ಮಹಾಭಾರತ ಸಂಗ್ರಾಮ: ಧಾರವಾಡ ಕ್ಷೇತ್ರ

ಹುಬ್ಬಳ್ಳಿ[ಫೆ.07]: ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರ ಕಳೆದ 22 ವರ್ಷಗಳಿಂದ ಬಿಜೆಪಿ ವಶದಲ್ಲಿದೆ. ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಜೆಪಿಯ ಪ್ರಹ್ಲಾದ್‌ ಜೋಶಿ ಮತ್ತೆ ಕಣಕ್ಕಿಳಿಯುವುದು ಖಚಿತವಾಗಿದ್ದರಿಂದ ಈ ಸಲ ಶತಾಯಗತಾಯ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದೆ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಜೆಡಿಎಸ್‌ ಪ್ರಭಾವ ಈ ಕ್ಷೇತ್ರದಲ್ಲಿ ಅಷ್ಟೇನೂ ಇಲ್ಲದ್ದರಿಂದ ಮೈತ್ರಿಯಾದರೆ ಎರಡೂ ಪಕ್ಷಗಳ ಹೊಂದಾಣಿಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತಿಸುತ್ತಿದ್ದು, ಯಾರಿಗೆ ಟಿಕೆಟ್‌ ಲಭಿಸುತ್ತದೆ ಎಂಬುದರ ಮೇಲೆ ಕ್ಷೇತ್ರದ ಚಿತ್ರಣ ನಿಂತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆ ಪ್ರಬಲವಾಗಿರುವುದರಿಂದ ಇದು ಕಾಂಗ್ರೆಸ್‌ ಪಾಲಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

ಇದುವರೆಗೆ ನಡೆದ 16 ಚುನಾವಣೆಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. ಮೊದಲ 10 ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರೆ, ನಂತರ 6ರಲ್ಲಿ ಬಿಜೆಪಿ ವಿಜಯಿಯಾಗಿದೆ. ಕೈ ಭದ್ರಕೋಟೆಯಾಗಿದ್ದ ಕ್ಷೇತ್ರ ನಂತರದ ದಿನಗಳಲ್ಲಿ ಬಿಜೆಪಿ ನೆಲೆಯಾಗಿ ಪರಿಣಮಿಸಿದೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಧಾರವಾಡ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಇದು ಹೊಂದಿದೆ. ಎಂಟು ಕ್ಷೇತ್ರಗಳ ಪೈಕಿ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಶಾಸಕರು ಇದ್ದಾರೆ. ಧಾರವಾಡ ಜಿಲ್ಲೆಯ ಐದು, ಹಾವೇರಿ ಜಿಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಆರು ಶಾಸಕರಿರುವುದು ಬಿಜೆಪಿಗೆ ಹೆಚ್ಚು ಅನುಕೂಲಕರ. ಆದರೆ ಕಾಂಗ್ರೆಸ್ಸಿಗರೆಲ್ಲರೂ ಒಳಜಗಳ ಮರೆತು ಒಗ್ಗಟ್ಟಾದರೆ ನಿಜಕ್ಕೂ ಬಿಜೆಪಿಗೆ ಕಷ್ಟ.

ಬಿಜೆಪಿಯಿಂದ ಮತ್ತೆ ಜೋಶಿ:

ಹಾಲಿ ಸಂಸದ ಪ್ರಹ್ಲಾದ ಜೋಶಿ ಈಗಾಗಲೇ ಮೂರು ಬಾರಿ ಗೆದ್ದು ಹ್ಯಾಟ್ರಿಕ್‌ ಸಾಧಿಸಿದ್ದಾರೆ. ಪಕ್ಷದಲ್ಲಿ ಇವರಿಗೆ ಪೈಪೋಟಿ ನೀಡುವ ಸಮರ್ಥರು ಇಲ್ಲದ ಕಾರಣ ಈ ಸಲವೂ ಜೋಶಿ ಅವರಿಗೆ ಟಿಕೆಟ್‌ ನಿಶ್ಚಿತ. ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿರುವುದು, ಉಡಾನ್‌ ಯೋಜನೆ, ಸ್ಮಾರ್ಟ್‌ಸಿಟಿ, ರೈಲ್ವೆ ನಿಲ್ದಾಣಗಳು ಹಾಗೂ ರೈಲ್ವೆ ವರ್ಕ್ಶಾಪ್‌ ಆಧುನೀಕರಣ, 500 ಕೋಟಿಗೂ ಹೆಚ್ಚು ಸೆಂಟ್ರಲ್‌ ರೋಡ್‌ ಫಂಡ್‌ ತಂದು ರಾಜ್ಯ, ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡಿಸಿರುವುದು. ಐಐಟಿ, ಐಐಐಟಿ ತಂದಿರುವುದು. ಸುಲಭದಲ್ಲಿ ಮತದಾರರಿಗೆ ಸಿಗುತ್ತಾರೆ ಎನ್ನುವ ಕಾರಣಕ್ಕೆ ಇವರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇವುಗಳನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಸಜ್ಜಾಗಿದ್ದಾರೆ ಜೋಶಿ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

ಆದರೆ ದೊಡ್ಡ ಉದ್ಯಮ ಹಾಗೂ ಕೈಗಾರಿಕೆಗಳು ತರಲು ಸಾಧ್ಯವಾಗದಿರುವುದು, ಮಹದಾಯಿ ವಿಷಯವಾಗಿ ಅಷ್ಟೊಂದು ಸ್ಪಂದಿಸಲಿಲ್ಲ ಎಂಬ ಬೇಸರ, ಅನುದಾನ ಬಂದರೂ ರಸ್ತೆ ಸೇರಿದಂತೆ ಯೋಜನೆಗಳು ಪೂರ್ಣವಾಗಿಲ್ಲ ಎಂಬ ಅಸಮಾಧಾನ, ವಿಧಾನಸಭೆ ಚುನಾವಣೆ ಟಿಕೆಟ್‌ ಹಂಚಿಕೆಯಲ್ಲಿ ಕೆಲ ಮುಖಂಡರಲ್ಲಿ ಉಂಟಾಗಿರುವ ಅಸಮಾಧಾನ ಈವರೆಗೂ ಶಮನವಾಗದಿರುವುದು ಕೊಂಚ ಮೈನಸ್‌ ಎನ್ನುವುದನ್ನು ಮರೆಯುವ ಹಾಗೆ ಇಲ್ಲ.

ಮೇಲಾಗಿ ಈ ಬಾರಿ ಇಲ್ಲಿ ಹಿಂದುತ್ವದ ಅಲೆಯಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಾಗಲಿ ಅಷ್ಟಾಗಿ ಕೇಳಿ ಬರುತ್ತಿಲ್ಲ. ಹುಬ್ಬಳ್ಳಿ ಈದ್ಗಾ ವಿವಾದದ ಹಿಂದುತ್ವ, ಅಟಲ್‌ ಬಿಹಾರಿ ವಾಜಪೇಯಿ, ಮೋದಿ ಅಲೆಯಲ್ಲಿ ತೇಲುತ್ತ ಬಂದಿರುವ ಜೋಶಿ ಅವರಿಗೆ ನಿಜಕ್ಕೂ ಈ ಚುನಾವಣೆ ಅಗ್ನಿಪರೀಕ್ಷೆ ಆಗಲಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

ಕಾಂಗ್ರೆಸ್‌ನಿಂದ ವಿನಯ್‌, ಹಿಂಡಸಗೇರಿ ಅಥವಾ ಲಾಡ್‌?:

22 ವರ್ಷಗಳಿಂದ ಕಾಂಗ್ರೆಸ್‌ನ ಅಭ್ಯರ್ಥಿಗಳ್ಯಾರು ಇಲ್ಲಿ ಗೆಲುವ ಸಾಧಿಸಲು ಸಾಧ್ಯವಾಗಿಲ್ಲ. 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಕೆ.ನಾಯ್ಕರ್‌ ಗೆಲುವು ಸಾಧಿಸಿದ್ದೇ ಕೊನೆ. 1996ರಿಂದ ಈ ಕ್ಷೇತ್ರ ಬಿಜೆಪಿ ವಶದಲ್ಲೇ ಇದೆ. ಜೋಶಿ ಎದುರಿಗೆ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ನಿಲ್ಲಿಸಿ ಈ ಸಲ ಹೇಗಾದರೂ ಮಾಡಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹಂಬಲ ಕಾಂಗ್ರೆಸ್ಸಿನದು.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಕಳೆದ ಬಾರಿ ಜೋಶಿ ಎದುರು ಪರಾಭವಗೊಂಡಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ, ಮಾಜಿ ಕಾರ್ಮಿಕ ಸಚಿವ ಎ.ಎಂ.ಹಿಂಡಸಗೇರಿ, ಕಲಘಟಗಿ ವಿಧಾನಸಭೆ ಚುನಾವಣೆಯಲ್ಲಿ ಸೋತು ಬಳ್ಳಾರಿ ಸೇರಿರುವ ಮಾಜಿ ಸಚಿವ ಸಂತೋಷ ಲಾಡ್‌, ಎಐಸಿಸಿ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶಾಕೀರ್‌ ಸನದಿ, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಹೇಶ ನಾಲವಾಡ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ಸೇರಿದಂತೆ ಹಲವರ ಹೆಸರು ಕೇಳಿ ಬರುತ್ತಿದೆ. ಆದರೆ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ನಡೆಯುತ್ತಿರುವುದು ಹಿಂಡಸಗೇರಿ ಮತ್ತು ಕುಲಕರ್ಣಿ ಮಧ್ಯೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ಗೆ ಆಪ್ತರಾಗಿರುವ ಸದಾನಂದ ಡಂಗನವರ್‌, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಆಪ್ತ ಮಾಜಿ ಮೇಯರ್‌ ಅನಿಲಕುಮಾರ್‌ ಪಾಟೀಲ್‌ ಕೂಡ ಟಿಕೆಟ್‌ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಇನ್ನು ಕ್ಷೇತ್ರದಲ್ಲಿ ಸುಮಾರು 2.5 ಲಕ್ಷ ಮುಸ್ಲಿಮರೂ ಸೇರಿದಂತೆ 9 ಲಕ್ಷ ಅಹಿಂದ ಮತದಾರರಿದ್ದಾರೆ. ಮೇಲಾಗಿ ಮುಂಬೈ ಕರ್ನಾಟಕದಲ್ಲಿ ಯಾವೊಬ್ಬ ಮುಸ್ಲಿಂ ನಾಯಕರೂ ಸಚಿವರು, ಸಂಸದರಾಗಿಲ್ಲ. ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಮರು ಇರುವ ಕ್ಷೇತ್ರ ಇದು. ಈ ಹಿನ್ನಲೆಯಲ್ಲಿ ಹಿಂಡಸಗೇರಿ ಹೆಸರು ಮುಂಚೂಣಿಯಲ್ಲಿದೆ. ಹಾವೇರಿ ಕ್ಷೇತ್ರದಲ್ಲಿ ಎರಡು ಬಾರಿ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದರೂ ಪ್ರಯೋಜನ ಆಗದಿರುವುದು ಕಾಂಗ್ರೆಸ್‌ ಹಿಂಡಸಗೇರಿಯತ್ತ ಒಲವು ತೋರಲು ಕಾರಣವಾಗಿದೆ. ಪ್ರೊ.ಐ.ಜಿ. ಸನದಿ ಇಲ್ಲವೇ ಅವರ ಪುತ್ರ ಶಾಕೀರ ಸನದಿ ಹೆಸರುಗಳು ಕೂಡ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಇದರೊಂದಿಗೆ ರಾಹುಲ್‌ ಗಾಂಧಿ ಅವರ ಸೋಷಿಯಲ್‌ ಮಿಡಿಯಾದ ತಂಡದಲ್ಲಿದ್ದ ಸೀಮಾ ಸಾಧಿಕಾ ಕೂಡ ಪ್ರಯತ್ನ ಮಾಡುತ್ತಿದ್ದಾರೆ.

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಜಾತಿ ಸಮೀಕರಣ:

ಜಾತಿ ಲೆಕ್ಕಾಚಾರ ನೋಡಿದರೆ ವೀರಶೈವ- ಲಿಂಗಾಯತ ಸಮುದಾಯವೇ ಇಲ್ಲಿ ಬಹುಸಂಖ್ಯಾತರು. ನಂತರದ ಸ್ಥಾನದಲ್ಲಿ ಮುಸ್ಲಿಮರಿದ್ದಾರೆ. ಬಳಿಕ ದಲಿತರು, ಕುರುಬರು, ಮರಾಠರು, ಬ್ರಾಹ್ಮಣರು, ಕ್ರಿಶ್ಚಿಯನ್ನರು ಬರುತ್ತಾರೆ. ಆದಾಗ್ಯೂ ಈ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರ ಮತ್ತು ಪ್ರಹ್ಲಾದ್‌ ಜೋಶಿ ವಿರುದ್ಧ ಹೆಚ್ಚುಸಲ ಸೋತಿದ್ದು ಕಾಂಗ್ರೆಸ್ಸಿನ ಲಿಂಗಾಯತ ಅಭ್ಯರ್ಥಿಗಳೇ. ಹಾಗಾಗಿ ಈ ಬಾರಿ ಮುಸ್ಲಿಂ ಸೇರಿದಂತೆ ಅಹಿಂದ ಮತಗಳು ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ತನ್ನ ಜಾತಿ ಲೆಕ್ಕಾಚಾರವನ್ನು ಬದಲಿಸುವ ಚಿಂತನೆಯಲ್ಲಿದೆ. ಕ್ಷೇತ್ರದಲ್ಲೂ ಅದೇ ಕೂಗು ಕೇಳಿಬರುತ್ತಿದೆ.

ಒಟ್ಟಿನಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜೋಶಿ ವಿರುದ್ಧ ಮೈತ್ರಿ ಪಕ್ಷದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇಲ್ಲಿ ಪ್ರಮುಖವಾಗಿದೆ.

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

ಪದೇ ಪದೇ ಆಯ್ಕೆಯ ಕ್ಷೇತ್ರವಿದು

ಒಂದು ಪಕ್ಷ, ಒಬ್ಬ ಅಭ್ಯರ್ಥಿ ಇಲ್ಲಿ ಪದೇ ಪದೇ ಆಯ್ಕೆಯಾಗುವ ಕ್ಷೇತ್ರವಿದು. ಈವರೆಗಿನ ಚುನಾವಣೆಗಳ ಪೈಕಿ ಮೊದಲ ಎರಡಲ್ಲಿ ಕಾಂಗ್ರೆಸ್‌ನ ಡಿ.ಪಿ.ಕರಮರಕರ, ಸರೋಜಿನಿ ಮಹಿಷಿ ನಾಲ್ಕು ಬಾರಿ, ಡಿ.ಕೆ.ನಾಯ್ಕರ್‌ ನಾಲ್ಕು ಬಾರಿ, ಬಿಜೆಪಿಯ ವಿಜಯ ಸಂಕೇಶ್ವರ ಮೂರು ಬಾರಿ, ನಂತರ ಪ್ರಹ್ಲಾದ ಜೋಶಿ ಮೂರು ಬಾರಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದ ಮಹಿಮೆಯೇ ಹಾಗೆ, ಗೆದ್ದು ಕಾಲಿಟ್ಟರೆ ಸಾಕು ಮೂರು, ನಾಲ್ಕುಬಾರಿ ನಿರಾಯಾಸ ಗೆಲುವು ಕಾಣುತ್ತಾರೆ. ಹಾಗಾಗಿ ಈ ಕ್ಷೇತ್ರದ ಮೇಲೆ ಬಹಳಷ್ಟುಜನ ಕಣ್ಣಿಟ್ಟಿದ್ದಾರೆ.

ಲೋಕಸಭಾ ಚುನಾವಣೆ: ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿದೆ ಬಾಗಲಕೋಟೆ

ಯಾರ್ಯಾರ ನಡುವೆ ಪೈಪೋಟಿ?

ಬಿಜೆಪಿ: ಪ್ರಹ್ಲಾದ ಜೋಶಿ

ಕಾಂಗ್ರೆಸ್‌: ವಿನಯ ಕುಲಕರ್ಣಿ, ಎ.ಎಂ. ಹಿಂಡಸಗೇರಿ, ಸಂತೋಷ ಲಾಡ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಶಾಕೀರ ಸನದಿ, ಡಾ| ಮಹೇಶ ನಾಲವಾಡ, ಸೀಮಾ ಸಾಧಿಕಾ

-ಶಿವಾನಂದ ಗೊಂಬಿ