ಕರ್ನಾಟಕ ಕಾಂಗ್ರೆಸಿಗರಿಗೆ ಖರ್ಗೆ ದೆಹಲಿಗೆ ಕರೆ

ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ನಾಯಕರೊಂದಿಗೆ ದೆಹಲಿ ಮಟ್ಟದಲ್ಲಿ ಪ್ರಮುಖ ಸಭೆ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯತಂತ್ರ, ಪಕ್ಷ ಸಂಘಟನೆ ಹಾಗೂ ರಥಯಾತ್ರೆ ಕುರಿತು ಚರ್ಚೆ ನಡೆಯಲಿದೆ. 

Mallikarjun Kharge Calls to Delhi for Karnataka Congressmen grg

ಬೆಂಗಳೂರು(ಡಿ.12): ರಾಜ್ಯ ಕಾಂಗ್ರೆಸ್‌ ಹಿರಿಯ ನಾಯಕರಿಗೆ ಹೈಕಮಾಂಡ್‌ ಬುಲಾವ್‌ ನೀಡಿದ್ದು, ಇಂದು(ಸೋಮವಾರ) ಮಧ್ಯಾಹ್ನ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ವೇಳೆ ಚುನಾವಣೆ ಸಿದ್ಧತೆ ಚರ್ಚೆ ಜತೆಗೆ ಮತ್ತೊಮ್ಮೆ ರಾಜ್ಯ ನಾಯಕರಿಗೆ ಒಗ್ಗಟ್ಟಿನ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆಯಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ನಾಯಕರೊಂದಿಗೆ ದೆಹಲಿ ಮಟ್ಟದಲ್ಲಿ ಪ್ರಮುಖ ಸಭೆ ನಡೆಸುತ್ತಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯತಂತ್ರ, ಪಕ್ಷ ಸಂಘಟನೆ ಹಾಗೂ ರಥಯಾತ್ರೆ ಕುರಿತು ಚರ್ಚೆ ನಡೆಯಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪಕ್ಷಕ್ಕೆ ಗೆಲ್ಲುವ ಸಾಧ್ಯತೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ವಯಂಕೃತ ಅಪರಾಧಗಳಿಂದ ಅಧಿಕಾರದ ಅವಕಾಶ ಕಳೆದುಕೊಳ್ಳುವುದು ಬೇಡ. ಯಾವುದೇ ಗೊಂದಲಗಳಿಗೆ ಅವಕಾಶ ಕೊಡದೆ ರಾಜ್ಯ ನಾಯಕರೆಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂಬ ಸಂದೇಶ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

'ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಅಂಬೇಡ್ಕರ್‌'

ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರು ಸೇರಿದಂತೆ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರೂ ಉಪಸ್ಥಿತರಿರಲಿದ್ದಾರೆ ಎಂದು ತಿಳಿದು ಬಂದಿದೆ.

ಜನವರಿಯಿಂದ ಶುರುವಾಗಲಿರುವ ರಥಯಾತ್ರೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ರಾಜ್ಯದ ಮೂಲೆ-ಮೂಲೆಗೆ ಸಂಚರಿಸುವ ರಥಯಾತ್ರೆ ಮೂಲಕ ಕಾರ್ಯಕರ್ತರಲ್ಲಿ ಗೆಲುವಿನ ವಿಶ್ವಾಸ ಮೂಡಿಸಬೇಕು. ಈ ವೇಳೆ ಯಾವುದೇ ಗೊಂದಲ, ಗುಂಪುಗಾರಿಕೆಗೆ ಅವಕಾಶ ನೀಡದೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಲಹೆ ನೀಡುವ ಸಾಧ್ಯತೆಯಿದೆ. 224 ಕ್ಷೇತ್ರಗಳಲ್ಲಿ ನಡೆಯಲಿರುವ ರಥಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೂ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಸಿದ್ಧತೆ ಹಾಗೂ ದಿನಾಂಕ ನಿಗದಿ ಬಗ್ಗೆಯೂ ಚರ್ಚೆಯಾಗಲಿದೆ.

ಕಲಬುರಗಿಯಲ್ಲಿ ಕಾಂಗ್ರೆಸ್‌ ಭಾರಿ ಶಕ್ತಿ ಪ್ರದರ್ಶನ: ಖರ್ಗೆ ಸ್ವಾಗತಕ್ಕೆ ‘ಕಲ್ಯಾಣ ಕ್ರಾಂತಿ’ ಸಮಾವೇಶ

ಇನ್ನು ಕಾಂಗ್ರೆಸ್‌ ಸೇರ ಬಯಸುವವರ ನಿಜವಾದ ಕಾಳಜಿ, ಅರ್ಹತೆ ಅರ್ಥ ಮಾಡಿಕೊಂಡು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಅವರ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಆಗುವ ಲಾಭ ನಷ್ಟ, ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಆಗುವ ಪರಿಣಾಮವನ್ನೂ ಗಂಭೀರವಾಗಿ ಪರಿಗಣಿಸಬೇಕು ಎಂಬ ಅಂಶಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಖರ್ಗೆ ಪ್ರಥಮ ಸಭೆ

- ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ದೆಹಲಿ ಮಟ್ಟದಲ್ಲಿ ರಾಜ್ಯ ನಾಯಕರ ಪ್ರಥಮ ಸಭೆ
- ವಿಧಾನಸಭೆ ಚುನಾವಣೆ ಕಾರ‍್ಯತಂತ್ರ, ಪಕ್ಷ ಸಂಘಟನೆ, ರಥಯಾತ್ರೆ ನಡೆಸುವ ಕುರಿತು ಚರ್ಚೆ ಸಾಧ್ಯತೆ
- ರಾಜ್ಯ ನಾಯಕರಿಗೆ ಖರ್ಗೆ ಒಗ್ಗಟ್ಟಿನ ಮಂತ್ರ ಬೋಧಿಸುವ ಸಂಭವ
- ಸಿದ್ದು, ಡಿಕೆಶಿ ಜತೆ ಬಿ.ಜೆ.ಹರಿಪ್ರಸಾದ್‌, ಎಂ.ಬಿ.ಪಾಟೀಲ್‌, ಪರಂ, ಕೆಪಿಸಿಸಿ ಕಾರಾರ‍ಯಧ್ಯಕ್ಷರಿಗೂ ಆಹ್ವಾನ
 

Latest Videos
Follow Us:
Download App:
  • android
  • ios