ಡಿಜಿಟಲ್ ಪೇಮೆಂಟ್ ಮಾಡಿದವರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ ವಸೂಲಿ ಕೆಲಸ ನಡೆದಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಗಂಭೀರ ಆರೋಪ ಮಾಡಿದರು.
ವಿಜಯಪುರ (ಜು.20): ಡಿಜಿಟಲ್ ಪೇಮೆಂಟ್ ಮಾಡಿದವರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ ವಸೂಲಿ ಕೆಲಸ ನಡೆದಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಗಂಭೀರ ಆರೋಪ ಮಾಡಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದೇ ಸಣ್ಣ ವ್ಯಾಪಾರಿಗಳಿಗೆ ಐಟಿ ಇಲಾಖೆಯಿಂದ ನೋಟಿಸ್ ಕೊಡಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ಕನಿಷ್ಠ ಸಾಮಾನ್ಯ ಜ್ಞಾನ ಇಲ್ವಾ? ಐಟಿ ಇಲಾಖೆ ಯಾರಿಗೆ ಬರುತ್ತೆ, ರಾಜ್ಯ ಸರ್ಕಾರಕ್ಕೆ ಬರುತ್ತಾ?. ಇಷ್ಟೂ ಸಾಮಾನ್ಯ ಜ್ಞಾನ ಇಲ್ಲ ಅಂದ್ರೆ ಹೇಗೆ?, ಐಟಿ ಇಲಾಖೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತೆ ಎಂದು ತಿರುಗೇಟು ನೀಡಿದರು.
ನೋಟಿಸ್ ಕೊಡುವುದು ಕೇಂದ್ರ ಸರ್ಕಾರ. ಅದನ್ನ ರಾಜ್ಯಕ್ಕೆ ಹೇಳಿದರೆ ಹೇಗೆ. ಸಿಬಿಐ, ಐಟಿ, ಇ.ಡಿ ಇದೆಲ್ಲ ಕೇಂದ್ರ ಸರ್ಕಾರ ವ್ಯಾಪ್ತಿಗೆ ಬರುತ್ತದೆ. ಅದನ್ನು ದುರಪಯೋಗ ಕೂಡ ಅವರೇ ಮಾಡಿಕೊಳ್ಳುತ್ತಿದ್ದಾರೆ?. ಬಹುಶಃ ಅವರಿಗೆ ಐಟಿ ಯಾರಿಗೆ ಬರುತ್ತೆ ಅಂತಾ ಗೊತ್ತಿಲ್ಲ, ಹೇಳಿಬಿಡಿ. ಸ್ವಲ್ಪ ಸರಿಯಾಗಿ ತಿಳಿದು ಮಾತನಾಡುತ್ತಾ ಬನ್ನಿ. ಸುಳ್ಳು ಹೇಳುವುದರಲ್ಲೂ ಮಿತಿ ಇರುತ್ತದೆ. ಸುಳ್ಳು ಹೇಳುವಾಗ ಸ್ವಲ್ಪ ನಂಬುವಂತಹ ಸುಳ್ಳು ಹೇಳಿ. ಐಟಿ ಇಲಾಖೆ ನಮಗೆ ಬರುತ್ತದೆ ಎಂದರೆ ತಪ್ಪಾಗುತ್ತದೆ ಎಂದರು.
ಅಶೋಕ ತಮ್ಮ ಖುರ್ಚಿ ಉಸಿಕೊಳ್ಳಲಿ: ವಿಪಕ್ಷ ನಾಯಕ ಆರ್.ಅಶೋಕ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು. ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು. ತಮ್ಮ ಕುರ್ಚಿ ಬಿಟ್ಟಿದ್ದಾರೆ, ಅವರದ್ದೇ ನೆಲೆ ಇಲ್ಲ. ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಟಾಂಗ್ ಕೊಟ್ಟರು. ದಸರಾ ವೇಳೆಗೆ ಸಿಎಂ ಬದಲಾಗುತ್ತಾರೆ, ನೂತನ ಸಿಎಂ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಅಶೋಕಗೆ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಹೇಳಿ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉಹಾಪೋಹಗಳಿಗೆ, ಯಾರದ್ದೇ ಹೇಳಿಕೆಗೆ ಬೆಲೆ ಇಲ್ಲ.
ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಅಂತಿಮ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಡ್ಲ್ಯೂಸಿ ಕಾಲಕಾಲಕ್ಕೆ ನಿರ್ಧಾರ ಮಾಡುತ್ತಾರೆ. ಯಾರದ್ದೇ ಹೇಳಿಕೆ, ಮಾಧ್ಯಮ ಹೇಳಿಕೆ, ಎಂ.ಬಿ.ಪಾಟೀಲ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸಿಎಂ ಅಧಿಕಾರ ಎರಡೂವರೆ ವರ್ಷ ಹಂಚಿಕೆ ಆಗಿದೆ ಎಂಬ ವಿಚಾರದ ಕುರಿತು ಪ್ರಶ್ನೆಗೆ ಮರು ಪ್ರಶ್ನಿಸಿದ ಅವರು, ನಿಮ್ಮ ಮುಂದೆ ಮಾತುಕತೆ ಆಗಿದೀಯಾ?. ನಿಮಗೆ ಗೊತ್ತಾ? ಅಗ್ರಿಮೆಂಟ್ ಆಗಿದೆಯಾ ಎಂದು ಕೇಳಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪಸಿಂಗ್ ಸುರ್ಜೆವಾಲಾ ರಾಜ್ಯ ಪ್ರವಾಸ ವಿಚಾರವಾಗಿ ಮಾತನಾಡಿದ ಅವರು, ಅವರು ರಾಜ್ಯ ಉಸ್ತುವಾರಿಯಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ, ಅದು ಅವರ ಕರ್ತವ್ಯವಾಗಿದೆ. ರಾಜ್ಯ ಉಸ್ತುವಾರಿಗಳು ಅವಾಗವಾಗ ಆಗಮಿಸಿ ಸಭೆಗಳನ್ನು ಮಾಡುತ್ತಾರೆ. ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ವೀಕ್ಷಣೆ ಮಾಡುವುದು ಸಾಮಾನ್ಯ. ಶಾಸಕರು ಅಸಮಾಧಾನ ಹೊರ ಹಾಕಿರುವ ನಿಟ್ಟಿನಲ್ಲಿ ಆಗಮಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಾಗೇನಿಲ್ಲ ಯಾವಾಗಲೂ ಬರ್ತಾ ಇರ್ತಾರೆ. ಎಲ್ಲರ ಅಭಿಪ್ರಾಯ ಕೇಳುತ್ತಾರೆ, ಸರ್ಕಾರ ಹೇಗೆ ನಡೆಯುತ್ತಿದೆ. ಪಕ್ಷ ಸಂಘಟನೆ ಹೇಗೆ ಆಗುತ್ತಿದೆ?, ಪಕ್ಷದ ಕಾರ್ಯಕ್ರಮಗಳ ಕುರಿತು ರಿವಿಲ್ ಮಾಡುತ್ತಾರೆ ಎಂದರು.
