ಪಾಕಿಸ್ತಾನದ 8 ಯೋಧರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಜಾಗತಿಕ ಅವಮಾನದಿಂದ ಪಾರಾಗಲು ಪಾಕಿಸ್ತಾನವು ಅವರು ನಮ್ಮ ಸೈನಿಕರಲ್ಲ ಎಂದು ಹೇಳಿದೆ. ಇದಕ್ಕೆ ಪ್ರತಿಯಾಗಿ, ಯೋಧರು ತಮ್ಮ ಗುರುತಿನ ಚೀಟಿ ತೋರಿಸಿ ತಮ್ಮದೇ ಸರ್ಕಾರವನ್ನು ಪ್ರಶ್ನಿಸುವ ವಿಡಿಯೋವನ್ನು ಬಲೂಚಿಗಳು ಬಿಡುಗಡೆ ಮಾಡಿದ್ದಾರೆ.

ಇಸ್ಲಾಮಾಬಾದ್‌: ದೇಶದ ರಕ್ಷಣೆಗೆ ಪ್ರಾಣವನ್ನೇ ಒತ್ತೆಯಿಟ್ಟ ತನ್ನ 8 ಸೈನಿಕರನ್ನು ‘ನಮ್ಮವರಲ್ಲ’ ಎನ್ನುವ ಮೂಲಕ ಪಾಕಿಸ್ತಾನ ಸರ್ಕಾರ ಅವರನ್ನು ಬಲೂಚಿಗಳ ಕೈಯ್ಯಲ್ಲಿ ಸಾಯಲು ಬಿಟ್ಟಿದೆ. ಇದರೊಂದಿಗೆ ಪಾಕಿಸ್ತಾನದ ಬಣ್ಣ ಮತ್ತೊಮ್ಮೆ ಬಯಲಾಗಿದೆ.

ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿರುವ ಬಲೂಚಿಗಳು ಮತ್ತು ಪಾಕ್‌ ಸೇನೆ ನಡುವೆ ಕಳೆದೊಂದು ವರ್ಷದಿಂದ ಭೀಕರ ಕಾಳಗ ನಡೆಯುತ್ತಿದೆ. ಈ ನಡುವೆ ಇತ್ತೀಚೆಗೆ ಪಾಕ್‌ನ 8 ಯೋಧರನ್ನು ಒತ್ತೆ ಇಟ್ಟುಕೊಂಡಿದ್ದ ಬಲೂಚಿ ಹೋರಾಟಗಾರರು, ಅವರನ್ನು ಬಿಡುಗಡೆ ಮಾಡಬೇಕಿದ್ದಲ್ಲಿ ಪಾಕ್‌ ವಶದಲ್ಲಿರುವ ತಮ್ಮ ಹೋರಾಟಗಾರರ ಬಿಡುಗಡೆ ಮಾಡಬೇಕು ಎಂದು ಷರತ್ತು ಒಡ್ಡಿದ್ದಾರೆ. ಒಂದು ವೇಳೆ ಫೆ.22ರೊಳಗೆ ಬಲೂಚ್‌ ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದಲ್ಲಿ, ವಶದಲ್ಲಿರುವ ಎಲ್ಲಾ ಯೋಧರನ್ನು ಮರಣದಂಡನೆಗೆ ಗುರಿಮಾಡುವುದಾಗಿ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

ಯಾವುದೇ ಯೋಧರು ಸೆರೆ ಸಿಕ್ಕಿಲ್ಲ

ಆದರೆ ತಮ್ಮ ಯೋಧರು ಒತ್ತೆ ಸಿಕ್ಕಿದ್ದಾರೆ ಎಂದು ಒಪ್ಪಿಕೊಂಡರೆ ಜಾಗತಿಕ ಮಟ್ಟದಲ್ಲಿ ಅವಮಾನ ಆಗುತ್ತದೆ ಎನ್ನುವ ಕಾರಣಕ್ಕಾಗಿ, ನಮ್ಮ ಯಾವುದೇ ಯೋಧರು ಸೆರೆ ಸಿಕ್ಕಿಲ್ಲ ಎಂದು ಪಾಕ್‌ ಸೇನೆ ಬಡಾಯಿ ಕೊಚ್ಚಿಕೊಂಡಿತ್ತು. ಅದರ ಬೆನ್ನಲ್ಲೇ ತಮ್ಮ ವಶದಲ್ಲಿರುವ ಸಮವಸ್ತ್ರದಲ್ಲಿರುವ 8 ಪಾಕ್‌ ಯೋಧರ ವಿಡಿಯೋಗಳನ್ನು ಬಲೂಚಿಗಳು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಆಸೀಸ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದೆವು.! ಪಾಕಿಸ್ತಾನ ಹಾಕಿ ಅವ್ಯವಸ್ಥೆ ಬಿಚ್ಚಿಟ್ಟ ನಾಯಕನಿಗೆ 2 ವರ್ಷ ಬ್ಯಾನ್!

ನಾನು ನಿಮ್ಮವರಲ್ಲ ಎಂದರೆ ಮತ್ಯಾರು? ವಿಡಿಯೋದಲ್ಲಿ ಪಾಕ್ ಯೋಧರ ಪ್ರಶ್ನೆ

ಬಿಎಲ್‌ಎಯ ಮಾಧ್ಯಮ ವಿಭಾಗ ಹಕ್ಕಲ್‌ ಹಂಚಿಕೊಂಡಿರುವ ವಿಡಿಯೋದಲ್ಲಿ 8 ಸೈನಿಕರು ತಮ್ಮ ಸ್ವಂತ ಮತ್ತು ರಾಷ್ಟ್ರೀಯ ಗುರುತಿನ ದಾಖಲೆಗಳನ್ನು ಕ್ಯಾಮೆರಾಗೆ ತೋರಿಸುತ್ತಾ, ‘ನಾವು ಪಾಕ್‌ ಯೋಧರಲ್ಲ ಎಂದು ಸೇನೆ ಹೇಗೆ ಹೇಳಲು ಸಾಧ್ಯ? ಇದು ಪಾಕ್‌ ಸರ್ಕಾರವಲ್ಲದೆ ಯಾರು ಕೊಟ್ಟಿರುವ ಗುರುತಿನ ಚೀಟಿ? ನಾವು ನಿಮ್ಮವರಲ್ಲ ಎಂದು ಹೇಳುವುದೇ ಆಗಿದ್ದರೆ ಸೇನೆಗೇಕೆ ಸೇರಿಸಿಕೊಂಡಿರಿ?’ ಎಂದು ತಮ್ಮ ಸರ್ಕಾರ ಮತ್ತು ಸೇನೆಯನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದು.