ಕಾಮಗಾರಿಯಲ್ಲಿ ಕಮಿಷನ್‌ ಆರೋಪಕ್ಕೆ ತಿರುಗೇಟು, ಮೇಲುಕೋಟೆಗೆ ಬರಲು ಸಂಸದೆ ಸುಮಲತಾ ಆಹ್ವಾನ

ಮದ್ದೂರು(ಅ.19): ಕಾಮಗಾರಿಯಲ್ಲಿ ಕಮೀಷನ್‌ ಪಡೆದಿದ್ದಾರೆಂಬ ಜೆಡಿಎಸ್‌ ಆರೋಪಕ್ಕೆ ತಿರುಗೇಟು ನೀಡಿರುವ ಸಂಸದೆ ಸುಮಲತಾ, ಜೆಡಿಎಸ್‌ ಶಾಸಕರಿಗೆ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ನೀಡಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂಸದೆ ಸುಮಲತಾ ಮತ್ತು ಬೆಂಬಲಿಗರು ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪಕ್ಕೆ ಆಣೆ, ಪ್ರಮಾಣ ಮಾಡಲು ನಾನು ಸಿದ್ಧ ಎಂದು ಘೋಷಿಸಿದರು.

ನಾನೇನು ಪ್ರಮಾಣ ಮಾಡುವುದಾಗಿ ಕರೆದಿರಲಿಲ್ಲ. ಅವರೆ, ಕರೆದಿದ್ದರು. ನಾನು ಯಾವಾಗಲೂ ಸಿದ್ದಳಾಗಿದ್ದೇನೆ. ಅವರೇ ಸೇರಿಸಲಿ, ಶಾಸಕರು ಯಾರ್ಯಾರಿದ್ದಾರೋ ಎಲ್ಲರೂ ಬರಲಿ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಲಿ ಎಂದು ಶಾಸಕರಾದ ಸಿ.ಎಸ್‌. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ಸವಾಲು ಹಾಕಿದರು.

Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ

ಸೋಲುವುದೇ ಆದರೆ, ಏನು ಮಾಡಲು ಸಾಧ್ಯ?:

ಚುನಾವಣೆಗಳಲ್ಲಿ ಸೋತು ಸೋತು ಕೊನೆಗೊಮ್ಮೆ ಗೆದ್ದು ಬಂದಿದ್ದಾರೆ. ಇದೇ ಕೊನೆ ಎಂದು ತೀರ್ಮಾನಕ್ಕೆ ಬಂದಿರುವಾಗ ಯಾರು ಏನು ಮಾಡಲು ಸಾಧ್ಯ. ನಾವು ಮಾತನಾಡಬಾರದು. ನಮ್ಮ ಕೆಲಸಗಳು ಮಾತನಾಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಯಾರು ಏನು ಬೇಕಾದರೂ ಹೇಳಬಹುದು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಏನು ಮಾಡಿದ್ದಾರೆಂಬುದನ್ನು ಸಾಬೀತು ಪಡಿಸಲಿ:

ಭಾವನೆಗಳಲ್ಲಿ ಅಹಂಕಾರ ತುಂಬಿಕೊಂಡಿರುತ್ತೋ ಅಲ್ಲಿ ಇಂತಹ ಮಾತುಗಳು ಬರುತ್ತವೆ. ಅಲ್ಲಿ ವಿವೇಚನೆ ದೂರವಾಗಿರುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ಜನರಿಗೆ ಗೊತ್ತಾಗಿದೆ. ನಾನು ಸಂಸದೆಯಾಗಿ ಅಧಿಕಾರಕ್ಕೆ ಬರುವ ಮುನ್ನ ಅವರು ಶಾಸಕರಾಗಿದ್ದರು. ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. ಅವರ ತಾಲೂಕಿನಲ್ಲಿ ಏನೇನು ಲೋಪದೋಷಗಳು, ಸಮಸ್ಯೆಗಳು ಇವೆ. ಅದಕ್ಕೆಲ್ಲಾ ಉತ್ತರ ಇಲ್ಲ. ಯಾವ್ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಜಿಲ್ಲೆಯ ಅಭಿವೃದ್ಧಿಯನ್ನು ಹೇಗೆ ಮಾಡಿದ್ದಾರೆ ಎಂಬುದರ ಬಗ್ಗೆ ದಾಖಲೆ ಕೊಡಿ, ಆಡಳಿತ ಪಕ್ಷದಲ್ಲಿದ್ದವರು ನೀವು. ನಾನು ಯಾವ ಪಕ್ಷದಲ್ಲೂ ಇಲ್ಲ. ಪಕ್ಷೇತರ ಸಂಸದೆಯಾಗಿದ್ದೇನೆ. ಆದರೂ ನಾನೇನು ಈ ಜಿಲ್ಲೆಗೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದರ ಬಗ್ಗೆ ಪಟ್ಟಿಕೊಡುತ್ತೇನೆ ಎಂದು ಹೇಳಿದರು. ನಾನು ನನ್ನ ಕೆಲಸದ ಬಗ್ಗೆ ಚಿಂತನೆ ಮಾಡುತ್ತೇನೆಯೇ ಹೊರತು ರಾಜಕಾರಣದ ಬಗ್ಗೆ ಯೋಚನೆ ಮಾಡುವುದಿಲ್ಲ. ನನಗೆ, ನನ್ನ ಮಗನಿಗೆ, ಅಣ್ಣ-ತಮ್ಮನಿಗೆ
ಏನಾಗಬೇಕು ಎಂಬುದರ ಬಗ್ಗೆ ಯೋಚನೆ ಮಾಡಲ್ಲ. ಅಭಿವೃದ್ಧಿ ಪರವಾಗಿ ಚಿಂತನೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಘೋಷಣೆ ಮಾಡಿದ್ದಾರೆ :

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು .780 ಕೋಟಿಗೂ ಹೆಚ್ಚು ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಕೆ.ಆರ್‌.ಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳೇ .600 ಕೋಟಿ ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಒಂದು ತಿಂಗಳೊಳಗೆ ಎಲ್ಲರಿಗೂ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.

ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ: ಸುಮಲತಾ ವಿರುದ್ಧ ಅನ್ನದಾನಿ ಕಿಡಿ

ಕಳೆದ 75 ವರ್ಷಗಳಿಂದ ಈ ಪ್ರಮಾಣದಲ್ಲಿ ಮಳೆ ಬಂದಿಲ್ಲ. ಈ ರೀತಿಯ ಮಳೆಯನ್ನು ಯಾರೂ ನೋಡಿಯೂ ಇಲ್ಲ. ಪ್ರತಿಯೊಂದಕ್ಕೂ ತಕ್ಷಣ ಪರಿಹಾರ ಕಷ್ಟಸಾಧ್ಯ. ಎಲ್ಲೆಲ್ಲಿ ಯಾರ್ಯಾರಿಗೆ ನಷ್ಟಆಗಿದೆ. ಅದಕ್ಕೆ ತಕ್ಕ ಪರಿಹಾರ ಕೊಡಿಸಬೇಕು ಎಂಬುದು ನಮ್ಮ ಒತ್ತಾಯವೂ ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೇಂದ್ರ ಸರ್ಕಾರ ಎನ್‌ಡಿಆರ್‌ಎಂ ಮೂಲಕ ಪರಿಹಾರ ನೀಡುತ್ತೆ. ರಾಜ್ಯ ಸರ್ಕಾರವೂ ಸಹ ಪರಿಹಾರ ನೀಡುತ್ತಿದೆ. ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಪರಿಹಾರ ಕಾರ್ಯ ಶೀಘ್ರ ಪ್ರಾರಂಭವಾಗಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯಗಳಲ್ಲಿ ಒಕ್ಕಲಿಗ ಸಮುದಾಯವೂ ಒಂದಾಗಿದೆ. ಅಲ್ಲೂ ಸಹ ಒಂದಷ್ಟುಬೇಡಿಕೆಗಳಿವೆ. ಅದರಲ್ಲಿ ನ್ಯಾಯ ಇದೆ ಎನ್ನಿಸುತ್ತೆ. ಮೀಸಲಾತಿ ಕೇಳುವುದು ತಪ್ಪಿಲ್ಲ. ಅದನ್ನು ಚರ್ಚೆ ಮಾಡಿ ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟವಿಚಾರ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಶಶಿಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಕೋಣಸಾಲೆ ಜಯರಾಮು ಇತರರಿದ್ದರು.