ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ: ಶ್ರೀರಾಮುಲು
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಲೋಕಸಭಾ ಚುನಾವಣೆ ಗೆಲ್ಲುವ ಮೂಲಕವೇ ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಲೋಕಸಭಾ ಚುನಾವಣೆ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ (ಮಾ.14):ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಪ್ರಚಾರ, ಸುಳ್ಳು ಆರೋಪ ಕುತಂತ್ರ ಜೊತೆಗೆ ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳಿಂದ ಸೋಲನುಭವಿಸಿದ್ದ ಶ್ರೀರಾಮುಲು. ಸೋಲಿನ ಬಳಿಕ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಅಜ್ಞಾತವಾಸದಲ್ಲಿದ್ದರು. ಇದೀಗ ಲೋಕಸಭಾ ಚುನಾವಣೆ ಟಿಕೆಟ್ ಸಿಕ್ಕಿರುವುದು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಸ್ಪರ್ಧೆಗೆ ಅವಕಾಶ ನೀಡಿರುವ ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ, ಸಂತೋಷ್ ಜೀ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಲೋಕಸಭಾ ಚುನಾವಣೆ ಟಿಕೆಟ್ ಸಿಕ್ಕಿರುವ ವಿಚಾರವಾಗಿ ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸೋಲಿನಿಂದ ಅಜ್ಞಾತ ವಾಸಕ್ಕೆ ಕಳುಹಿಸಲಾಗಿತ್ತು. ಕೊರೊನಾ, ಪೇಸಿಎಂ ಅಪಪ್ರಚಾರ, ಮೋಸದ ಗ್ಯಾರಂಟಿ ಭರವಸೆ ನಮಗೆ ಸೋಲಾಯ್ತು. ಆದರೆ ಈಗ ನಡೆಯುತ್ತಿರೋದು ದೇಶದ ಚುನಾವಣೆ. ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಗೆಲುವಿಗೆ ಎಲ್ಲರೂ ಇರುತ್ತಾರೆ ಸೋಲು ಅನಾಥ. ಹೀಗಾಗಿ ಯಾರನ್ನು ಸೋಲಿಗೆ ಹೊಣೆಗಾರಿಕೆ ಮಾಡಲ್ಲ. ಇಂದಿಗೆ ಆ ಕಾಲ ಮುಗಿದಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುವೆ ಎಂದರು.
ಬಿಜೆಪಿ ಅಭ್ಯರ್ಥಿ ಗೆದ್ದರೆ, ಪ್ರಧಾನಿ ನರೇಂದ್ರ ಮೋದಿಗೆ ಶಕ್ತಿ: ಸಂಸದ ವೈ.ದೇವೇಂದ್ರಪ್ಪ
ನಾನು ನಗರಸಭೆ ಸದಸ್ಯನಿಂದ ರಾಜಕೀಯ ಜೀವನ ಆರಂಭಿಸಿದೆ. ಆ ಬಳಿಕ ಹಂತ ಹಂತವಾಗಿ ಶಾಸಕ, ಸಂಸದ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಡು ಮುಟ್ಟದ ಸೊಪ್ಪಿಲ್ಲ, ರಾಮುಲು ಪ್ರೀತಿ ಮಾಡೋ ವ್ಯಕ್ತಿ ಇಲ್ಲ. ನಮ್ಮ ಕ್ಷೇತ್ರದ ಪ್ರತಿಯೊಬ್ಬರೂ ನನ್ನ ಮೇಲೆ ಭರವಸೆ, ಪ್ರೀತಿ ಇಟ್ಟಿದ್ದಾರೆ. ಮೂವತ್ತು ವರ್ಷದ ಸುದೀರ್ಘ ರಾಜಕೀಯ ಈ ಬಾರಿ ನನ್ನ ಕೈಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲಬೇಕು. ಇದು ರಾಮುಲು ಚುನಾವಣೆ ಅಲ್ಲ, ಇಡೀ ದೇಶದ ಚುನಾವಣೆಯಾಗಿದೆ. ಪ್ರಧಾನಿ ಮೋದಿಯವರ ಕಾರ್ಯವೈಖರಿ, ದೇಶದ ಅಭಿವೃದ್ಧಿ ಪತದಡೆಗೆ ಕಂಡೊಯ್ದ ಪರಿ ಜನರು ನೋಡುತ್ತಿದ್ದಾರೆ. ಅಭಿವೃದ್ಧಿಯ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಈ ಬಾರಿ ಅಭೂತಪೂರ್ವವಾಗಿ ಬಿಜೆಪಿ ಗೆಲ್ಲಲಿದೆ ಎಂದರು.
ಕಾಂಗ್ರೆಸ್ ವಿರುದ್ಧ ಕಿಡಿ:
ಕಾಂಗ್ರೆಸ್ ದುರಾಡಳಿತ, ದುರಾಹಂಕಾರ, ಕುಟುಂಬ ರಾಜಕೀಯದಿಂದ ಒಂದೇ ಒಂದು ಕುಟುಂಬ ರಾಜಕೀಯಕ್ಕೆ ಸೀಮಿತವಾಗಿ. ಹಿಂದೆ ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ಆದರೆ 1999ರ ಸುಷ್ಮಸ್ವರಾಜ್ ಚುನಾವಣೆ ಬಳಿಕ ಬಿಜೆಪಿ ಗಟ್ಟಿ ನೆಲೆಯಾಯಿತು. ಸುಷ್ಮ ಸ್ವರಾಜ್ ಸೋಲಿನ ಬಳಿಕ ನಿರಂತರವಾಗಿ ಬಳ್ಳಾರಿಯಲ್ಲಿ ಬಿಜೆಪಿ ಗೆದ್ದಿದೆ. ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಿದ್ದರಿಂದ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನವರು ಶ್ರೀರಾಮುಲು ಅವರನ್ನು ಚಕ್ರವ್ಯೂಹದಲ್ಲಿ ಸಿಲುಕಿಸೋ ಪ್ಲಾನ್ ಮಾಡಿದ್ರು. ಆದರೆ ಈ ಬಾರಿ ಅದ್ಕೆ ನಮ್ಮ ಕಾರ್ಯಕರ್ತರು ಅವಕಾಶ ನೀಡೋದಿಲ್ಲ ಎಂದರು.
ಶ್ರೀರಾಮ ವನವಾಸಕ್ಕೆ ಹೋದ ಪರಿಸ್ಥಿತಿ ಕಳೆದ ಎಂಟು ತಿಂಗಳಿಂದ ನಾನು ಅನುಭವಿಸಿದೆ. ಆದರೆ ಈ ಚುನಾವಣೆ ಮೂಲಕ ಅಜ್ಞಾತ ವಾಸಕ್ಕೆ ಮುಕ್ತಿ ಸಿಗಲಿದೆ ಎಂದರು. ಇದೇ ವೇಳೆ ಗಂಗಾವತಿ ಶಾಸಕ ಒಂದು ಕಾಲದ ಪರಮಾಪ್ತನಾಗಿದ್ದ ಜನಾರ್ದನ ರೆಡ್ಡಿ ಕುರಿತು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಶ್ರೀರಾಮುಲು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Loksabha election 2024: ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ ಎಂದ ಶಾಸಕ ಜನಾರ್ದನ ರೆಡ್ಡಿ!
ಗೆಲ್ಲುವ ಮೂಲಕವೇ ಉತ್ತರ ನೀಡುತ್ತೇನೆ:
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರಿಗೆ ಲೋಕಸಭಾ ಚುನಾವಣೆ ಗೆಲ್ಲುವ ಮೂಲಕವೇ ಉತ್ತರ ನೀಡುತ್ತೇನೆ. ಗೆಲುವು ಯಾರೊಬ್ಬರ ಸ್ವತ್ತೂ ಅಲ್ಲ. ಯಾರೂ ಮಾಡೋದಲ್ಲ, ಅದನ್ನ ಜನರು ನಿರ್ಣಯ ಮಾಡ್ತಾರೆ. ಕಳೆದ ಬಾರಿ ಸೋಲು ಆಗಿರುವುದು ನನ್ನೊಬ್ಬನ ಸೋಲಲ್ಲ, ರಾಜ್ಯದಲ್ಲಿಯೆ ಬಿಜೆಪಿಗೆ ಸೋಲಾಯ್ತು.