ಲೋಕಸಭೆ ಚುನಾವಣೆ 2024: ಉತ್ತರ ಕರ್ನಾಟಕದಿಂದಲೇ ಮೋದಿ ಪ್ರಚಾರ!
ಉತ್ತರ ಕರ್ನಾಟಕ ಭಾಗದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲಿದ್ದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ದಿನಾಂಕ ಶೀಘ್ರ ನಿಗದಿಪಡಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ (ಮಾ.13): ಉತ್ತರ ಕರ್ನಾಟಕ ಭಾಗದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೆ ಚಾಲನೆ ಕೊಡಲಿದ್ದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ದಿನಾಂಕ ಶೀಘ್ರ ನಿಗದಿಪಡಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡ್ಮೂರು ಸ್ಥಳ ಪರಿಶೀಲನೆ ಮಾಡಲಾಗಿದ್ದು ನಗರದ ಕೇಶ್ವಾಪುರದ ಗಾಳಿಪಟ ನಡೆಸಿದ ಸ್ಥಳ ಹಾಗೂ ಗಬ್ಬೂರು ಕ್ರಾಸ್‌ನಲ್ಲಿ ಎರಡು ಸ್ಥಳ ಗುರುತಿಸಲಾಗಿದೆ. ಈ ಸಂಬಂಧ ಅನೇಕ ಸಭೆ ನಡೆಸಲಾಗುತ್ತದೆ. ಪೂರ್ವ ಸಿದ್ಧತೆಗಾಗಿ ಎಲ್ಲ ತಯಾರಿ ನಡೆದಿದೆ. ಸಮಾವೇಶಕ್ಕೆ ನಾಲ್ಕು ಲಕ್ಷ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ಧಾರವಾಡ, ಹಾವೇರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಮಾವೇಶ ನಡೆಸಲಾಗುವುದು ಇದೊಂದು ವಿಶೇಷ ಸಭೆ ಆಗಿದೆ. ಈ ಮೂಲಕ ಚುನಾವಣಾ ಕಣಕಹಳೆ ಊದಲಾಗುವುದು ಎಂದರು.
ಧಾರವಾಡದಲ್ಲಿ ಯಾರಿಗೆ ಗೆಲುವಿನ ‘ಪೇಡಾ’? ಕೇಂದ್ರ ಸಚಿವ ಜೋಶಿ ವಿರುದ್ಧ ಯಾರಾಗ್ತಾರೆ ಕಾಂಗ್ರೆಸ್ ಕಲಿ?
ಸಂವಿಧಾನ ತಿದ್ದುಪಡಿ ವಿಚಾರವಾಗಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ವಿಷಯವಾಗಿ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾವುದೇ ರೀತಿಯ ಗೊಂದಲ ಇಲ್ಲ. ಸಂವಿಧಾನ ತಿದ್ದುಪಡಿ ಮಾಡುವ ವಿಚಾರ ನಮ್ಮ ಮುಂದಿಲ್ಲ. ಈ ಹಿಂದೆಯೂ ಇದೇ ರೀತಿ ಗೊಂದಲ ಆಗಿತ್ತು. ಯಾವುದೇ ರೀತಿಯ ಗೊಂದಲ ಬೇಡ ಎಂದರು.
ಎರಡ್ಮೂರು ದಿನದಲ್ಲಿ ಕರ್ನಾಟಕದ ಪಟ್ಟಿ ಬಿಡುಗಡೆ ಸಾಧ್ಯತೆ
ಲೋಕಸಭೆಯ 2ನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಲಿಸ್ಟ್ ಇರಲಿದೆ. ಎರಡ್ಮೂರು ದಿನಗಳಲ್ಲಿ ಲಿಸ್ಟ್ ಬಿಡುಗಡೆಯಾಗಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹಾಲಿ ಸಂಸದರು, ಸಚಿವರು ಟಿಕೆಟ್ ಕೊಡಬೇಕೋ ಬೇಡವೋ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಮೊದಲ ಪಟ್ಟಿಯಲ್ಲಿ 195 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದೆ. ಎರಡನೆಯ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಇರಲಿವೆ. ಅದು ಎರಡ್ಮೂರು ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪುನರುಚ್ಛಿಸಿದರು.
ರಾಜ್ಯ ಸರ್ಕಾರವೇ ಕಾರಣ:
ಮೆಣಸಿನಕಾಯಿ ಬೆಳೆಗಾರರು ಬ್ಯಾಡಗಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಗಲಾಟೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪಿಸಿದ ಅವರು, ಕೋಲ್ಡ್ ಸ್ಟೋರೇಜ್‌ಗಳ ದೊಡ್ಡ ಕೊರತೆ ಎದುರಾಗಿದೆ. ಮೆಣಸಿನಕಾಯಿ ಇಡಲು ಮಾರುಕಟ್ಟೆಯಲ್ಲಿ ಸ್ಥಳಾವಕಾಶವೇ ಇಲ್ಲ. ಮೆಣಸಿನಕಾಯಿಯ ಆವಕ ಜಾಸ್ತಿಯಾಗಿದೆ. ಇದರಿಂದ ದರ ಕುಸಿತವಾಗಿದೆ. ಇದು ರೈತರಲ್ಲಿ ಆಕ್ರೋಶವುಂಟಾಗಲು ಕಾರಣ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೆಣಸಿನಕಾಯಿ ಆವಕಕ್ಕೆ ತಕ್ಕಂತೆ ಪೂರ್ವ ಸಿದ್ಧತೆ ಇಲ್ಲ ಎಂದರು. ಮುಂದೆಯಾದರೂ ಕೋಲ್ಡ್ ಸ್ಟೋರೇಜ್‌ಗಳ ಕಡೆಗೆ ಸರ್ಕಾರ ಗಮನಹರಿಸಬೇಕು ಎಂದರು.