ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ‘ಅಕ್ರಮ ನಡೆದಿದೆ’ ಎಂಬ ಕುರಿತಂತೆ ರಾಜ್ಯ ಸರ್ಕಾರ ರಚಿಸಿದ ತನಿಖಾ ತಂಡದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 

ಗಿರೀಶ್‌ ಗರಗ

ಬೆಂಗಳೂರು (ನ.15): ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ‘ಅಕ್ರಮ ನಡೆದಿದೆ’ ಎಂಬ ಕುರಿತಂತೆ ರಾಜ್ಯ ಸರ್ಕಾರ ರಚಿಸಿದ ತನಿಖಾ ತಂಡದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ಶೀಘ್ರದಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ 2019-20ರಿಂದ 2022-23ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ₹2 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ತನಿಖೆ ನಡೆಸಲು ಐಎಎಸ್‌ ಅಧಿಕಾರಿ ಆದಿತ್ಯ ಆಮ್ಲನ್‌ ಬಿಸ್ವಾಸ್‌ ನೇತೃತ್ವದಲ್ಲಿ ತನಿಖಾ ರಚಿಸಲಾಗಿತ್ತು. 

ಈ ತಂಡವು ಸದ್ಯ 230ಕ್ಕೂ ಹೆಚ್ಚಿನ ಕಾಮಗಾರಿಗಳ ದಾಖಲೆಗಳ ಪರಿಶೀಲನಾ ಕಾರ್ಯದಲ್ಲಿ ತೊಡಗಿದೆ. ತನಿಖಾ ತಂಡದ ಪರಿಶೋಧನೆ ವೇಳೆ ಕಾಮಗಾರಿ ಅನುಷ್ಠಾನದಲ್ಲಿ ಹಲವು ಲೋಪಗಳು, ಅಕ್ರಮಗಳು ಪತ್ತೆಯಾಗಿದೆ. ಈ ವಿಚಾರವನ್ನು ಕಳೆದ ನ.7ರಂದು ನಡೆದ ತನಿಖಾ ತಂಡದ ಪರಿಶೀಲನಾ ಸಭೆಯಲ್ಲಿ ಸ್ವತಃ ಆದಿತ್ಯ ಆಮ್ಲನ್‌ ಬಿಸ್ವಾಸ್ ಅವರೇ ತಿಳಿಸಿದ್ದು, ಕೆಲ ಕಾಮಗಾರಿಗಳ ಕುರಿತಂತೆ ಮಧ್ಯಂತರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ತನಿಖಾ ತಂಡದ ಇತರ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ತುಳು ಚಿತ್ರರಂಗದ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮನವಿ: ನಿರ್ಮಾಪಕರು

ನಿಯಮಗಳ ಉಲ್ಲಂಘನೆ, ಕಳಪೆ ಕಾಮಗಾರಿ: ತನಿಖಾ ತಂಡದ ಸಭೆಯಲ್ಲಿ 2019-20ರಿಂದ 2022-23ರವರೆಗೆ ಕೈಗೊಳ್ಳಲಾಗಿರುವ ಹಲವು ಕಾಮಗಾರಿಗಳ ಟೆಂಡರ್‌ ನೀಡುವಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ ಎಂದು ಆದಿತ್ಯ ಆಮ್ಲನ್‌ ಬಿಸ್ವಾಸ್‌ ತಿಳಿಸಿದ್ದಾರೆ. ಅದರ ಜತೆಗೆ ಕಾಮಗಾರಿಗಳು ಕಳಪೆ ಗುಣಮಟ್ಟದ್ದಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಇದು ಆರಂಭಿಕ ಹಂತದಲ್ಲಿಯೇ ಇಷ್ಟು ಪ್ರಮಾಣದ ಲೋಪ ಕಂಡು ಬಂದಿದ್ದು, ಎಲ್ಲದರ ಕುರಿತು ಹಾಗೂ ತನಿಖಾ ತಂಡ ಈವರೆಗೆ ಕೈಗೊಂಡಿರುವ ಕ್ರಮಗಳು ಮತ್ತು ಅದರಿಂದ ಪತ್ತೆಯಾದ ಮಾಹಿತಿಗಳನ್ನು ಒಳಗೊಂಡ ಮಧ್ಯಂತರ ವರದಿ ಸಿದ್ಧಪಡಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ದಾಖಲೆಗಳನ್ನೇ ನೀಡದ ಅಧಿಕಾರಿಗಳು: ಕಾಮಗಾರಿಗಳ ಅನುಷ್ಠಾನ ಕುರಿತಂತೆ ಪರಿಶೀಲಿಸಲು ದಾಖಲೆಗಳ ಅವಶ್ಯಕತೆಯಿದ್ದು, ಬಿಬಿಎಂಪಿ ಅಧಿಕಾರಿಗಳು ತನಿಖಾ ತಂಡಕ್ಕೆ ದಾಖಲೆಗಳನ್ನು ನೀಡದೇ ಆಟವಾಡಿಸುತ್ತಿದ್ದಾರೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಎಲ್ಲ ಕಾಮಗಾರಿಗಳ ದಾಖಲೆಗಳನ್ನು ಸಮರ್ಪಕವಾಗಿ ನೀಡುವಂತೆ ಎಚ್ಚರಿಕೆ ನೀಡಲಾಗಿದೆ. ಅದರ ಜತೆಗೆ ಬಿಬಿಎಂಪಿ ಅಧಿಕಾರಿಗಳು ನೀಡುವ ದಾಖಲೆಗಳನ್ನು ಪರಿಶೀಲಿಸಲು ತನಿಖಾ ತಂಡದ ಸದಸ್ಯರಾಗಿರುವ ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ ಪಿ.ಎಂ.ಸುರೇಶ್‌ ಅವರಿಗೆ ವಹಿಸಲಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಪ್ರತ್ಯೇಕ ತಂಡ ರಚಿಸುವಂತೆಯೂ ಆದಿತ್ಯ ಆಮ್ಲನ್‌ ಬಿಸ್ವಾಸ್‌ ಸೂಚಿಸಿದ್ದಾರೆ.

ತನಿಖಾ ತಂಡ ರಚನೆ ನಂತರವೂ ಕಳ್ಳಾಟ!: ಅಕ್ರಮದ ಕುರಿತು ತನಿಖೆ ನಡೆಸಲು ಸರ್ಕಾರ ತನಿಖಾ ತಂಡ ರಚಿಸಿದ ನಂತರವೂ ಬಿಬಿಎಂಪಿ ಅಧಿಕಾರಿಗಳು ಸಾಕಷ್ಟು ಲೋಪಗಳನ್ನು ಎಸಗಿದ್ದಾರೆ. ಅದರ ಪ್ರಕಾರ ಇತ್ತೀಚೆಗೆ ಕಾಮಗಾರಿಗಳನ್ನು ಆರಂಭಿಸುವ ಸಂದರ್ಭದಲ್ಲಿ ತನಿಖಾ ತಂಡಕ್ಕೆ ಮಾಹಿತಿ ನೀಡಬೇಕಿತ್ತು. ಆದರೆ, ತನಿಖಾ ತಂಡಕ್ಕೆ ಮಾಹಿತಿ ನೀಡದೆ ಕಾಮಗಾರಿ ಆರಂಭಿಸಲಾಗಿದೆ. ಅಂತಹ ಕಾಮಗಾರಿಗಳ ಮಾಹಿತಿ, ಗುಣಮಟ್ಟ ಪರಿವೀಕ್ಷಣೆಯ ದಾಖಲೆ ನೀಡುವಂತೆ ತಿಳಿಸಲಾಗಿದೆ. ಅಲ್ಲದೆ, ತನಿಖಾ ತಂಡಕ್ಕೆ ತಿಳಿಸದೆಯೇ ಕೆಲ ಕಾಮಗಾರಿಗಳ ಬಿಲ್ಲುಗಳನ್ನು ಅನುಮೋದಿಸಲಾಗಿದ್ದು, ಅವುಗಳ ಸಂಪೂರ್ಣ ದಾಖಲೆ ನೀಡುವಂತೆ ಆದೇಶಿಸಲಾಗಿದೆ.

ಕಾಡಂಚಿನ ಹಳ್ಳಿಗಳಿಗೆ ಹಗಲಲ್ಲೇ 3 ಫೇಸ್‌ ವಿದ್ಯುತ್‌ ಕೊಡಿ: ಸಚಿವ ಈಶ್ವರ ಖಂಡ್ರೆ

ಅಧಿಕಾರಿಗಳ ‘ಸಹಿ’ ಸಾಚಾತನ ಪರಿಶೀಲನೆ: ಕಾಮಗಾರಿಗಳ ದಾಖಲೆ ಪರಿಶೀಲನೆ ಜತೆಗೆ ಕಾಮಗಾರಿಗಳ ಅನುಷ್ಠಾನವಾದ ಸಂದರ್ಭದಲ್ಲಿ ಇದ್ದಂತಹ ಅಧಿಕಾರಿಗಳ ಮಾಹಿತಿಯನ್ನು ಪಡೆಯುವ ಕಾರ್ಯಕ್ಕೂ ತನಿಖಾ ತಂಡ ಮುಂದಾಗಿದೆ. ಹೀಗಾಗಿಯೇ, 2019-20ರಿಂದ 2022-23ರವರೆಗೆ ನಿಗದಿತ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸಿದ ಮುಖ್ಯ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳ ಹೆಸರು ಮತ್ತು ಅವರ ಸಹಿಯನ್ನು ಒಳಗೊಂಡ ಮಾಹಿತಿ ನೀಡುವಂತೆ ತನಿಖಾ ತಂಡದ ಮುಖ್ಯಸ್ಥರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳಲ್ಲಿನ ಸಹಿಯು ಅವರದ್ದೆಯೇ ಅಥವಾ ನಕಲು ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ಈ ಸೂಚನೆ ನೀಡಲಾಗಿದೆ.