Asianet Suvarna News Asianet Suvarna News

ರಾಹುಲ್ ಅನರ್ಹತೆ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಹಾದಿ ಹಿಡಿದ ಕಾಂಗ್ರೆಸ್!

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಸರ್ವಾಧಿಕಾರಿ ಆಡಳಿತದ ಮೂಲಕ ರಾಹುಲ್‌ಗಾಂಧಿ ಅವರ ಸಂಸತ್‌ ಸದಸ್ಯ ಸ್ಥಾನ ಅನರ್ಹಗೊಳಿಸಿದೆ. ಇದರ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Rahuls disqualification issue Congress started the fight against BJP govt bengaluru rav
Author
First Published Mar 28, 2023, 1:59 AM IST

ಬೆಂಗಳೂರು (ಮಾ.28) : ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಸರ್ವಾಧಿಕಾರಿ ಆಡಳಿತದ ಮೂಲಕ ರಾಹುಲ್‌ಗಾಂಧಿ ಅವರ ಸಂಸತ್‌ ಸದಸ್ಯ ಸ್ಥಾನ ಅನರ್ಹಗೊಳಿಸಿದೆ. ಇದರ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah)ಹೇಳಿದ್ದಾರೆ.

ರಾಹುಲ್‌ಗಾಂಧಿ(Rahul gandhi) ಅವರ ಸಂಸತ್‌ ಸದಸ್ಯತ್ವ ಅನರ್ಹಗೊಳಿಸಿರುವುದನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನ(Freedom park)ದಲ್ಲಿ ಕಾಂಗ್ರೆಸ್‌ ನಾಯಕರು ಭಾನುವಾರ ಕಪ್ಪು ಪಟ್ಟಿಧರಿಸಿ ಸತ್ಯಾಗ್ರಹ ನಡೆಸಿದರು. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ(Randeep singh surjewala), ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಹಲವು ನಾಯಕರು ಭಾಗವಹಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಏ.5ರಂದು ಕೋಲಾರಕ್ಕೆ ರಾಹುಲ್‌ ಗಾಂಧಿ ಭೇಟಿ: ಅನರ್ಹತೆ ಬಗ್ಗೆ ಇಲ್ಲಿಂದಲೇ ಉತ್ತರ

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಹೇಳುವ ಸತ್ಯ ಎದುರಿಸುವ ಶಕ್ತಿ ಸುಳ್ಳುಗಾರ ನರೇಂದ್ರ ಮೋದಿಗೆ ಇಲ್ಲ. ಹೀಗಾಗಿಯೇ ಹೇಡಿತನದಿಂದ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ ಹೇಡಿತನ ಪ್ರದರ್ಶಿಸಿದ್ದಾರೆ ಎಂದು ಕಿಡಿ ಕಾರಿದರು.

‘ಇದು ಹಿಟ್ಲರ್‌ನ ಜರ್ಮನಿ ದೇಶವಲ್ಲ ಮುಸಲೋನಿಯ ಇಟಲಿ ದೇಶವಲ್ಲ. ಹೀಗಿದ್ದರೂ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಆಡಳಿತದ ಮೂಲಕ ಪ್ರಜಾಪ್ರಭುತ್ವದ ದಮನ ಮಾಡುವ ಕೆಲಸ ಮಾಡುತ್ತಿದೆ. ಪ್ರಜಾಪ್ರಭುತ್ವ ಉಳಿಯಲು ಪ್ರಬಲ ವಿರೋಧಪಕ್ಷ ಬೇಕು. ರಾಜ್ಯದಲ್ಲಿ ಬ್ಯಾಂಕ್‌ನಲ್ಲಿದ್ದ ಜನಸಾಮಾನ್ಯರ ಹಣ ಲೂಟಿ ಮಾಡಿಕೊಂಡು ಓಡಿ ಹೋದ ಕಳ್ಳರನ್ನು ರಾಹುಲ್‌ಗಾಂಧಿ ಟೀಕಿಸಿದ್ದರು. ಆ ಕಳ್ಳರಲ್ಲಿ ಮೋದಿ ಹೆಸರಿನವರೇ ಹೆಚ್ಚು ಇದ್ದರು. ಕಳ್ಳರನ್ನು ಕಳ್ಳರು ಎಂದು ಕರೆಯಲೂ ಸಹ ಹಕ್ಕಿಲ್ಲವೇ? ಅಷ್ಟೂವಾಕ್‌ ಸ್ವಾತಂತ್ರ್ಯ ಇಲ್ಲವೇ ಎಂದು ಪ್ರಶ್ನಿಸಿದರು.

ಭಾರತ್‌ ಜೋಡೋ ಯಾತ್ರೆಯಿಂದ ರಾಹುಲ್‌ಗಾಂಧಿ ಅವರಿಗೆ ಜನಪ್ರಿಯತೆ ಹೆಚ್ಚಾಗಿತ್ತು.ರಾಹುಲ್‌ಗಾಂಧಿ ಅವರು ಸಂಸತ್‌ ಹೊರಗೆ ಹಾಗೂ ಒಳಗೆ ನರೇಂದ್ರ ಮೋದಿ ಹಾಗೂ ಅಂಬಾನಿ, ಅದಾನಿ ನಡುವಿನ ಸಂಬಂಧಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇವರನ್ನು ಹೀಗೆ ಬಿಟ್ಟರೆ ತಮಗೆ ಕಷ್ಟವಾಗುತ್ತದೆ ಎಂದು ಭಯದಿಂದ ಅವರು ಈ ರೀತಿ ಮಾಡಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಅಪಾಯದಲ್ಲಿದೆ:

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಮಾತನಾಡಿ, ಬಿಜೆಪಿ ಸರ್ಕಾರದಿಂದ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅಧಿಕಾರದಲ್ಲಿ ಕುಳಿತಿರುವವರು ಗೌತಮ್‌ ಅದಾನಿ ಎಂಬ ಗಿಳಿ ಮಾತು ಕೇಳುತ್ತಿದ್ದಾರೆ. ಅದಾನಿ ಹಗರಣದ ಬಗ್ಗೆ ಮಾತನಾಡಿದ್ದಾರೆ. ಲಲಿತ್‌ ಮೋದಿ, ನೀರವ್‌ ಮೋದಿ ಸೇರಿದಂತೆ ದೇಶಕ್ಕೆ ವಂಚಿಸಿ ಓಡಿ ಹೋಗಿದ್ದವರ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿದ್ದರು. ಅವರನ್ನು ರಕ್ಷಣೆ ಮಾಡಲು ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ಹೇಳಿಕೆ ನೀಡಿಲ್ಲವೇ?:

ಕಾಂಗ್ರೆಸ್‌ ನಾಯಕ ದಿನೇಶ್‌ಗುಂಡೂರಾವ್‌(Dinesh gundurao) ಮಾತನಾಡಿ, ಕಳೆದ 7-8 ವರ್ಷದಿಂದ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲವೇ? ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ನಳಿನ್‌ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ ಬೆಂಕಿ ಹಚ್ಚುವ ಮಾತುಗಳನ್ನು ಆಡುತ್ತಾರೆ. ನಾಥುರಾಮ್‌ ಗೋಡ್ಸೆ ಪೂಜಿಸುವ ಮಾತುಗಳನ್ನು ಸಂಸದರೇ ಆಡುತ್ತಾರೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಗೋಲಿ ಮಾರೋ ಸಾಲೋಂಕೊ ಎನ್ನುತ್ತಾರೆ. ಇದಕ್ಕಿಂತ ರಾಹುಲ್‌ ಮಾತನಾಡಿದ್ದರಲ್ಲಿ ದೊಡ್ಡ ತಪ್ಪೇನಿತ್ತು ಎಂದು ಪ್ರಶ್ನಿಸಿದರು.

ನನ್ನ ಜೀವನದಲ್ಲಿ ರಾಹುಲ್‌ ಗಾಂಧಿ ಮೂರನೇ ಪ್ರಭಾವಶಾಲಿ ವ್ಯಕ್ತಿ: ನಟಿ ರಮ್ಯಾ

ನಮ್ಮ ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದುಕೊಂಡು ಹೋದವರ ಬಗ್ಗೆ ರಾಹುಲ್‌ ಮಾತನಾಡಿದ್ದಾರೆ. ಈ ವೇಳೆ ಮೋದಿ ಸರ್‌ ನೇಮ್‌ ಬಳಸಿ ಮಾತನಾಡಿದ್ದರು. ಆದರೆ ಮಹಾನ್‌ ಮೋಸಗಾರ ಅದಾನಿ ಹಾಗೂ ಪ್ರಧಾನಮಂತ್ರಿ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ಈಗ ಕ್ರಮ ಕೈಗೊಂಡಿದ್ದಾರೆ. ಆಪರೇಶನ್‌ ಕಮಲ ಮಾಡಿ ದುಡ್ಡು ಖರ್ಚು ಮಾಡೋದು ಬೇಡ. ಕೇಸ್‌ ಹಾಕಿ ಜಡ್ಜ್‌ನ ಬುಕ್‌ ಮಾಡಿಕೊಂಡರೆ ಸಾಕು ಎನ್ನುವಂತಹ ಮನಃಸ್ಥಿತಿ ಬಂದಿದೆ. ಯಾರಾದರೂ ಇದಕ್ಕೆ ಎರಡು ವರ್ಷ ಶಿಕ್ಷೆ ಕೊಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌(BK Hariprasad), ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್‌, ಮಾಜಿ ಸಚಿವ ಕೆ.ಜೆ. ಜಾಜ್‌ರ್‍ ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios