Mandya: ರಾಜಧನ ವಸೂಲಿ ಪರಿಣಾಮಕಾರಿಯಾಗಿಲ್ಲ: ಸಂಸದೆ ಸುಮಲತಾ
ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುವವರಿಂದ ರಾಜಧನ ಸಂಗ್ರಹ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ರಾಜಧನ ವಸೂಲಿ ಸಮರ್ಪಕವಾಗಿದ್ದರೆ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯ (ಸೆ.17): ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುವವರಿಂದ ರಾಜಧನ ಸಂಗ್ರಹ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ರಾಜಧನ ವಸೂಲಿ ಸಮರ್ಪಕವಾಗಿದ್ದರೆ ಅಭಿವೃದ್ಧಿ ಕೆಲಸಗಳಿಗೆ ವಿನಿಯೋಗಿಸಲು ಅನುಕೂಲವಾಗುತ್ತದೆ. ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜಧನ ಸಂಗ್ರಹದ ಬಗ್ಗೆ ಯಾವಾಗ ಕೇಳಿದರೂ ಏನಾದರೊಂದು ಸಬೂಬು ಹೇಳುತ್ತಲೇ ಇರುತ್ತಾರೆ. ನೋಟಿಸ್ ಕೊಟ್ಟಿದ್ದೇವೆ, ಕೋರ್ಟ್‌ಗೆ ಹೋಗಿದ್ದಾರೆ.
ಡ್ರೋನ್ ಸರ್ವೇ ಆಗಬೇಕು. ಇದೇ ಕಾರಣಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಅಧಿಕಾರಿಗಳ ಮಾತುಗಳನ್ನು ಕೇಳಿದರೆ ಗಣಿಗಾರಿಕೆ ನಡೆಸುವವರ ಪರವಾಗಿರುವವರಂತೆ ಮಾತನಾಡುತ್ತಿದ್ದಾರೆ ಎಂದು ಬೇಸರದಿಂದ ನುಡಿದರು. ಆಗ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಅವರು, ರಾಜಧನ ಕೊಡಬೇಕಾದವರು ಕೋರ್ಟ್‌ಗೆ ಹೋಗಿದ್ದಾರೆಂದು ಹೇಳಿದಾಕ್ಷಣ ಸುಮ್ಮನೆ ಕೂರಲಾಗುವುದಿಲ್ಲ. ರಾಜಧನ ವಸೂಲಿಗೆ ತಡೆಯಾಜ್ಞೆ ನೀಡಿದೆಯೇ, ಒಮ್ಮೆ ತಡೆಯಾಜ್ಞೆ ಇದ್ದರೆ ಅದನ್ನು ತೆರವುಗೊಳಿಸಲು ಕ್ರಮ ವಹಿಸಬೇಕು. ನಿಮಗೇನಾದರೂ ತೊಂದರೆಯಾಗುತ್ತಿದ್ದರೆ ನಮ್ಮ ಬಳಿ ಹೇಳಿ. ಪರಿಹಾರ ದೊರಕಿಸಿಕೊಡುತ್ತೇವೆ ಎಂದು ಗಣಿ ಅಧಿಕಾರಿಗಳಿಗೆ ತಿಳಿಸಿದರು.
ಸಮಾಜ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ: ಸಂಸದೆ ಸುಮಲತಾ
ಆಗ ಮತ್ತೆ ಸಂಸದೆ ಸುಮಲತಾ ಅವರು, ಮೊಕದ್ದಮೆಗಳು ಇರುವ ದಿನದಂದು ನ್ಯಾಯಾಲಯಕ್ಕೆ ಗಣಿ ಇಲಾಖೆಯಿಂದ ವಕೀಲರೇ ಹಾಜರಾಗುತ್ತಿಲ್ಲವೆಂಬ ಆರೋಪಗಳೂ ಇವೆ ಎಂದು ಹೇಳಿದಾಗ, ಅಂತಹ ಸಮಸ್ಯೆಗಳಿದ್ದರೆ ಹೇಳಿ ನಾವೇ ಕಾನೂನು ಸಲಹೆಗಾರರನ್ನು ಜೊತೆಗೆ ಪೊಲೀಸ್ ರಕ್ಷಣೆಯನ್ನು ದೊರಕಿಸಿಕೊಡುತ್ತೇವೆ ಎಂದು ಜಯರಾಂ ರಾಯಪುರ ಹೇಳಿದರು. ರಾಜಧನ ಸಂಗ್ರಹವಾದರೆ ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ನೆರವಾಗುತ್ತದೆ. ನೂರಾರು ಕೋಟಿ ರು. ರಾಜಧನ ವಸೂಲಿಯಾಗದೆ ಉಳಿದರೆ ಅಭಿವೃದ್ಧಿಗೆ ಹಿನ್ನಡೆಯಾಗುವುದಿಲ್ಲವೇ. ಅದಕ್ಕಾಗಿ ಬಾಕಿ ವಸೂಲಿಗೆ ಪ್ರತಿ ಸಭೆಯಲ್ಲೂ ಒತ್ತಡ ಹಾಕುತ್ತಿದ್ದೇನೆ.
ಇಡೀ ರಾಜ್ಯದಲ್ಲೇ ರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ ಎಂದು ಸಂಸದೆ ಸುಮಲತಾ ಅಸಮಾಧಾನ ವ್ಯಕ್ತಪಡಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಅಂಬುಜಾ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಎಲ್ಲೆಡೆ ಕ್ರಮ ವಹಿಸಿದ್ದೇವೆ. ಏಪ್ರಿಲ್‌ನಿಂದ ಇಲ್ಲಿಯವರೆಗೆ ಅಕ್ರಮವಾಗಿ ಕಟ್ಟಡ ಸಾಮಗ್ರಿಗಳನ್ನು ಸಾಗಿಸುವವರ ವಿರುದ್ಧ 43 ಪ್ರಕರಣಗಳನ್ನು ದಾಖಲಿಸಿ, 20 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. ಇತ್ತೀಚೆಗೆ ಪಾಂಡವಪುರದಲ್ಲಿ ಪರವಾನಗಿ ಇಲ್ಲದೆ ಗಣಿಗಾರಿಕೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 25 ಲಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಿವರಿಸಿದರು.
Mandya: ಕೇಂದ್ರೀಯ ಶಾಲೆಗೆ ಕಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ
ಜಿಲ್ಲೆಯಲ್ಲಿ ಹತ್ತು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, 2 ಚೆಕ್‌ಪೋಸ್ಟ್‌ಗಳಲ್ಲಿ ಗಣಿ ಅಧಿಕಾರಿಗಳೇ ಹಗಲು ರಾತ್ರಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಭೂ ವಿಜ್ಞಾನಿ ಅಂಬುಜಾ ಹೇಳಿದಾಗ, ಅದನ್ನು ಯಾವ ರೀತಿ ಪರಿಶೀಲಿಸುತ್ತಿದ್ದೀರಿ. ವಿಡಿಯೋ, ಫೋಟೋ ಏನಾದರೂ ಇದೆಯಾ ಎಂದು ಸುಮಲತಾ ಕೇಳಿದಾಗ, ಇಲ್ಲ, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕುತ್ತಿದ್ದಾರೆ ಎಂದು ಅಂಬುಜಾ ಉತ್ತರಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾ ಎಲ್.ಹುಲ್ಮನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜು ಇದ್ದರು.