Asianet Suvarna News Asianet Suvarna News

Congress Election: ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ; ಈ ಸ್ಥಾನ ಪಡೆದ ಎರಡನೇ ಕನ್ನಡಿಗ

Mallikarjun Kharge become congress president: 24 ವರ್ಷಗಳ ನಂತರ ಗಾಂಧಿ ಕುಟುಂಬೇತರ ರಾಜಕಾರಣಿಯೊಬ್ಬರು ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಗೆಲುವು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.  

Mallikarjun Kharge becomes second Kannadiga to become Congress national president
Author
First Published Oct 19, 2022, 1:49 PM IST

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಮಲ್ಲಿಕಾರ್ಜುನ್‌ ಖರ್ಗೆ ಈಗಾಗಲೇ ಅರ್ಧಕ್ಕೂ ಹೆಚ್ಚು ಮತಗಳನ್ನು ಪಡೆದು ಗೆಲುವನ್ನು ಖಚಿತಪಡಿಸಿಕೊಂಡಿದ್ದಾರೆ. ಈ ಮೂಲಕ 24 ವರ್ಷಗಳ ಬಳಿಕ ಕಾಂಗ್ರೆಸ್‌ ಪಕ್ಷದ ಚುಕ್ಕಾಣಿಯನ್ನು ಗಾಂಧಿಯೇತರ ವ್ಯಕ್ತಿಯೊಬ್ಬರು ಅಲಂಕರಿಸಲಿದ್ಧಾರೆ. ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ ನಿಜಲಿಂಗಪ್ಪ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಎರಡನೇ ಕನ್ನಡಿಗ ಎಂಬ ಮನ್ನಣೆಗೆ ಭಾಜನರಾಗಲಿದ್ದಾರೆ. ಖರ್ಗೆ ಪ್ರತಿಸ್ಪರ್ಧಿ ಶಶಿ ತರೂರ್‌ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂಬ ಆರೋಪ ಮಾಡಿದ್ಧಾರೆ. ಆದರೆ ಕಾಂಗ್ರೆಸ್‌ ಹಿರಿಯ ನಾಯಕರೆಲ್ಲರೂ ಮಲ್ಲಿಕಾರ್ಜುನ್‌ ಖರ್ಗೆ ಪರ ಬಹಿರಂಗವಾಗೇ ಬೆಂಬಲ ಘೋಷಿಸಿದ್ದರು. ಶಶಿ ತರೂರ್‌ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಪಕ್ಷದ ಸದಸ್ಯರು ಆರೋಪವನ್ನು ತಿರಸ್ಕರಿಸಿದ್ದಾರೆ. 

ಜತೆಗೆ ಭಾರತ್‌ ಜೋಡೊ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಪಕ್ಷದಲ್ಲಿ ಯಾವ ಕೆಲಸ ನಿರ್ವಹಿಸಬೇಕು ಎಂಬುದನ್ನು ಅಧ್ಯಕ್ಷರಾದ ಮಲ್ಲಿಕಾರ್ಜುನ್‌ ಖರ್ಗೆ ಅವರು ನಿರ್ಧರಿಸುತ್ತಾರೆ. ಅವರ ಆದೇಶದಂತೆ ನಾನು ಪಕ್ಷದಲ್ಲಿ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಇದು ಹೊಸ ವಿವಾದಕ್ಕೂ ಕಾರಣವಾಗಿದೆ. ಅಧಿಕೃತ ಫಲಿತಾಂಶ ಘೋಷಣೆಗೂ ಮುನ್ನವೇ ಖರ್ಗೆ ಅವರು ಅಧ್ಯಕ್ಷರು ಎಂದು ರಾಹುಲ್‌ ಹೇಗೆ ಹೇಳುತ್ತಾರೆ ಎಂದೂ ಶಶಿ ತರೂರ್‌ ಪರ ಇರುವ ಕೆಲ ಸದಸ್ಯರು ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್‌ ಏಳು - ಬೀಳು, ನಡೆದು ಬಂದ ಹಾದಿ:

 

137 ವರ್ಷದ ಸುದೀರ್ಘ ಇತಿಹಾಸವುಳ್ಳ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬುಧವಾರ ಫಲಿತಾಂಶ ಪ್ರಕಟವಾಗಲಿದೆ. ಗಾಂಧಿ ಕುಟುಂಬದ ಸದಸ್ಯರು ಚುನಾವಣೆಯಿಂದ ದೂರ ಉಳಿದ ಹಿನ್ನೆಲೆಯಲ್ಲಿ 24 ವರ್ಷಗಳ ಬಳಿಕ ಗಾಂಧಿಯೇತರ ಅಧ್ಯಕ್ಷರ ಗಾದಿಯೇರಲಿದ್ದಾರೆ. ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಹಾಗೂ ತಿರುವನಂತಪುರದ ಸಂಸದ ಶಶಿ ತರೂರ್‌ ಚುನಾವಣಾ ಕಣದಲ್ಲಿದ್ದಾರೆ. ಸುಮಾರು 9000 ಪ್ರದೇಶ ಕಾಂಗ್ರೆಸ್‌ ಕಮಿಟಿ ಸದಸ್ಯರು ಪಕ್ಷದ ನೂತನ ಮುಖ್ಯಸ್ಥನನ್ನು ಆಯ್ಕೆ ಮಾಡಲು ಈಗಾಗಲೇ ಮತ ಚಲಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷ ನಡೆದು ಬಂದ ಹಾದಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬ್ರಿಟಿಷ್‌ ಅಧಿಕಾರಿ ಸ್ಥಾಪಿಸಿದ್ದ ಪಕ್ಷವಿದು!
ಭಾರತ- ಬ್ರಿಟನ್‌ ಸಂಪರ್ಕ ವೇದಿಕೆಯಾಗಿ ಆರಂಭ

1885ರಲ್ಲಿ ನಾಗರಿಕ ಸೇವಾ ಅಧಿಕಾರಿಯಾಗಿದ್ದ ಅಲನ್‌ ಆಕ್ಟೇವಿಯನ್‌ ಹ್ಯೂಮ್‌ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು. ಡಿಸೆಂಬರ್ 28 ರಿಂದ 31 ರವರೆಗೆ ಬಾಂಬೆಯಲ್ಲಿ ಕಾಂಗ್ರೆಸ್‌ ತನ್ನ ಮೊದಲ ಅಧಿವೇಶನವನ್ನು ಹಮ್ಮಿಕೊಂಡಿತ್ತು. ವಿದ್ಯಾವಂತ ಭಾರತೀಯರಿಗೆ ಸರ್ಕಾರಿ ಆಡಳಿತದಲ್ಲಿ ಹೆಚ್ಚಿನ ಪಾಲನ್ನು ನೀಡುವಂತೆ ಬ್ರಿಟಿಷ್‌ ಆಡಳಿತದ ಜೊತೆಗೆ ರಾಜಕೀಯ ಸಂಪರ್ಕ ಸಾಧಿಸುವ ವೇದಿಕೆಯಾಗಿ ಕಾಂಗ್ರೆಸ್‌ ಅನ್ನು ಸ್ಥಾಪಿಸಲಾಗಿತ್ತು.

1900-1947ರವರೆಗೆ ಕಾಂಗ್ರೆಸ್‌ ಪಾತ್ರ
20ನೇ ಶತಮಾನದ ಆರಂಭದಲ್ಲಿ ಕಾಂಗ್ರೆಸ್‌ ಬ್ರಿಟಿಷ್‌ ಸರ್ಕಾರದ ವಿರೋಧಿಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. 1920ರಲ್ಲಿ ಕಾಂಗ್ರೆಸ್‌ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿತು. 1924ರಲ್ಲಿ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಈ ವೇಳೆ ಪಕ್ಷವು ಕೇವಲ ದೇಶದ ಜನತೆಯ ಎದೆಯಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚುವುದು ಮಾತ್ರವಲ್ಲ, ಜಾತಿ-ಮತಗಳ ಅಂತರವನ್ನು ಕಡಿಮೆಮಾಡುವುದು, ಅಸ್ಪೃಶ್ಯತೆ ಹಾಗೂ ಬಡತನಗಳ ನಿರ್ಮೂಲನೆಯ ನಿಟ್ಟಿನಲ್ಲಿಯೂ ಕಾರ್ಯ ನಿರ್ವಹಿಸಿತು. ಇದರೊಂದಿಗೆ ಕಾಂಗ್ರೆಸ್‌ ಪ್ರಬಲ ಪಕ್ಷವಾಗಿ ಹೊರಹೊಮ್ಮಿತು. 

1929ರಲ್ಲಿ ನಡೆದ ಲಾಹೋರ್‌ ಅಧಿವೇಶನವು ಪಂಡಿತ್‌ ಜವಾಹರ್‌ಲಾಲ್‌ ನೆಹರೂ ಅವರ ನೇತೃತ್ವದಲ್ಲಿ ನಡೆದಿತ್ತು. ಅವರು ಜನವರಿ 26, 1930ರಂದು ಪೂರ್ಣ ಸ್ವರಾಜ್ಯವನ್ನು ಪಡೆಯುವುದು ಪಕ್ಷದ ಗುರಿ ಎಂದು ಘೋಷಣೆ ಮಾಡಿದರು. 1938-39ರ ಅವಧಿಯಲ್ಲಿ ಸುಭಾಷ್‌ ಚಂದ್ರ ಬೋಸ್‌ ಅವರು ಕಾಂಗ್ರೆಸ್‌ನ ಚುಕ್ಕಾಣಿ ಮುನ್ನಡೆಸಿದ್ದರು. ಗಾಂಧೀಜಿ, ನೆಹರೂ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಜಯಪ್ರಕಾಶ ನಾರಾಯಣ, ಮೌಲಾನಾ ಅಬ್ದುಲ್‌ ಕಲಾಂ ಅಜಾದ್‌ ಮೊದಲಾದ ನಾಯಕರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಫಲವಾಗಿ ಆಗಸ್ಟ್ 15, 1947ರಂದು ಬ್ರಿಟಿಷರ ಗುಲಾಮಗಿರಿಯಿಂದ ದೇಶ ಸ್ವತಂತ್ರ್ಯವಾಯಿತು.

ಸ್ವಾತಂತ್ರ್ಯದ ಬಳಿಕ ಹೊಸ ರಾಜಕೀಯ ಪಕ್ಷವಾಗಿ ಉದಯ
1947ರಲ್ಲಿ ದೇಶ ಸ್ವತಂತ್ರವಾದ ಬಳಿಕ ಕಾಂಗ್ರೆಸ್‌ ಪ್ರಬಲ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತು. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಕೇಂದ್ರದಲ್ಲಿ ಹಾಗೂ ಹಲವಾರು ರಾಜ್ಯಗಳಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಭಾರತದ ಮೊದಲ ಪ್ರಧಾನಿ ಪಂಡಿತ್‌ ಜವಾಹರ್‌ಲಾಲ್‌ ನೆಹರು ಅವರ ನೇತೃತ್ವದಲ್ಲಿ ಕಾಂಗ್ರೆಸ್‌ 1951-52, 1957 ಹಾಗೂ 1962 ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿತು. 1977ರವರೆಗೂ ಕಾಂಗ್ರೆಸ್‌ ಪಾರಮ್ಯ ಮುಂದುವರೆದಿತ್ತು. 1977ರಲ್ಲಿ ಮೊಟ್ಟಮೊದಲ ಬಾರಿ ಜನತಾ ಮೈತ್ರಿ ಸರ್ಕಾರವು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸೋಲಿಸಿ ಅಧಿಕಾರಕ್ಕೆ ಬಂತು. ಆದರೆ 1980ರಲ್ಲಿ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಇಂದಿರಾ ಪ್ರಧಾನಿಯಾದರು. 1984ರ ಚುನಾವಣೆಯಲ್ಲಿಯೂ ರಾಜೀವ್‌ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್‌ ಬಹುಮತ ಗಳಿಸಿ ಅಧಿಕಾರ ಹಿಡಿಯಿತು. 2004 ಹಾಗೂ 2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. 2014 ಹಾಗೂ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯುವಲ್ಲಿ ವಿಫಲವಾದರೂ ಪ್ರಬಲ ವಿರೋಧಪ ಕ್ಷವಾಗಿ ಮುಂದುವರೆದಿದೆ.

ಸ್ವಾತಂತ್ರ್ಯಾನಂತರ ಪಕ್ಷದ ಅಧ್ಯಕ್ಷರಾದವರು
1. ಭೋಗರಾಜು ಪಟ್ಟಾಭಿ ಸೀತಾರಾಮಯ್ಯ- 1948-49
2. ಪುರುಷೋತ್ತಮ್‌ ದಾಸ್‌ ಟಂಡನ್‌ - 1950-51
3. ಜವಾಹರಲಾಲ್‌ ನೆಹರು - 1951-54
4. ಯು.ಎನ್‌. ಧೇಬರ್‌ - 1955-58
5. ಇಂದಿರಾ ಗಾಂಧಿ - 1959-60
6. ನೀಲಂ ಸಂಜೀವ ರೆಡ್ಡಿ - 1960-63
7. ಕೆ.ಕಾಮರಾಜ್‌ - 1964-67
8. ಎಸ್‌.ನಿಜಲಿಂಗಪ್ಪ - 1968-69
9. ಜಗಜೀವನ್‌ ರಾಮ್‌ - 1970-71
10. ಶಂಕರ್‌ ದಯಾಳ್‌ ಶರ್ಮಾ - 1972-74
11. ದೇವಕಾಂತ ಬರುವಾ - 1975-77
12. ಇಂದಿರಾಗಾಂಧಿ - 1978-83
13. ರಾಜೀವ್‌ ಗಾಂಧಿ- 1985-91
14. ಪಿ.ವಿ.ನರಸಿಂಹರಾವ್‌- 1992-1994
15. ಸೀತಾರಾಂ ಕೇಸರಿ- 1996-98
16. ಸೋನಿಯಾ ಗಾಂಧಿ - 1999- 2017
17. ರಾಹುಲ್‌ ಗಾಂಧಿ - 2017- 2019
18. ಸೋನಿಯಾ ಗಾಂಧಿ - 2019 ಪ್ರಸ್ತುತ

ನೆಹರೂ, ಗಾಂಧಿ ಕುಟುಂಬದಿಂದ 39 ವರ್ಷ ಅಧಿಕಾರ
ಇತರೆ 13 ಜನರಿಂದ 36 ಪಕ್ಷದ ಅಧ್ಯಕ್ಷಗಿರಿ ಹೊಣೆ
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದ ಇಲ್ಲಿಯವರೆಗೆ ನೆಹರು, ಗಾಂಧಿ ಕುಟುಂಬದ ಐವರು ಹಾಗೂ ಹೊರಗಿನ 13 ಮಂದಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬದ ಸೋನಿಯಾ ಗಾಂಧಿ ಅತಿ ಹೆಚ್ಚು ಅವಧಿಗೆ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಕಾರ‍್ಯನಿರ್ವಹಿಸಿದ್ದಾರೆ. ಗಾಂಧಿ ನೆಹರು ಕುಟುಂಬದ 5 ಮಂದಿ 39 ವರ್ಷಗಳ ಕಾಲ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಉಳಿದ 13 ಮಂದಿ ಕೇವಲ 36 ವರ್ಷಗಳ ಕಾಲ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಬೆಂದ ಬದುಕಿನಲ್ಲಿ ಎದ್ದು ನಿಂತ ಖರ್ಗೆ: ಇದು ಕಾಂಗ್ರೆಸ್ ಶಿಸ್ತಿನ ಸಿಪಾಯಿಯ ಕತೆ

ಸೋನಿಯಾ ಸುದೀರ್ಘ ಹೊಣೆ, ಟಂಡನ್‌ ಕನಿಷ್ಠ ಅವಧಿಗೆ ಅಧ್ಯಕ್ಷ
ಸೋನಿಯಾ ಗಾಂಧಿ ಕಾಂಗ್ರೆಸ್‌ ಪಕ್ಷದಲ್ಲಿ ಅತ್ಯಂತ ದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದರು. 1999ರಲ್ಲಿ ಪಕ್ಷದ ಅಧ್ಯಕ್ಷೆಯಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಬಳಿಕ ಪ್ರತಿಬಾರಿಯೂ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 2017ರವರೆಗೂ ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರೆದಿದ್ದರು. 2017ರಲ್ಲಿ ಪಕ್ಷದಲ್ಲಿ ಆಂತರಿಕವಾಗಿ ನಡೆದ ಕೆಲವು ಜಗಳಗಳ ಮೂಲಕ ಸೋನಿಯಾ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಪುತ್ರ ರಾಹುಲ್‌ ಗಾಂಧಿಯನ್ನು ಅಧ್ಯಕ್ಷರನ್ನಾಗಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತ ಬಳಿಕ ರಾಹುಲ್‌ ರಾಜೀನಾಮೆ ನೀಡಿದರು. ಇದಾದ ನಂತರ ಸೋನಿಯಾ ಅಧ್ಯಕ್ಷೆಯಾಗಿ ಮುಂದುವರೆದಿದ್ದಾರೆ. ಪುರುಷೋತ್ತಮ ದಾಸ್‌ ಟಂಡನ್‌ ಅವರು ಅತಿ ಕಡಿಮೆ ಅವಧಿ ಕಾರ್ಯನಿರ್ವಹಿಸಿದ ಅಧ್ಯಕ್ಷರಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ 5 ಬಾರಿ ಚುನಾವಣೆಯಲ್ಲಿ ಆಯ್ಕೆಯಾದವರು
1939- ನೇತಾಜಿ ಸುಭಾಷ್‌ ಚಂದ್ರ ಬೋಸ್‌
1950- ಪುರುಷೋತ್ತಮ ದಾಸ್‌ ಟಂಡನ್‌
1977- ಕೆ. ಬ್ರಹ್ಮಾನಂದ ರೆಡ್ಡಿ
1997- ಸೀತಾರಾಮ್‌ ಕೇಸರಿ
2000- ಸೋನಿಯಾ ಗಾಂಧಿ

ಇದನ್ನೂ ಓದಿ: 137 ವರ್ಷಗಳ Congress ಏಳುಬೀಳು: 2ನೇ ಬಾರಿ ಕನ್ನಡಿಗರಿಗೆ ಚುಕ್ಕಾಣಿ ಅವಕಾಶ..!

2ನೇ ಬಾರಿ ಕನ್ನಡಿಗರಿಗೆ ಚುಕ್ಕಾಣಿ ಅವಕಾಶ
ಮಾಜಿ ಮುಖ್ಯಮಂತ್ರಿಯೂ ಆಗಿದ್ದ ಎಸ್‌. ನಿಜಲಿಂಗಪ್ಪ ಅವರು 1968 ಮತ್ತು 1969ರಲ್ಲಿ ಪಕ್ಷ ಅಧ್ಯಕ್ಷರಾಗಿದ್ದರು. ಈ ಮೂಲಕ ಕಾಂಗ್ರೆಸ್‌ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ್ದ ಮೊದಲ ಕನ್ನಡಿಗರಾಗಿದ್ದರು. ಆದರೆ ಇಂದಿರಾ ಗಾಂಧಿಯವರೊಡನೆ ಭಿನ್ನಾಭಿಪ್ರಾಯದಿಂದಾಗಿ 1969ರಲ್ಲಿ ಕಾಂಗ್ರೆಸ್‌ ವಿಭಜನೆಯಾಯಿತು. ಈ ಮೂಲಕ ಅವಿಭಜಿತ ಕಾಂಗ್ರೆಸ್‌ನ ಕೊನೆಯ ಅಧ್ಯಕ್ಷರೆನಿಸಿಕೊಂಡರು. ನಿಜಲಿಂಗಪ್ಪ, ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ ಕೆಲವು ಹಿರಿಯ ಕಾಂಗ್ರೆಸ್‌ ನಾಯಕರೊಡನೆ ಸೇರಿಕೊಂಡು ಕಾಂಗ್ರೆಸ್‌(ಓ) ಪಕ್ಷದ ಸ್ಥಾಪನೆಗೆ ಕಾರಣವಾದರು. ಇದಾದ ಬಳಿಕ ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷ ಚುನಾವಣಾ ಕಣಕ್ಕಿಳಿದಿದ್ದಾರೆ. ಇವರ ಆಯ್ಕೆ ಬಹುತೇಕ ಖಚಿತವಾಗಿದೆ. ಖರ್ಗೆ ಆಯ್ಕೆಯಾದರೆ ಎಐಸಿಸಿ ಚುಕ್ಕಾಣಿ ಹಿಡಿಯುವ 2ನೇ ಕನ್ನಡಿಗ ಎನಿಸಿಕೊಳ್ಳಲಿದ್ದಾರೆ.
ಯಾರ ಅವಧಿಯಲ್ಲಿ ಲೋಕಸಭೆಯಲ್ಲಿ ಎಷ್ಟು ಸ್ಥಾನ ಗೆದ್ದಿತ್ತು?
ಚುನಾವಣೆ  ಅಧ್ಯಕ್ಷತೆ          ಗೆದ್ದ ಲೋಕಸಭಾ ಸ್ಥಾನ
1951            ನೆಹರು               364
1957            ನೆಹರು               371
1962            ನೆಹರು               361
1967           ಇಂದಿರಾ ಗಾಂಧಿ   283
1971           ಇಂದಿರಾ ಗಾಂಧಿ   352
1977           ಇಂದಿರಾ ಗಾಂಧಿ   153
1980      ಇಂದಿರಾ ಗಾಂಧಿ         351
1984      ರಾಜೀವ್‌ ಗಾಂಧಿ         415
1989      ರಾಜೀವ್‌ ಗಾಂಧಿ         197
1991      ಪಿ.ವಿ. ನರಸಿಂಹರಾವ್‌  244
1996      ಪಿ.ವಿ. ನರಸಿಂಹರಾವ್‌  140
1998      ಸೀತಾರಾಂ ಕೇಸರಿ          141
1999     ಸೋನಿಯಾ ಗಾಂಧಿ         114
2004     ಸೋನಿಯಾ ಗಾಂಧಿ          145
2009     ಸೋನಿಯಾ ಗಾಂಧಿ           206
2014    ರಾಹುಲ್‌ ಗಾಂಧಿ                  44
2019    ರಾಹುಲ್‌ ಗಾಂಧಿ                  52

ಕೇವಲ 2 ರಾಜ್ಯದಲ್ಲಿ ಅಧಿಕಾರ
ಕಾಂಗ್ರೆಸ್‌, ರಾಜಸ್ಥಾನ ಹಾಗೂ ಛತ್ತೀಸಗಢದಲ್ಲಿ ಈ ಎರಡು ರಾಜ್ಯಗಳಲ್ಲಿ ಮಾತ್ರ ಈವರೆಗೆ ಅಧಿಕಾರದಲ್ಲಿದೆ. ತಮಿಳುನಾಡು, ಬಿಹಾರ ಹಾಗೂ ಜಾರ್ಖಂಡದಲ್ಲಿ ಪ್ರಾದೇಶಿಕ ಪಕ್ಷಗಳಾದ ದ್ರಾವಿಡ ಮುನ್ನೇತ್ರ ಖಳಗಂ, ಜನತಾದಳ (ಯುನೈಟೆಡ್‌) ಹಾಗೂ ಜಾರ್ಖಂಡ್‌ ಮುಕ್ತಿ ಮೋರ್ಚಾದೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿ ಅಧಿಕಾರದಲ್ಲಿದೆ.

Follow Us:
Download App:
  • android
  • ios