ಎಲ್ಲ ನಾಯಕರು ಒಂದೇ ಬಸ್‌ನಲ್ಲಿ ಯಾತ್ರೆ ನಡೆಸಲು ಹೈಕಮಾಂಡ್‌ ತಾಕೀತು, ಜ.9ರಿಂದ ಯಾತ್ರೆ ಆರಂಭ ಸಾಧ್ಯತೆ, 150 ಕ್ಷೇತ್ರದಲ್ಲಿ 75 ದಿನಗಳ ಸಂಚಾರ. 

ಬೆಂಗಳೂರು(ಡಿ.13): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಉದ್ದೇಶಿತ ಪ್ರತ್ಯೇಕ ಬಸ್‌ ಯಾತ್ರೆಗೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ಬದಲಾಗಿ, ರಾಜ್ಯದ ಎಲ್ಲ ನಾಯಕರು ಒಟ್ಟಾಗಿ ಒಂದೇ ಬಸ್‌ ಯಾತ್ರೆ ನಡೆಸುವಂತೆ ಸ್ಪಷ್ಟನಿದರ್ಶನ ನೀಡಿದೆ.

ಅಷ್ಟೇ ಅಲ್ಲ, ಈ ಯಾತ್ರೆಗೆ ಬಹುತೇಕ ದಿನಾಂಕ ಕೂಡ ನಿಗದಿಯಾಗಿದ್ದು, ಮೂಲಗಳ ಪ್ರಕಾರ ಜ.9ರಂದು ಈ ಯಾತ್ರೆ ಆರಂಭವಾಗಲಿದೆ. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ರಾಜ್ಯದ ಎಲ್ಲ ಘಟಾನುಘಟಿ ನಾಯಕರು ಈ ಬಸ್‌ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಯಾತ್ರೆ ಹಿಂದಿನಂತೆ ಜಿಲ್ಲೆ ಅಥವಾ ತಾಲೂಕು ಮಾರ್ಗಗಳಲ್ಲಿ ಸಂಚಾರಕ್ಕೆ ಸೀಮಿತವಾಗದೆ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ (ವಿಶೇಷವಾಗಿ ಕಾಂಗ್ರೆಸ್‌ ಗುರುತಿಸಿರುವ 150 ಕ್ಷೇತ್ರಗಳಲ್ಲಿ) ಸಂಚರಿಸಲಿದೆ. ಈ ಯಾತ್ರೆಯನ್ನು 75 ದಿನಗಳಲ್ಲಿ ಪೂರ್ಣಗೊಳಿಸುವಂತೆ ಹೈಕಮಾಂಡ್‌ ಸೂಚನೆ ನೀಡಿದೆ.

Assembly electiion: ಮುಂದಿನ 75 ದಿನ ಬಿಜೆಪಿ ವಿರುದ್ಧ ತೀವ್ರ ಹೋರಾಟ: ಸುರ್ಜೇವಾಲ

ದೆಹಲಿಯಲ್ಲಿ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರೊಂದಿಗೆ ಚುನಾವಣೆ ಸಿದ್ಧತೆ, ಬಸ್‌ ಯಾತ್ರೆ ಹಾಗೂ ಚುನಾವಣಾ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ ಈ ಸೂಚನೆಗಳನ್ನು ನೀಡಿದೆ.

ರಾಜ್ಯ ನಾಯಕರೊಂದಿಗೆ ನಡೆದ ವಿಸ್ತೃತ ಚರ್ಚೆ ವೇಳೆ ಪ್ರತ್ಯೇಕ ಯಾತ್ರೆಗಳ ಯೋಚನೆ ಬದಿಗಿಟ್ಟು ಎಲ್ಲರೂ ಕಡ್ಡಾಯವಾಗಿ ಒಗ್ಗಟ್ಟಿನಿಂದ ಯಾತ್ರೆ ನಡೆಸಬೇಕು. ರಾಜ್ಯದ ಎಲ್ಲಾ ಪ್ರಮುಖ ನಾಯಕರೂ ಯಾತ್ರೆಯಲ್ಲಿರಬೇಕು. ಯಾತ್ರೆಯಲ್ಲಿಯೂ ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಹಾಗೂ ಬಣ ರಾಜಕೀಯದಂತಹ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಸ್ಪಷ್ಟಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರತಿ ಕ್ಷೇತ್ರಕ್ಕೂ ಯಾತ್ರೆ:

ಜಿಲ್ಲೆ ಹಾಗೂ ತಾಲ್ಲೂಕುವಾರು ಯಾತ್ರೆಗಳನ್ನು ಬದಿಗೊತ್ತಿ ವಿಧಾನಸಭಾ ಕ್ಷೇತ್ರವಾರು ಯಾತ್ರೆ ನಡೆಸಲು ರೂಪುರೇಷೆ ಸಿದ್ಧಪಡಿಸಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಹೆಚ್ಚಿರುವ ಕಾಂಗ್ರೆಸ್‌ ಪ್ರಭಾವದ 150 ಕ್ಷೇತ್ರಗಳಲ್ಲಿ ಯಾತ್ರೆ ಹಮ್ಮಿಕೊಳ್ಳಬೇಕು. ಬಳಿಕ ಸಮಯಾವಕಾಶ ನೋಡಿಕೊಂಡು ಉಳಿದ ಕ್ಷೇತ್ರಗಳಲ್ಲೂ ಸಂಚಾರ ಮಾಡಬೇಕು. ಒಟ್ಟಾರೆ ಬಸ್‌ ಯಾತ್ರೆಯು 75 ದಿನಗಳ ಒಳಗಾಗಿ ಮುಗಿಯಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ಮುಂಚೂಣಿ ನಾಯಕರೆಲ್ಲರೂ ಭಾಗವಹಿಸಬೇಕು ಎಂದು ಖರ್ಗೆ ಅವರು ಸ್ಪಷ್ಟಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಕರ್ಮಭೂಮಿ ಯಾದಗಿರಿ, ಶತಾಯಗತಾಯ ಕಾಂಗ್ರೆಸ್ ಗೆಲ್ಲಲು ಖರ್ಗೆ ಯತ್ನ

ಇದಕ್ಕೂ ಮೊದಲು ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಯಾತ್ರೆ ಹೊರಡಲು ಪ್ರತ್ಯೇಕ ಬಸ್‌ಗಳನ್ನು ಸಿದ್ಧಪಡಿಸಿಕೊಂಡಿದ್ದರು. ದಕ್ಷಿಣ ಕರ್ನಾಟಕದ ಕ್ಷೇತ್ರಗಳಲ್ಲಿ ಡಿ.ಕೆ. ಶಿವಕುಮಾರ್‌ ತಂಡ ಹಾಗೂ ಉತ್ತರ ಕರ್ನಾಟಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ತಂಡ ಯಾತ್ರೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನೂ ಆರಂಭಿಸಿತ್ತು. ಆದರೆ, ಪ್ರತ್ಯೇಕ ಯಾತ್ರೆಗಳಿಗೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ.

ಡಿ.30ರಂದು ಕೃಷ್ಣಾ, ಜ.2ಕ್ಕೆ ಮಹದಾಯಿ ಬೃಹತ್‌ ಸಮಾವೇಶ 11

3 ಬೃಹತ್‌ ಸಮಾವೇಶ ನಡೆಸಲು ತೀರ್ಮಾನ

ಇದೇ ವೇಳೆ ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸಮಾವೇಶ ನಡೆಸಬೇಕು. ಈ ವೇಳೆ ದೊಡ್ಡ ಮಟ್ಟದ ರಾರ‍ಯಲಿ ನಡೆಸಿ ಕೃಷ್ಣಾ ನೀರು ಸದ್ಬಳಕೆ ಮಾಡಿಕೊಳ್ಳದ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಬೇಕು. ಜತೆಗೆ ಮಹದಾಯಿ ಯೋಜನೆ ಅನುಷ್ಠಾನದಲ್ಲಿ ವೈಫಲ್ಯ ತೋರಿರುವ ರಾಜ್ಯ ಸರ್ಕಾರದ ವಿರುದ್ಧ ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ತೀರ್ಮಾನಿಸಿರುವಂತೆ ಜ.8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಪರಿಶಿಷ್ಟಜಾತಿ ಹಾಗೂ ಪಂಗಡದ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ.