ಒಂಟಿ ಹೆಸರು ಹೊಂದಿರುವ 110 ರಿಂದ 120 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಪ್ರಕಟಿಸುವ ಇರಾದೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೆ. ಹೀಗಾಗಿ ಇಂದಿನ  ಸಭೆಯಲ್ಲಿ ರಾಜ್ಯ ನಾಯಕತ್ವದಿಂದ ಶಿಫಾರಸಾಗಿರುವ ಒಂಟಿ ಹೆಸರಿನ ಕ್ಷೇತ್ರಗಳ ಬಗ್ಗೆ ಚುನಾವಣಾ ಸಮಿತಿ ತನ್ನ ನಿರ್ಣಯ ನೀಡಲಿದ್ದು, ಒಂದೆರಡು ದಿನಗಳಲ್ಲೇ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ.  

ಬೆಂಗಳೂರು(ಮಾ.17): ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಮಹತ್ವದ ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆ ದೆಹಲಿಯಲ್ಲಿ ಇಂದು(ಶುಕ್ರವಾರ) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ನಾಯಕತ್ವ ಹಾಗೂ ಪ್ರಕಾಶ್‌ ಮೋಹನ್‌ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿ ಶಿಫಾರಸು ಮಾಡಿರುವ ಒಂಟಿ ಹೆಸರಿರುವ ಸುಮಾರು 120 ಕ್ಷೇತ್ರಗಳು ಮತ್ತು ತೀವ್ರ ಸ್ಪರ್ಧೆ ಇರುವ ಹಾಗೂ ವಲಸೆ ಪಕ್ಷಿಗಳಿಗೆ ಮೀಸಲಿರಿಸಿರುವ ಕ್ಷೇತ್ರಗಳು ಸೇರಿ ಉಳಿದ 104 ಕ್ಷೇತ್ರಗಳ ಪ್ಯಾನೆಲ್‌ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.

ಮೂಲಗಳ ಪ್ರಕಾರ, ಒಂಟಿ ಹೆಸರು ಹೊಂದಿರುವ 110 ರಿಂದ 120 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಪ್ರಕಟಿಸುವ ಇರಾದೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೆ. ಹೀಗಾಗಿ ಶುಕ್ರವಾರದ ಸಭೆಯಲ್ಲಿ ರಾಜ್ಯ ನಾಯಕತ್ವದಿಂದ ಶಿಫಾರಸಾಗಿರುವ ಒಂಟಿ ಹೆಸರಿನ ಕ್ಷೇತ್ರಗಳ ಬಗ್ಗೆ ಚುನಾವಣಾ ಸಮಿತಿ ತನ್ನ ನಿರ್ಣಯ ನೀಡಲಿದ್ದು, ಒಂದೆರಡು ದಿನಗಳಲ್ಲೇ ಮೊದಲ ಪಟ್ಟಿಪ್ರಕಟವಾಗುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಸಂಭಾವ್ಯ ಮೊದಲ ಪಟ್ಟಿ: ಕೋಲಾರದಿಂದ ಸಿದ್ದುಗೆ ಟಿಕೆಟ್‌, ರಾಮನಗರದಿಂದ ಡಿಕೆಸು ಇಲ್ಲ?

ಇದಾದ ನಂತರ ತೀವ್ರ ಸ್ಪರ್ಧೆಯಿರುವ ಕ್ಷೇತ್ರಗಳಿಗೆ ಎರಡು ಹಾಗೂ ಮೂರನೇ ಹಂತದಲ್ಲಿ ಪಟ್ಟಿ ಪ್ರಕಟವಾಗಬಹುದು ಅಥವಾ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇರವಾಗಿ ಹೈಕಮಾಂಡ್‌ನಿಂದ ಸೂಚನೆ ಬರಬಹುದು. ಆದರೆ, ಶುಕ್ರವಾರದ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಆಕಾಂಕ್ಷಿಗಳು ಹಾಗೂ ನಾಯಕರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆಯಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ಈ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ದೆಹಲಿಗೆ ತೆರಳಿದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಮುಂಜಾನೆ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ಉಳಿದಂತೆ ಬಹುತೇಕ ನಾಯಕರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ರಾಜ್ಯ ನಾಯಕತ್ವದ ಶಿಫಾರಸು:

ಈ ಬಾರಿ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕತ್ವವು ಸಾಧ್ಯವಾದಷ್ಟುಶೀಘ್ರ ಪಟ್ಟಿಅಂತಿಮಗೊಳಿಸಿ ಚುನಾವಣೆಗೆ ಸಿದ್ಧತೆ ನಡೆಸಲು ಅಭ್ಯರ್ಥಿಗಳಿಗೆ ಸಾಕಷ್ಟುಕಾಲಾವಕಾಶ ದೊರೆಯುವಂತೆ ಮಾಡಬೇಕು ಎಂದು 2 ತಿಂಗಳಿನಿಂದ ಆಯ್ಕೆ ಕಸರತ್ತು ನಡೆಸಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರು ಸತತ ಸಭೆ ನಡೆಸಿ ಎಲ್ಲ ಕ್ಷೇತ್ರಗಳಿಗೂ ಮೂರ್ನಾಲ್ಕು ಹೆಸರುಗಳ ಪ್ಯಾನೆಲ್‌ ಅಂತಿಮಗೊಳಿಸಿದ್ದರು.
ಇದಾದ ನಂತರ ಹೈಕಮಾಂಡ್‌, ಪ್ರಕಾಶ್‌ ಮೋಹನ್‌ ನೇತೃತ್ವದಲ್ಲಿ ಸ್ಕ್ರೀನಿಂಗ್‌ ಕಮಿಟಿಯನ್ನು ಇತ್ತೀಚೆಗೆ ರಾಜ್ಯಕ್ಕೆ ಕಳುಹಿಸಿ ಈ ಪಟ್ಟಿಪರಿಷ್ಕರಿಸುವ ಹೊಣೆ ನೀಡಿತ್ತು. ಈ ಸಮಿತಿಯೊಂದಿಗೆ ಸರಣಿ ಸಭೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಮಾರು 110 ರಿಂದ 120 ಕ್ಷೇತ್ರಗಳಿಗೆ ಒಂಟಿ ಹೆಸರಿರುವ ಪಟ್ಟಿಹಾಗೂ ಉಳಿದ ಕ್ಷೇತ್ರಗಳಿಗೆ ಪ್ಯಾನೆಲ್‌ ಅಂತಿಮಗೊಳಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ.

ಮೂಲಗಳ ಪ್ರಕಾರ, ನಾಲ್ಕೈದು ಮಂದಿಯನ್ನು ಹೊರತುಪಡಿಸಿ ಉಳಿದ ಎಲ್ಲ ಹಾಲಿ ಶಾಸಕರರಿರುವ ಕ್ಷೇತ್ರಗಳಿಗೆ ಒಂಟಿ ಹೆಸರು ಶಿಫಾರಸ್ಸಾಗಿದ್ದರೆ. ಇದಲ್ಲದೆ, ಸುಮಾರು 20 ರಿಂದ ಮೂವತ್ತು ಕ್ಷೇತ್ರಗಳಿಗೆ ಪಕ್ಷ ನಡೆಸಿದ ಸರ್ವೇಯಲ್ಲಿ ಆಕಾಂಕ್ಷಿಗಳ ಪೈಕಿ ಗೆಲ್ಲುವ ಸಾಧ್ಯತೆ ಅತಿ ಹೆಚ್ಚಿರುವವರ ಹೆಸರನ್ನು ನೇರವಾಗಿ ಟಿಕೆಟ್‌ ನೀಡುವಂತೆ ಶಿಫಾರಸು ಮಾಡಲಾಗಿದೆ.

ಚಿಕ್ಕಮಗಳೂರು ಅತಿರಥರ ಅಖಾಡ: ಲಿಂಗಾಯತ VS ಒಕ್ಕಲಿಗ ಸ್ಪರ್ಧೆಗೆ ವೇದಿಕೆಯಾಗುತ್ತಾ ಕಾಫಿನಾಡು..?

ತೀವ್ರ ಸ್ಪರ್ಧೆಯಿರುವ, ಟಿಕೆಟ್‌ ತಪ್ಪಿದರೆ ಬಂಡಾಯವೇಳುವ ಸಾಧ್ಯತೆಯಿರುವ ಕ್ಷೇತ್ರಗಳಿಗೆ ಎರಡು ಅಥವಾ ಮೂರು ಹೆಸರನ್ನು ಶಿಫಾರಸು ಮಾಡಲಾಗಿದೆ. ಜತೆಗೆ, ಅನ್ಯ ಪಕ್ಷಗಳಿಂದ ವಲಸೆ ಬರುವವರಿಗೆ ಮೀಸಲಿರುವ ಕ್ಷೇತ್ರಗಳಿಗೆ ಎರಡು-ಮೂರು ಹೆಸರು ಶಿಫಾರಸು ಸೇರಿದಂತೆ ಎಲ್ಲ 224 ಕ್ಷೇತ್ರಗಳ ಬಗ್ಗೆ ತಮ್ಮ ನಿಲುವನ್ನು ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ಶಿಫಾರಸು ರೂಪದಲ್ಲಿ ತಿಳಿಸಿದೆ.

ಸಿಇಸಿ ಸಮಿತಿಯಲ್ಲಿ ಯಾರಾರ‍ಯರಿದ್ದಾರೆ?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಮಿತಿಯಲ್ಲಿ ಖರ್ಗೆ ಅವರಲ್ಲದೆ, ಸಮಿತಿ ಸದಸ್ಯರಾದ ರಾಹುಲ್‌ ಗಾಂಧಿ, ಮನಮೋಹನ್‌ ಸಿಂಗ್‌, ಎ.ಕೆ. ಆ್ಯಂಟನಿ, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್‌, ಗಿರಿಜಾ ವ್ಯಾಸ್‌, ಜನಾರ್ದನ್‌ ದ್ವಿವೇದಿ, ಮುಕುಲ್‌ ವಾಸ್ನಿಕ್‌, ವೀರಪ್ಪ ಮೊಯ್ಲಿ ಇರುತ್ತಾರೆ. ಇವರಲ್ಲದೆ, ಕಮಿಟಿ ಅಧ್ಯಕ್ಷ ಮೋಹನ್‌ ಪ್ರಕಾಶ್‌, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕಾಂಗ್ರೆಸ್‌ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಇದ್ದಾರೆ.