Asianet Suvarna News Asianet Suvarna News

Lok Sabha Elections 2024: ಕಾಂಗ್ರೆಸ್‌ನ ಬಣ ಜಗಳ ಜೆಡಿಎಸ್‌ನ ಮಲ್ಲೇಶ್‌ ಬಾಬುಗೆ ಲಾಭ ಆಗುತ್ತಾ?

2019 ರಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸಚಿವ ರಮೇಶ್‌ ಕುಮಾರ್ ನಡುವಿನ ಬಣ ತಿಕ್ಕಾಟದಿಂದಾಗಿ ಬಿಜೆಪಿಯ ಎಸ್.ಮುನಿಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆದ್ದು ಅಚ್ಚರಿ ಮೂಡಿಸಿದ್ದರು. 

Lok Sabha Elections 2024 Will Congress faction fight benefit Mallesh Babu of JDS gvd
Author
First Published Apr 23, 2024, 10:39 AM IST | Last Updated Apr 25, 2024, 12:49 PM IST

ಸ್ಕಂದಕುಮಾರ್ ಬಿ.ಎಸ್‌.

ಕೋಲಾರ (ಏ.23): ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿರುವ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಕೋಲಾರದಲ್ಲಿ ಈವರೆಗೂ ನಡೆದ 17 ಲೋಕಸಭಾ ಚುನಾವಣೆಗಳ ಪೈಕಿ ೧೫ರಲ್ಲಿ ಕಾಂಗ್ರೆಸ್‌ಗೆ ಗೆದ್ದಿದೆ. 2019 ರಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಸಚಿವ ರಮೇಶ್‌ ಕುಮಾರ್ ನಡುವಿನ ಬಣ ತಿಕ್ಕಾಟದಿಂದಾಗಿ ಬಿಜೆಪಿಯ ಎಸ್.ಮುನಿಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆದ್ದು ಅಚ್ಚರಿ ಮೂಡಿಸಿದ್ದರು. 

ಇದೀಗ ಮತ್ತೊಂದು ಚುನಾವಣೆಗೆ ಕೋಲಾರ ಸಿದ್ಧವಾಗಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಣಜಗಳವೇ ತಲೆನೋವು ತಂದಿಟ್ಟಿದೆ.ಕಳೆದ ಬಾರಿಯ ಸೋಲಿನ ಬಳಿಕವೂ ೫ ವರ್ಷಗಳಲ್ಲಿ ಕೆ.ಎಚ್.ಮುನಿಯಪ್ಪ, ರಮೇಶ್ ಕುಮಾರ್ ಬಣಗಳ ನಡುವಿನ ಕಿತ್ತಾಟ ಬಗೆಹರಿದಿಲ್ಲ. ಇದರ ಪರಿಣಾಮವಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಕೊನೆಯ ವರೆಗೂ ಕಗ್ಗಂಟಾಗಿಯೇ ಪರಿಣಮಿಸಿತ್ತು. 

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

ಅಳಿಯ ಚಿಕ್ಕಪೆದ್ದನ್ನಗೆ ಟಿಕೆಟ್‌ ಕೊಡಿಸಲು ಮುನಿಯಪ್ಪ ಪಟ್ಟು ಹಿಡಿದಿದ್ದರೂ ಕೊನೆಗೆ ರಮೇಶ್‌ ಕುಮಾರ್ ಬಣದ ವಿರೋಧದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಹೊಸ ಮುುಖ ಕೆ.ವಿ.ಗೌತಮ್‌ಗೆ ಅವಕಾಶ ನೀಡಲಾಯಿತು.ಇನ್ನು ಬಿಜೆಪಿಯಲ್ಲಿ ಹಾಲಿ ಸಂಸದ ಎಸ್.ಮುನಿಸ್ವಾಮಿ ಸಹಜವಾಗಿಯೇ ಆಕಾಂಕ್ಷಿಯಾಗಿದ್ದರೂ ಮೈತ್ರಿ ಭಾಗವಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಕಾರಣ ಟಿಕೆಟ್‌ ಕೈತಪ್ಪಿತು. ಇದೀಗ ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಎಸ್‌ನ ಮಲ್ಲೇಶ್‌ಬಾಬು ಅವರನ್ನು ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. 

ಕೋಲಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿ ಇದೆ.ಬಣ ಜಗಳದಲ್ಲಿ ಅಭ್ಯರ್ಥಿ ಕಂಗಾಲು: ದಶಕಗಳಿಂದ ನಡೆಯುತ್ತಿರುವ ಸ್ಥಳೀಯ ಕಾಂಗ್ರೆಸ್‌ ನಾಯಕರ ತಿಕ್ಕಾಟ ಸಂಪೂರ್ಣವಾಗಿ ಬಗೆಹರಿದಿಲ್ಲ. ರಮೇಶ್ ಕುಮಾರ್ ನೇತೃತ್ವದ ತಂಡ ಕ್ಷೇತ್ರದಲ್ಲಿ ಪ್ರಚಾರದ ಉಸ್ತುವಾರಿ ವಹಿಸಿದ್ದರೆ, ಮುನಿಯಪ್ಪ ಬಣದವರು ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪ ಮಾಡಿ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇನ್ನು ಅಳಿಯನಿಗೆ ಟಿಕೆಟ್‌ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಮುನಿಯಪ್ಪ ಕೂಡ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.ಇದು ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ಗೆ ಆತಂಕ ತಂದಿಟ್ಟಿದೆ.

ರಮೇಶ್‌ಕುಮಾರ್ ಮತ್ತು ಮುನಿಯಪ್ಪ ಬಣದ ನಡುವೆ ಸಮನ್ವಯ ಮಾಡಿಕೊಳ್ಳುವುದೇ ಗೌತಮ್‌ಗೆ ದೊಡ್ಡ ತಲೆನೋವಾಗಿದೆ. ಇದರ ಜೊತೆಗೆ ಗೌತಮ್ ಆಂಧ್ರಪ್ರದೇಶ ಮೂಲದವರು, ಅವರನ್ನು ಬೆಂಗಳೂರಿನಿಂದ ಕರೆತರಲಾಗಿದೆ, ಅವರಿಗೆ ಕ್ಷೇತ್ರದ ಪರಿಚಯವೇ ಇಲ್ಲ ಎಂಬ ರೀತಿಯಲ್ಲಿ ಎನ್‌ಡಿಎ ಮೈತ್ರಿ ಕೂಟದ ಮುಖಂಡರಿಂದ ಪ್ರಚಾರ ನಡೆಯುತ್ತಿದೆ.ಬಿಜೆಪಿಯಲ್ಲಿ ಗೊಂದಲ: ಮೇಲ್ನೋಟಕ್ಕೆ ಮಲ್ಲೇಶ್ ಬಾಬು ಪರ ಜೆಡಿಎಸ್ ಮತ್ತು ಬಿಜೆಪಿಯ ಎಲ್ಲ ಮುಖಂಡರು ಒಗ್ಗಟ್ಟಾಗಿ ಪ್ರಚಾರ ಮಾಡುತ್ತಿದ್ದಾರೆ. 

ಯಡಿಯೂರಪ್ಪ, ಅಶೋಕ್‌, ದೇವೇಗೌಡ, ವಿಜಯೇಂದ್ರ, ಕುಮಾರಸ್ವಾಮಿ ಸೇರಿ ಹಲವು ಮುಖಂಡರು ಕ್ಷೇತ್ರಕ್ಕೆ ಬಂದು ಬಿರುಸಿನ ಪ್ರಚಾರವನ್ನೂ ಮಾಡಿ ಹೋಗಿದ್ದಾರೆ. ಆದರೆ ಬಿಜೆಪಿ ಪಕ್ಷದೊಳಗಿನ ಗುಂಪುಗಾರಿಕೆ ಮಲ್ಲೇಶ್‌ಬಾಬುಗೆ ಇಕ್ಕಟ್ಟು ತಂದಿಟ್ಟಿದೆ. ಪ್ರಚಾರದ ವಿಚಾರಕ್ಕೆ ಬಂದರೆ ಮೋದಿ ಸರ್ಕಾರದ ಜನಪ್ರಿಯತೆಯನ್ನೇ ನೆಚ್ಚಿಕೊಂಡು ಮಲ್ಲೇಶ್ ಬಾಬು ಪ್ರಚಾರ ನಡೆಸುತ್ತಿದ್ದು, ಅದರ ಜತೆಗೆ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨ ಬಾರಿ ಸೋತ ಅನುಕಂಪದ ಲಾಭವನ್ನೂ ಪಡೆಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಲ್ಲೇಶ್‌ ಕಾಂಗ್ರೆಸ್‌ ಗ್ಯಾರಂಟಿಯನ್ನು ನೆಚ್ಚಿಕೊಂಡಿದ್ದಾರೆ.

ಮಲ್ಲೇಶ್‌ ಬಾಬು(ಎನ್‌ಡಿಎ) ಜೆಡಿಎಸ್‌ ಮುಖಂಡ, ಕೋಲಾರ ತಾಲೂಕಿನ ಕುಂಬಾರಹಳ್ಳಿಯ ಎಂ.ಮಲ್ಲೇಶ್‌ಬಾಬು ಐಎಎಸ್ ಅಧಿಕಾರಿ ದಿ.ಮುನಿಸ್ವಾಮಿ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಪುತ್ರ. ಎಂಬಿಎ ಪದವೀಧರರಾಗಿರುವ ಅವರು ತಂದೆಯ ಹೆಸರಿನಲ್ಲಿ ಶಾಲೆಯನ್ನೂ ನಡೆಸುತ್ತಿದ್ದಾರೆ. ಬೋವಿ ಸಮುದಾಯದ ಮಲ್ಲೇಶ್‌ ಬಾಬು ಅವರು ಬಂಗಾರಪೇಟೆ ವಿಧಾನಸಭಾ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೇವಲ 4700 ಮತಗಳ ಅಂತರದಿಂದ ಪರಾಭವಗೊಂಡಿದ್ದರು. 

ಈ ಬಾರಿ ಬಿಜೆಪಿ ಕೈಯಲ್ಲಿದ್ದ ಕೋಲಾರ ಲೋಕಸಭಾ ಕ್ಷೇತ್ರವನ್ನು ಮೈತ್ರಿಯ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ ಮಲ್ಲೇಶ್‌ ಬಾಬು ಅವರನ್ನು ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.ಕೆ.ವಿ.ಗೌತಮ್‌ (ಕಾಂಗ್ರೆಸ್‌)ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಅಚ್ಚರಿಯ ಅಭ್ಯರ್ಥಿ. ಬೆಂಗಳೂರಿನ ಮಾಜಿ ಮೇಯರ್ ವಿಜಯ ಕುಮಾರ್ ಅವರ ಪುತ್ರರಾಗಿರುವ ಕೆ.ವಿ.ಗೌತಮ್ ಅವರು ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರು. ಬೆಂಗಳೂರು ನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು. ದಲಿತ ಎಡಗೈ ಸಮುದಾಯಕ್ಕೆ ಸೇರಿದವರು. ಗೌತಮ್ ಅವರು ಎಂಜಿನಿಯರಿಂಗ್‌ ಪದವೀಧರರಾಗಿದ್ದು, 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. 

ಮತದಾರರ ಸಂಖ್ಯೆ
ಮಹಿಳೆಯರು : 872 874 
ಪುರುಷರು : 8,53,829  
ಒಟ್ಟು- 17 , 26 , 703 

2019ರ ಫಲಿತಾಂಶ: ಎಸ್‌.ಮುನಿಸ್ವಾಮಿ (ಬಿಜೆಪಿ)- 7,09,165 ಮತಗಳು, ಕೆ.ಎಚ್‌.ಮುನಿಯಪ್ಪ (ಕಾಂಗ್ರೆಸ್‌)- 4,99,144 ಮತಗಳು

ಕರ್ನಾಟಕಕ್ಕೆ ಬರ ಪರಿಹಾರ, ಸುಪ್ರೀಂ ಕೋರ್ಟ್‌ ಆದೇಶ ಕೇಂದ್ರ ಸರ್ಕಾರಕ್ಕೆ ಮುಖಭಂಗ: ಸಚಿವ ದಿನೇಶ್‌ ಗುಂಡೂರಾವ್‌

ಜಾತಿವಾರು ವಿವರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರೇ ಹೆಚ್ಚಿನ ಸಂಖ್ಯೆಲ್ಲಿದ್ದಾರೆ. ಇಲ್ಲಿ ಪರಿಶಿಷ್ಟ ಬಲಗೈ ಸಮುದಾಯದವರು 3,20,000 ದಷ್ಟಿದ್ದರೆ. ಪರಿಶಿಷ್ಟ ಜಾತಿ(ಎಡಗೈ) ಸಮುದಾಯದವರ ಸಂಖ್ಯೆ 95 000 ರಷ್ಟಿದೆ. ಇನ್ನು ಒಕ್ಕಲಿಗರು 2,95,5000  ಭೋವಿ 90000  ಕೊರಚ/ಕೊರಮ/ಲಂಬಾಣಿ 16 000, ಪರಿಶಿಷ್ಟ ಪಂಗಡ 110000  ಮುಸ್ಲಿಮರು 26 0000 , ಕ್ರಿಶ್ಚಿಯನ್: 40 000  ಮತ್ತು ಕುರುಬ ಮತದಾರರು 1,20  ಲಕ್ಷದಷ್ಟಿದ್ದಾರೆ.

Latest Videos
Follow Us:
Download App:
  • android
  • ios