ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು, ಜೊತೆಗೆ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಸುವರ್ಣ ವಿಧಾನಸಭೆ (ಡಿ.09): ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಬೇಲೂರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಲಾಗುವುದು, ಜೊತೆಗೆ ಪ್ರತಿ ವರ್ಷ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಅಧಿವೇಶನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಮಂಡಿಸಿದ ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ‘ಸಾಲುಮರದ ತಿಮ್ಮಕ್ಕ ಅವರು ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ಥಾಪನೆ ಕುರಿತಂತೆ ಆಸೆ ವ್ಯಕ್ತಪಡಿಸಿದ್ದರು. ಅದನ್ನು ಸಾಕಾರಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಅದರ ಜತೆಗೆ ಅರಣ್ಯ ಇಲಾಖೆ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಶೀಘ್ರ ಆದೇಶಿಸಲಾಗುವುದು. ಅದೇ ರೀತಿ ದೇಶದ ಹೆಸರಾಂತ ಕಾದಂಬರಿಗಾರ ಡಾ.ಎಸ್.ಎಲ್.ಭೈರಪ್ಪ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು’ ಎಂದರು.
ಭೈರಪ್ಪ, ತಿಮ್ಮಕ್ಕ, ಟಿಜೆಎಸ್, ಮೇಟಿಗೆ ಸದನದಲ್ಲಿ ಸಂತಾಪ
ಶಾಸಕ ಎಚ್.ವೈ. ಮೇಟಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು. ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು ಸಂತಾಪ ಸೂಚಿಸಿ ನಿರ್ಣಯ ಮಂಡಿಸಿದರು. ಶಾಸಕ ಎಚ್.ವೈ. ಮೇಟಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಮಾಜಿ ಶಾಸಕ ಆರ್.ವಿ. ದೇವರಾಜ್, ಶಿವಶರಣಪ್ಪಗೌಡ ಪಾಟೀಲ್, ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ, ಚಲನಚಿತ್ರ ನಟ ಎಂ.ಎಸ್. ಉಮೇಶ್ ಅವರ ನಿಧನದ ಕುರಿತು ಸದನಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಟಿ, ತಿಮ್ಮಕ್ಕ, ಭೈರಪ್ಪ ಅವರ ಬಗ್ಗೆ ಮಾತನಾಡಿದರು. ಇನ್ನು, ವಿಧಾನಪರಿಷತ್‌ನಲ್ಲಿ ಮಾಜಿ ಸದಸ್ಯ ಕೆ. ನರಹರಿ, ಆರ್.ವಿ. ದೇವರಾಜ್, ಶಾಸಕ ಎಚ್.ವೈ. ಮೇಟಿ, ಸಾಹಿತಿಗಳಾದ ಎಸ್.ಎಲ್. ಭೈರಪ್ಪ, ಡಾ. ಎನ್.ಆರ್.ನಾಯಕ, ಸಾಲುಮರದ ತಿಮ್ಮಕ್ಕ, ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್, ಗಾಯಕಿ ಅನುರಾಧಾ ಧಾರೇಶ್ವರ, ಚಲನಚಿತ್ರ ನಟರಾದ ಧರ್ಮೇಂದ್ರ, ಉಮೇಶ್ ಅವರ ನಿಧನಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚಿಸಿ ನಿರ್ಣಯ ಮಂಡಿಸಿದರು. ಅದಕ್ಕೆ ಸಭಾನಾಯಕ ಎನ್.ಎಸ್. ಬೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇನ್ನಿತರ ಸದಸ್ಯರು ಅಗಲಿದ ಗಣ್ಯರ ಕುರಿತು ಮಾತನಾಡಿ, ಸಂತಾಪ ಸೂಚನಾ ನಿರ್ಣಯನ್ನು ಅನುಮೋದಿಸಿದರು.


