ಮತದಾನಕ್ಕೂ ಮುನ್ನ ಜೆಡಿಎಸ್‌ನ 2ನೇ ವಿಕೆಟ್ ಪತನ: ಕಾಂಗ್ರೆಸ್ ಒತ್ತಡಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್
ಮಂಗಳೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಅವರು ತಾವು ಸಲ್ಲಿಕೆ ಮಾಡಿದ್ದ ನಾಮಪತ್ರವನ್ನು ವಾಪಸ್ ಪಡೆದುಕೊಂಡು, ಯಾರ ಕೈಗೂ ಸಿಗದಂತೆ ನಾಪತ್ತೆ ಆಗಿದ್ದಾರೆ.
ದಕ್ಷಿಣ ಕನ್ನಡ (ಏ.24): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ವಿರುದ್ಧ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಪತ್ರವನ್ನು ವಾಪಸ್ ಪಡೆದುಕೊಂಡು ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಮೂಲಕ ಜೆಡಿಎಸ್‌ನಿಂದ ರಾಜ್ಯದಲ್ಲಿ 207 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಮತದಾನಕ್ಕೂ ಮುನ್ನವೇ 2ನೇ ವಿಕೆಟ್ ಬಿದ್ದು ಹೋಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ರಾಜ್ಯದಲ್ಲಿ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರುದಲ್ಲಿ ಯು.ಟಿ. ಖಾದರ್ ವಿರುದ್ದ ಸ್ಪರ್ಧೆ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ತಮ್ಮ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಜೆಡಿಎಸ್‌ನಿಂದ ಬಿ-ಫಾರಂ ಪಡೆದು ಸಲ್ಲಿಕೆ ಮಾಡಿದ್ದ ನಾಮಪತ್ರವನ್ನು ಇಂದು (ಸೋಮವಾರ) ವಾಪಾಸ್ ಪಡೆದು ನಾಪತ್ತೆಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಫೋನ್ ಸ್ವಿಚ್ಡ್ ಆಫ್ ಮಾಡಿ ನಾಪತ್ತೆ ಆಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಉಲ್ಲಾಳ ಕ್ಷೇತ್ರದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಇದೀಗ ಜೆಡಿಎಸ್ ಅಭ್ಯರ್ಥಿ ನಾಪತ್ತೆಯು ಹಲವು ಅನುಮಾನ ವ್ಯಕ್ತವಾಗಿವೆ. ಕಾಂಗ್ರೆಸ್‌ನ ಅಭ್ಯರ್ಥಿ ಮಾಜಿ ಸಚಿವ ಯು.ಟಿ. ಖಾದರ್ ಅವರ ಒತ್ತಡಕ್ಕೆ ಮಣಿದು ಜೆಡಿಎಸ್‌ನ ಅಭ್ಯರ್ಥಿ ಅಲ್ತಾಫ್ ನಾಮ ಪತ್ರ ವಾಪಸ್ ಪಡೆದಿದ್ದಾರೆ ಎಂಬ ಅನುಮಾನಗಳು ಕೂಡ ಕಾಡುತ್ತಿವೆ.
ಸರ್ಕಾರಿ ನೌಕರರಿಗೆ ಸಂಕಷ್ಟ ತಂದಿಟ್ಟ ಚುನಾವಣಾ ಆಯೋಗ: ಎಫ್‌ಐಆರ್ ದಾಖಲಿಸಲು
ಮಂಗಳೂರು ಕ್ಷೇತ್ರದಲ್ಲಿ ಯು.ಟಿ. ಖಾದರ್ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಅಲ್ತಾಫ್ ಅವರು, ಕ್ಷೇತ್ರದಲ್ಲಿ ಭಾರಿ ದೊಡ್ಡಮಟ್ಟದ ಸಂಚಲನ ಮೂಡಿಸಿದ್ದರು. ಆದರೆ, ಈಗ ಕೊನೆಯ ದಿನದಲ್ಲಿ ನಾಮಪತ್ರ ವಾಪಸ್ ಪಡೆದು ಜೆಡಿಎಸ್ ನಾಯಕರ ಸಂಪರ್ಕಕ್ಕೂ ಸಿಗದೇ ಪರಾರಿ ಆಗಿದ್ದಾರೆ. ಎಸ್‌ಡಿಪಿಐನಿಂದ ರಿಯಾಜ್ ಸ್ಪರ್ಧೆ ಬೆನ್ನಲ್ಲೇ ಜೆಡಿ ಎಸ್ ನಿಂದ ಅಲ್ತಾಫ್ ಸ್ಪರ್ಧೆ ಮಾಡಿದ್ದರು. ಒಟ್ಟಾರೆ ಮಂಗಳೂರುದಲ್ಲಿ ಇಬ್ಬರು ಮುಸ್ಲಿಂ ನಾಯಕರ ಸ್ಪರ್ಧೆಯಿಂದ ಕಾಂಗ್ರೆಸ್‌ನ ಮತಗಳು ವಿಭಜನೆ ಆಗುವ ಭೀತಿ ಎದುರಾಗಿತ್ತು. ಈಗ ಅಭ್ಯರ್ಥಿಯ ನಡೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ಭಾರಿ ಮುಖಭಂಗ ಉಂಟಾಗಿದೆ.
ಅಲ್ತಾಫ್ ಕುಂಪಲ ಹಲವು ವರ್ಷಗಳಿಂದ ಎಸ್‌ಎಸ್‌ಎಫ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಜೆಡಿಎಸ್ ಪಕ್ಷದಲ್ಲಿ ಕಾಣಿಸಿಕೊಂಡಿದ್ದರು. ವಿಧಾನಪರಿಷತ್ ಸದಸ್ಯ ಬಿ.ಎಂ ಫಾರೂಕ್ ಮನವೊಲಿಸಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಮಂಗಳೂರು ನಗರಸಭೆಯ ಜೆಡಿಎಸ್ ಕೌನ್ಸಿಲರ್ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ಭರ್ಜರಿ ಮೆರವಣಿಗೆ ಮಾಡಿಕೊಂಡು ಚುನಾವಣಾ ಅಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಈಗ ಅಲ್ತಾಫ್ ತನ್ನ ಪಕ್ಷದ ಮುಖಂಡರುಗಳಿಗೆ ಮಾಹಿತಿಯನ್ನೇ ಕೊಡದೇ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದಾರೆ.
ಅಖಾಡಕ್ಕಿಳಿದ ಅಮಿತ್ ಶಾ.. ಶುರುವಾಯ್ತು ಬಿಜೆಪಿ ಚಾಣಕ್ಯನ ಅಸಲಿ ಆಟ..!
ಏಪ್ರಿಲ್ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.