ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ: ಕರ್ನಾಟಕ ಕಾಂಗ್ರೆಸ್‌ಗೆ ‘ಭೀಮ’ ಬಲ..!

ವಿಧಾನಸಭೆ ಚುನಾವಣೆ ಸನಿಹದಲ್ಲೇ ದಲಿತರಿಗೆ ಹುದ್ದೆ, ಟಿಕೆಟ್‌ ಹಂಚಿಕೆಯಲ್ಲಿ ಖರ್ಗೆ ಮಾತಿಗಿನ್ನು ಭಾರಿ ತೂಕ, ಖರ್ಗೆ ನೇಮಕ ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಚಿತ

Mallikarjun Kharge Appointment Sure to Affect the Karnataka Elections grg

ಬೆಂಗಳೂರು(ಅ.20):  ಮಲ್ಲಿಕಾರ್ಜುನ ಖರ್ಗೆ ಎಂಬ ಅಜಾತಶತ್ರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಕಾಂಗ್ರೆಸ್‌ಗೆ ಭೀಮ ಬಲ ಬಂದಿದೆ. ಚುನಾವಣಾ ವರ್ಷದಲ್ಲೇ ಖರ್ಗೆ ಅವರು ಕಾಂಗ್ರೆಸ್‌ ಎಂಬ ಶತಮಾನ ದಾಟಿದ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹಾಗೂ ಇಂತಹ ಹುದ್ದೆಗೇರಿದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಸಹಜವಾಗಿಯೇ ಕರ್ನಾಟಕ ರಾಜಕೀಯ ರಣಾಂಗಣದ ಜಾತಿ ಸಮೀಕರಣದ ಮೇಲೆ ಪ್ರಭಾವ ಬೀರಲಿದೆ.

ತಮ್ಮನ್ನು ‘ದಲಿತ ನಾಯಕ’ ಎಂದು ಬಿಂಬಿಸುವುದಕ್ಕೆ ತುಸು ಆಕ್ಷೇಪವನ್ನೇ ವ್ಯಕ್ತಪಡಿಸುವ ಮಲ್ಲಿಕಾರ್ಜುನ ಖರ್ಗೆ ಅವರು ಒಪ್ಪಲಿ ಬಿಡಲಿ, ಕರುನಾಡಿನ ದಲಿತ ಸಮುದಾಯ ಮಾತ್ರ ಅವರನ್ನು ತಮ್ಮ ಮೇರು ನಾಯಕ ಎಂದು ಪರಿಗಣಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯಿದ್ದರೂ ಖರ್ಗೆ ಅವರಿಗೆ ಆ ಹುದ್ದೆ ತಪ್ಪಿ ಹೋದ ಬಗ್ಗೆ ಸಮುದಾಯಕ್ಕೆ ಬೇಸರ ಸಹಜವಾಗಿಯೇ ಇದೆ. ಆದರೆ, ಈಗ ಕಾಂಗ್ರೆಸ್‌ ಎಂಬ ಪಕ್ಷದ ಮೇರು ಸ್ಥಾನಕ್ಕೇರಿರುವುದು ತುಸು ನೆಮ್ಮದಿಯನ್ನಂತೂ ತಂದಿದೆ.

137 ವರ್ಷಗಳ Congress ಏಳುಬೀಳು: 2ನೇ ಬಾರಿ ಕನ್ನಡಿಗರಿಗೆ ಚುಕ್ಕಾಣಿ ಅವಕಾಶ..!

ಚುನಾವಣೆ ಮೇಲೆ ಪ್ರಭಾವ ಖಚಿತ:

ಚುನಾವಣಾ ವರ್ಷದಲ್ಲಿ ಈ ಬೆಳವಣಿಗೆ ನಡೆದಿರುವುದು ರಾಜ್ಯ ಕಾಂಗ್ರೆಸ್‌ ವಲಯದಲ್ಲಿ ತುಂಬು ಸಂತಸ ತಂದಿದೆ. ದಲಿತ ಸಮುದಾಯ ಬಿಜೆಪಿಯತ್ತ ವಾಲಿದಂತೆ ಕಾಣುತ್ತಿರುವ ಈ ದಿನಗಳಲ್ಲಿ ಆ ಸಮುದಾಯ ಪ್ರತಿನಿಧಿಸುವ ಖರ್ಗೆ ಅವರು ಕಾಂಗ್ರೆಸ್‌ನ ವರಿಷ್ಠ ಪದವಿ ಗಿಟ್ಟಿಸಿರುವುದರಿಂದ ಅದರ ಲಾಭ ಪಕ್ಷಕ್ಕೆ ಆಗಲಿದೆ ಎಂದೆ ಕಾಂಗ್ರೆಸ್‌ನಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಹುದ್ದೆ ತಲುಪಿರುವುದರಿಂದ ಖರ್ಗೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಗೋಚರಿಸುವುದಿಲ್ಲವಾದರೂ ಚುನಾವಣಾ ಟಿಕೆಟ್‌ ಹಂಚಿಕೆ, ಪಕ್ಷ ಒಂದು ವೇಳೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ನಿರ್ಧಾರ ಮತ್ತು ಸಂಪುಟಕ್ಕೆ ಸೇರುವವರನ್ನು ಸೂಚಿಸುವ ಸಾಮರ್ಥ್ಯ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಎಲ್ಲ ಪ್ರಮುಖ ನಿರ್ಧಾರಗಳಲ್ಲಿ ಖರ್ಗೆ ಅವರ ಪಾತ್ರ ಮಹತ್ವದ್ದಾಗುತ್ತದೆ ಎಂಬುದಂತೂ ಖಚಿತ.

ಜಾತಿಗಳ ಮೇಲೆ ಪ್ರಭಾವ:

ಇದರಿಂದಾಗಿ ದಲಿತ ಸಮುದಾಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ವಾಲುವ ಸಂಪೂರ್ಣ ನಂಬಿಕೆಯನ್ನು ಕಾಂಗ್ರೆಸ್‌ ವಲಯ ಹೊಂದಿದೆ. ಹೀಗೆ ವಾಲುವ ದಲಿತ ಸಮುದಾಯದ ಜತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಾಗಿ ಹಿಂದುಳಿದ ವರ್ಗ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಂದ ಒಕ್ಕಲಿಗ ಮತ್ತು ಎಂ.ಬಿ. ಪಾಟೀಲ್‌ ಅವರಿಂದಾಗಿ ಲಿಂಗಾಯತ ಮತಗಳ ಕ್ರೋಡೀಕರಣ ತುಸುವೇ ಸಾಧ್ಯವಾದರೂ ಕಾಂಗ್ರೆಸ್‌ ಪಾಲಿಗೆ ಅದು ವರದಾನವಾಗುತ್ತದೆ ಎಂದೇ ಭಾವಿಸಲಾಗುತ್ತಿದೆ.

Congress Election: ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ; ಈ ಸ್ಥಾನ ಪಡೆದ ಎರಡನೇ ಕನ್ನಡಿಗ

3ನೇ ಪವರ್‌ ಸೆಂಟರ್‌?:

ಆದರೆ, ಖರ್ಗೆ ಅವರು ಹೆಚ್ಚು ಶಕ್ತಿಶಾಲಿಯಾಗುವುದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಪವರ್‌ ಸೆಂಟರ್‌ ನಿರ್ಮಾಣವಾಗುತ್ತದೆಯೇ ಎಂಬ ಆಶಂಕೆಯೂ ಇದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡುವೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿಯಿದೆ ಎಂದೇ ಆಡಳಿತ ಪಕ್ಷ ಬಿಜೆಪಿ ಬಿಂಬಿಸುತ್ತಿದೆ. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಪವರ್‌ ಸೆಂಟರ್‌ ಆಗುವುದರಿಂದ ಒಳ ಜಗಳ ಹೆಚ್ಚಬಹುದು ಎಂದೇ ಹೇಳಲಾಗುತ್ತಿದೆ. ಆದರೆ, ಪಕ್ಷ ಅಧಿಕಾರಕ್ಕೆ ಬರಬೇಕು ಎಂಬ ಆಕಾಂಕ್ಷೆ ಹೊಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ನಾಯಕರ ನಡುವೆ ಒಳ ಜಗಳ ಹೆಚ್ಚದಂತೆ ಹಲವು ಬಾರಿ ಪ್ರಯತ್ನಿಸಿದ್ದರೂ ಅಂತಹವರು ತಾವು ಕೂಡ ಪೈಪೋಟಿಯಲ್ಲಿ ಪಾತ್ರಧಾರಿಯಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಆದರೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ಖರ್ಗೆ ಮಾತು ಪ್ರಾಮುಖ್ಯತೆ ವಹಿಸುತ್ತದೆ. ಹೀಗಾಗಿ ಒಳ ಜಗಳ ಹೊಂದಿರುವ ಎರಡು ಬಣಗಳು ಖರ್ಗೆ ಅವರೊಟ್ಟಿಗೆ ಉತ್ತಮ ಬಾಂಧವ್ಯ ಹೊಂದುವ ಪ್ರಯತ್ನ ನಡೆಸಬೇಕಾಗುತ್ತದೆ. ಹೀಗಾದಲ್ಲಿ ಖರ್ಗೆ ಅವರು ಪವರ್‌ ಸೆಂಟರ್‌ ಆಗುವುದರಿಂದ ಪಕ್ಷಕ್ಕೆ ಲಾಭ ಎಂದೇ ಕಾಂಗ್ರೆಸ್‌ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
 

Latest Videos
Follow Us:
Download App:
  • android
  • ios