Asianet Suvarna News Asianet Suvarna News

ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ: ಸುಮಲತಾ ವಿರುದ್ಧ ಅನ್ನದಾನಿ ಕಿಡಿ

ಜೆಡಿಎಸ್‌ ಶಾಸಕರ ವಿರುದ್ಧ ಚಿಲ್ಲರೆ ಆರೋಪ ಮಾಡುವುದನ್ನು ಬಿಟ್ಟು ಸಂಸದರಾಗಿ ಜಿಲ್ಲೆಯ ಜನರು ಮೆಚ್ಚುವಂತಹ ಕೆಲಸ ಮಾಡುವಂತೆ ಶಾಸಕ ಕೆ.ಅನ್ನದಾನಿ ಸಂಸದೆ ಸುಮಲತಾ ಅಂಬರೀಶ್‌ ವಿರುದ್ಧ ಕಿಡಿಕಾರಿದರು. 

mla k annadani slams to mp sumalatha ambareesh over commission allegations at mandya gvd
Author
First Published Sep 14, 2022, 12:03 PM IST

ಮಳವಳ್ಳಿ (ಸೆ.14): ಜೆಡಿಎಸ್‌ ಶಾಸಕರ ವಿರುದ್ಧ ಚಿಲ್ಲರೆ ಆರೋಪ ಮಾಡುವುದನ್ನು ಬಿಟ್ಟು ಸಂಸದರಾಗಿ ಜಿಲ್ಲೆಯ ಜನರು ಮೆಚ್ಚುವಂತಹ ಕೆಲಸ ಮಾಡುವಂತೆ ಶಾಸಕ ಕೆ.ಅನ್ನದಾನಿ ಸಂಸದೆ ಸುಮಲತಾ ಅಂಬರೀಶ್‌ ವಿರುದ್ಧ ಕಿಡಿಕಾರಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಜೆಡಿಎಸ್‌ ಶಾಸಕರು ಕಮಿಷನ್‌ ಪಡೆದಿರುವ ಆರೋಪ ವಿಚಾರವಾಗಿ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸದೆ ಸುಮಲತಾ ಬರೀ ಫೋಸ್‌ ಕೊಡುವ ಕೆಲಸ ಮಾಡುತ್ತಿದ್ದಾರೆ. ಸಂಸದರನ್ನು ಜನ ಎಲ್ಲಿ ಮರೆತು ಬಿಡುವರೋ ಎಂಬ ಕಾರಣಕ್ಕಷ್ಟೇ ಮಂಡ್ಯಕ್ಕೆ ಬರುತ್ತಾರೆ. ಸಂಸದರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಕ್ರಿಯಿಸಿದರು.

ನಾವು ಯಾರ ಬಳಿಯೂ ಕಮಿಷನ್‌ ಪಡೆಯುವ ಕೆಲಸ ಮಾಡಿಲ್ಲ. ಬಹುಶಃ ಅವರು ಕಮಿಷನ್‌ ಪಡೆಯುತ್ತಿದ್ದರು ಅನ್ನಿಸುತ್ತೆ. ಅದನ್ನು ನೆನಪಿಸಿಕೊಂಡು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಜರಿದರು. ಕಾಮಗಾರಿಗೆ ನಾವೆಲ್ಲಾ ಪೂಜೆ ಮಾಡಿದ ಮೇಲೆ ಏನು ಪರಿಶೀಲನೆ ಮಾಡ್ತೀರಿ. ನೀವು ಮಂಡ್ಯಕ್ಕೆ ಬರೋದು ಕೇವಲ ಕಾಮಗಾರಿ ಬರಿ ವೀಕ್ಷಣೆ ಮಾಡೋಕಾ. ಮಂಡ್ಯಕ್ಕೆ ಕೇಂದ್ರ ಸರ್ಕಾರದಿಂದ ಏನು ಅನುದಾನ ತಂದಿದ್ದೀರಿ?. ಆದರ್ಶ ಗ್ರಾಮ, ಪಿಎಂಜಿಎಸ್‌ವೈ ಅನುದಾನ ನಿಮ್ಮದಾ. ಕೇಂದ್ರದ್ದು ಶೇ.25, ನಮ್ಮ ರಾಜ್ಯದು ಶೇ.75 ಕೊಡುತ್ತೇವೆ. ಆದರ್ಶ ಗ್ರಾಮಕ್ಕೂ ನಮ್ಮ ಪಾಲು ಇದೆ. ನಿಮ್ಮಿಂದ ಜಿಲ್ಲೆಗೆ ಪೂರ್ಣ ಪ್ರಮಾಣದ ಕೆಲಸ ಏನಿದೆ ಎಂದು ಪ್ರಶ್ನಿಸಿದರು.

ದಾಖಲೆಗಳನ್ನು ತಂದು ಆಣೆ-ಪ್ರಮಾಣ ಮಾಡಿ: ಜೆಡಿಎಸ್‌ ಶಾಸಕರಿಗೆ ಸಂಸದೆ ಸುಮಲತಾ ಬಹಿರಂಗ ಆಹ್ವಾನ

ಲೋಕಸಭಾ ಚುನಾವಣೆಯಲ್ಲಿ ಮಳವಳ್ಳಿ ಸೊಸೆ ಎಂದೇಳಿಕೊಂಡು 30 ಸಾವಿರ ಲೀಡ್‌ ತೆಗೆದುಕೊಂಡಿರಿ. ಸೊಸೆ ಎಂದು ಜನರು ಕೊಟ್ಟಿರುವ ಗೌರವವನ್ನು ಉಳಿಸಿಕೊಳ್ಳಿ. ನೀವು ಹೇಳುವುದಕ್ಕೆ ನಾವು ಬದ್ಧರಾಗಿರುತ್ತೇವೆ. ಕಮಿಷನ್‌ ತೆಗೆದುಕೊಳ್ಳುತ್ತಾರೇಂತ ಚಿಲ್ಲರೆ ಆರೋಪ ಮಾಡುವುದನ್ನು ಬಿಟ್ಟು ಕೆಲಸ ಮಾಡಿ. ಸಂಸದರಾಗಿದ್ದೀರಿ. ತೂಕವಾಗಿ ಇರುವುದನ್ನು ಕಲಿಯಿರಿ. ಮಂಡ್ಯ ಜಿಲ್ಲೆಗೆ ದೊಡ್ಡ ಫ್ಯಾಕ್ಟರಿ ತನ್ನಿ, ಉದ್ಯೋಗ ಸೃಷ್ಟಿ ಮಾಡಿ ಎಂದು ನೀತಿಪಾಠ ಹೇಳಿದರು. ಹೆದ್ದಾರಿ ಕಾಮಗಾರಿ ಪರಿಶೀಲನೆ ಮಾಡೋದಕ್ಕೆ ನೀವೇನು ಟೆಕ್ನಿಕಲ್‌ ಎಕ್ಸ್‌ಪರ್ಟಾ, ನಿಮ್ಮ ಜೊತೆ ಯಾವ ಎಂಜಿನಿಯರ್‌ ಬಂದಿದ್ದರು. 

ಏನು ಸಮಸ್ಯೆಯಾಗಿತ್ತು ಕಾಮಗಾರಿಯಲ್ಲಿ. ಯಾರು ದುಡ್ಡು ಪಡೆದಿದ್ದಾರೆ ಅಂತ ಹೆಸರೇಳಿ. ಯಾರು ಏನು ಮಾಡಿದ್ದಾರೆ ಅಂತ ಬಹಿರಂಗ ಚರ್ಚೆ ಬಂದರೆ ಗೊತ್ತಾಗುತ್ತೆ. ಮಾಡೋ ಕೆಲಸ ಮಾಡಿ, ದೊಡ್ಡ ಪ್ರಾಜೆಕ್ಟ್ ತಂದುಕೊಡಿ ಮಂಡ್ಯಕ್ಕೆ ಎಂದು ಸಲಹೆ ನೀಡಿದರು. ನಾವು ಕಷ್ಟಪಟ್ಟು ಪಾದಯಾತ್ರೆ ಮಾಡಿ ಮೈಷುಗರ್‌ ಆರಂಭಕ್ಕೆ ಹೋರಾಟ ಮಾಡಿದೆವು. ರೈತರ ಹೋರಾಟದಿಂದ ಮೈಷುಗರ್‌ಗೆ ಮರುಜೀವ ಬಂದಿತು. ಒ ಅಂಡ್‌ ಎಂಗೆ ಕೊಡೋಕೆ ತಯಾರಾಗಿದ್ದವರು ನೀವು. ಖಾಸಗೀಕರಣದ ಪರವಾಗಿದ್ದವರು ನೀವು. ನಾವು ಸರ್ಕಾರದ ವಿರುದ್ಧ ಗುಡುಗಿ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿದವರು ಎಂದು ಗುಡುಗಿದರು.

ಮಂಡ್ಯದಲ್ಲೊಂದು ವಿಚಿತ್ರ ಮಿಸ್ಸಿಂಗ್ ಕೇಸ್: ತನ್ನನ್ನ ತಾನು ಕೊಲೆಯಾದ ರೀತಿ ಬಿಂಬಿಸಿ ಗೋವಾ ಟ್ರಿಪ್ ಮಾಡಿದ್ದ ಭೂಪ

ಸಂಸದರಾಗಿ ಮಳವಳ್ಳಿಗೆ ರೈಲು ಬರುವ ಹಾಗೆ ಮಾಡಿ. ಯಾರದೋ ಮಾತು ಕೇಳಿಕೊಂಡು ಬರುವುದು ಸರಿಯಲ್ಲ. ನಿಮ್ಮ ಜೊತೆ ಇರುವವರ ಮಾತು ಕೇಳುವುದನ್ನು ಬಿಟ್ಟು ಕೆಲಸ ಮಾಡಿ. ಶಾಸಕರ ಬಗ್ಗೆ ಕಮಿಷನ್‌ ಆರೋಪ ಮಾಡಿದರೆ ಏನು ಮಾಡಬೇಕೆಂದು ನಮಗೂ ಗೊತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಏನು ನಡೆದಿದೆ. ಪ್ರತಾಪ್‌ ಸಿಂಹ ಹಾಗೂ ನಿಮ್ಮ ನಡುವೆ ಏನು ಗಲಾಟೆ ನಡೆದಿದೆ. ನಾವು ಶುರು ಮಾಡುತ್ತೇವೆ. ಆಗ ಯಾರು ಏನೂಂತ ನಿಮಗೆ ಗೊತ್ತಾಗುತ್ತೆ ಎಂದರು.

Follow Us:
Download App:
  • android
  • ios