ಪ್ರಕಾಶ್‌ ರಾಜ್‌ ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಹೋರಾಟ ಮಾಡುತ್ತಾರೆ? ಉತ್ತರ ಪ್ರದೇಶ, ಅಸ್ಸಾಂನಲ್ಲೂ ಹೋರಾಟ ಮಾಡಲಿ. ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದು ಎಂ.ಬಿ.ಪಾಟೀಲ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಜು.06): ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕೇವಲ ಕರ್ನಾಟಕದಲ್ಲಿ ಮಾತ್ರ ಯಾಕೆ ಹೋರಾಟ ಮಾಡುತ್ತಾರೆ? ಉತ್ತರ ಪ್ರದೇಶ, ಅಸ್ಸಾಂನಲ್ಲೂ ಹೋರಾಟ ಮಾಡಲಿ. ಅಷ್ಟೇ ಯಾಕೆ ಗುಜರಾತ್‌ನಲ್ಲೂ ಹೋರಾಟ ಮಾಡಲಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತೀಕ್ಷ್ಣವಾಗಿ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕೆಐಎಡಿಬಿ ಭೂಸ್ವಾಧೀನದ ನೋಟಿಫಿಕೇಷನ್ ಅಂತಿಮ ಆಗಿದೆ. ಈಗ ಡಿನೋಟಿಫಿಕೇಷನ್ ಮಾಡಬೇಕಾಗುತ್ತದೆ.

ಅದಕ್ಕಾಗಿ ಒಂದಿಷ್ಟು ಕಾನೂನು ತೊಡಕುಗಳಿವೆ ಅವುಗಳ ಬಗ್ಗೆ ಅಡ್ವೋಕೇಟ್ ಜನರಲ್ ಬಳಿ ಚರ್ಚೆ ಮಾಡುತ್ತೇವೆ ಎಂದರು. ಕಾನೂನಾತ್ಮಕ ಅಂಶಗಳ ಬಗ್ಗೆ ಈಗ ಹೇಳುವುದಿಲ್ಲ. ಸರ್ಕಾರಕ್ಕೆ ನಷ್ಟ ಆಗುತ್ತಾ ಎನ್ನುವ ಬಗ್ಗೆಯೂ ಹೇಳಲು ಹೋಗುವುದಿಲ್ಲ. ಆದರೆ ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳುವಂತೆ ಮುಖ್ಯಮಂತ್ರಿಯವರು ಹಾಗೂ ಕಾನೂನು ತಜ್ಞರ ಜೊತೆಗೆ ಚರ್ಚಿಸುತ್ತೇವೆ. ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಕೊಡುವ ಅಗತ್ಯವಿದೆ. ಮುಂದಿನ ಕೆಲವೇ ದಿನಗಳಲ್ಲಿ ಇದೆಲ್ಲ ಇತ್ಯರ್ಥಗೊಳ್ಳಲಿದೆ ಎಂದು ಹೇಳಿದರು.

ಮೇಕೆದಾಟು, ಅನಗತ್ಯ ರಾಜಕೀಯ ಬೇಡ: ಮೇಕೆದಾಟು ಯೋಜನೆ ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ, ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೂ ಅನುಕೂಲವಾಗಲಿದೆ. ಹೀಗಾಗಿ ಇದೊಂದು ಪ್ರಮುಖವಾದ ಯೋಜನೆ. ಇದರಲ್ಲಿ ಅನಗತ್ಯ ರಾಜಕಾರಣ ಯಾರೂ ಮಾಡಬಾರದು. ಸಾರ್ವಜನಿಕರ ಹಿತಾಸಕ್ತಿ ಎಲ್ಲಕ್ಕಿಂತಲೂ ಮುಖ್ಯ. ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು. ಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಅನುಕೂಲ ಕಲ್ಪಿಸಲಿ ಎಂದರು.

ತಮ್ಮ ಖುರ್ಚಿ ಉಸಿಕೊಳ್ಳಲಿ: ವಿಪಕ್ಷ ನಾಯಕ ಆರ್‌.ಅಶೋಕ ದೆಹಲಿಗೆ ಹೋಗಿ ಕುಳಿತುಕೊಂಡಿದ್ದರು. ದಸರಾ ಒಳಗೆ ತಮ್ಮ ಕುರ್ಚಿ ಬದಲಾಗುತ್ತದೆ ಎಂದು ತಮ್ಮ ಬಗ್ಗೆ ಹೇಳಿರಬೇಕು. ತಮ್ಮ‌ ಕುರ್ಚಿ ಬಿಟ್ಟಿದ್ದಾರೆ, ಅವರದ್ದೇ ನೆಲೆ ಇಲ್ಲ. ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಟಾಂಗ್ ಕೊಟ್ಟರು. ದಸರಾ ವೇಳೆಗೆ ಸಿಎಂ ಬದಲಾಗುತ್ತಾರೆ, ನೂತನ ಸಿಎಂ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌.ಅಶೋಕಗೆ ಮೊದಲು ಅವರ ಕುರ್ಚಿ ಉಳಿಸಿಕೊಳ್ಳಲು ಹೇಳಿ.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಉಹಾಪೋಹಗಳಿಗೆ, ಯಾರದ್ದೇ ಹೇಳಿಕೆಗೆ ಬೆಲೆ ಇಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಅಂತಿಮ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಡ್ಲ್ಯೂಸಿ ಕಾಲಕಾಲಕ್ಕೆ ನಿರ್ಧಾರ ಮಾಡುತ್ತಾರೆ. ಯಾರದ್ದೇ ಹೇಳಿಕೆ, ಮಾಧ್ಯಮ ಹೇಳಿಕೆ, ಎಂ.ಬಿ.ಪಾಟೀಲ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಸಿಎಂ ಅಧಿಕಾರ‌ ಎರಡೂವರೆ ವರ್ಷ ಹಂಚಿಕೆ ಆಗಿದೆ ಎಂಬ ವಿಚಾರದ ಕುರಿತು ಪ್ರಶ್ನೆಗೆ ಮರು ಪ್ರಶ್ನಿಸಿದ ಅವರು, ನಿಮ್ಮ ಮುಂದೆ ಮಾತುಕತೆ ಆಗಿದೀಯಾ?. ನಿಮಗೆ ಗೊತ್ತಾ? ಅಗ್ರಿಮೆಂಟ್ ಆಗಿದೆಯಾ ಎಂದು ಕೇಳಿದರು.