ನಮಗೆ ಅನುಕೂಲ ಆಗುವ ಕಡೆ ಮಾತ್ರ ಬಿಜೆಪಿಯವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು(ಮಾ.30): ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲು ಸಾಕಷ್ಟು ಶಾಸಕರು ಸಿದ್ಧರಿದ್ದಾರೆ. ಅವರಿಗೆ ಸ್ಥಳಾವಕಾಶ ಕಲ್ಪಿಸಲಾಗದಷ್ಟು ಜನ ಪಕ್ಷಕ್ಕೆ ಬರುತ್ತಿದ್ದಾರೆ. ಹೀಗಾಗಿ ನಮಗೆ ಅನುಕೂಲ ಆಗುವ ಕಡೆ ಮಾತ್ರ ಬಿಜೆಪಿಯವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್ ಬಿಜೆಪಿ ಶಾಸಕರು, ಸಚಿವರಿಗೆ ದೂರವಾಣಿ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ರಾಹುಲ್ ಅನರ್ಹತೆ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಹಾದಿ ಹಿಡಿದ ಕಾಂಗ್ರೆಸ್!
ಯಾವ ಶಾಸಕರನ್ನು ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ದರಿಂದ ತಾವು ಮುಖ್ಯಮಂತ್ರಿ ಆದಿರಿ ಎಂಬುದನ್ನು ಬೊಮ್ಮಾಯಿ ಅವರು ನೆನಪು ಮಾಡಿಕೊಳ್ಳಬೇಕು. ನಿಮ್ಮ ಪಕ್ಷಕ್ಕೆ ಬಹುಮತ ಬಂದಿತ್ತಾ? ನಮ್ಮ ಶಾಸಕರೇ ಬಿಜೆಪಿಗೆ ಹೋಗಿದ್ದು ತಾನೇ? ಇನ್ನು ಮುಖ್ಯಮಂತ್ರಿಗಳು ಸಹ ಬೇರೆ ಪಕ್ಷದಿಂದ ಬಿಜೆಪಿಗೆ ಹೋದವರು ತಾನೇ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ವಿ.ಸೋಮಣ್ಣ ಅವರು ಪಕ್ಷಕ್ಕೆ ಬರುವುದರಿಂದ ನಮಗೆ ಯಾವುದೇ ಲಾಭ ಉಂಟಾಗುವುದಿಲ್ಲ. ಹೀಗಾಗಿ ಅವರು ನಮ್ಮ ಪಕ್ಷಕ್ಕೆ ಬೇಕಾಗಿಲ್ಲ ಎಂದು ಹೇಳಿದರು.
