಲಿ ಇರುವ ಬಗ್ಗೆ ಈಗಾಗಲೇ ವಿಧಾನ ಪರಿಷತ್ ಸಚಿವಾಲಯ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಆದಷ್ಟುಬೇಗ ಖಾಲಿ ಇರುವ ಐದು ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಬಗ್ಗೆ ಆಯೋಗ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಮುಂದಿನ ಜೂನ್ 21ಕ್ಕೆ ಸದಸ್ಯತ್ವ ಕೊನೆಗೊಳ್ಳುವ ಪದವೀಧರ ಕ್ಷೇತ್ರ ಹಾಗೂ 2026 ನವೆಂಬರ್ 11ಕ್ಕೆ ಕೊನೆಗೊಳ್ಳುವ ಶಿಕ್ಷಕರ ಕ್ಷೇತ್ರದ ಚುನಾವಣೆ ಸಾಕಷ್ಟುಕುತೂಹಲ ಕೆರಳಿಸಿದೆ. ಒಂದು ವರ್ಷದ ಸದಸ್ಯತ್ವಕ್ಕಾಗಿ ಪದವೀಧರ ಕ್ಷೇತ್ರದ ಚುನಾವಣಾ ಕಣಕ್ಕೆ ಯಾರು ಇಳಿಯುತ್ತಾರೆ ಎಂಬುದು ಕುತೂಹಲದ ವಿಷಯವಾಗಿದೆ.
ಕಾಂಗ್ರೆಸ್‌ಗೆ 2, ಬಿಜೆಪಿಗೆ 1 ಸ್ಥಾನ: ವಿಧಾನಸಭೆಯಿಂದ ಮೇಲ್ಮನೆ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಗೆಲ್ಲಲು ಸೂತ್ರದ ಪ್ರಕಾರ 56 ಮತಗಳು ಬೇಕು. ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲದ ಮೇಲೆ ಲೆಕ್ಕಾಚಾರ ಹಾಕಿದರೆ ಕಾಂಗ್ರೆಸ್ ಸುಲಭವಾಗಿ ಎರಡು ಸ್ಥಾನ, ಬಿಜೆಪಿ ಒಂದು ಸ್ಥಾನ ಗೆಲ್ಲಲು ಸಾಧ್ಯವಿದೆ.
ಅಶ್ವತ್ಥ್, ಪೂಂಜಾ ವಿರುದ್ಧ ಕೇಸು ಕಾಂಗ್ರೆಸ್ಸಿಗರ ದ್ವೇಷ ರಾಜಕಾರಣ: ಬೊಮ್ಮಾಯಿ
ಜೂನ್‌ನಲ್ಲಿ ಮತ್ತೊಂದು ಸ್ಥಾನ ಖಾಲಿ: ಮುಂದಿನ ತಿಂಗಳು 8ಕ್ಕೆ ಕಾಂಗ್ರೆಸ್ ನಾಮನಿರ್ದೇಶಿತ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಸದಸ್ಯತ್ವ ಅವಧಿ ಸಹ ಮುಗಿಯಲಿರುವುದರಿಂದ ಸರ್ಕಾರ ಮೂರು ನಾಮನಿರ್ದೇಶಿತ ಸ್ಥಾನಗಳನ್ನು ಭರ್ತಿ ಮಾಡಬೇಕಾಗುತ್ತದೆ.