ದೇವೇಗೌಡರಿಗಿಂತ ಎಚ್‌.ಡಿ.ಕುಮಾರಸ್ವಾಮಿ ದೊಡ್ಡವರಾ?: ಸಚಿವ ಚಲುವರಾಯಸ್ವಾಮಿ

ತಾವು ಸಂಸದನಾದರೆ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯೇ ಹಾಸ್ಯಾಸ್ಪದ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. 
 

Lok Sabha Elections 2024 Minister N Cheluvarayaswamy Slams On HD Kumaraswamy At Mandya gvd

ಮಂಡ್ಯ (ಏ.18): ನಾನು ಸಂಸದನಾದರೆ ಕಾವೇರಿ ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯೇ ಹಾಸ್ಯಾಸ್ಪದವಾಗಿದೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು. ನಗರದ ಮಂಡ್ಯ ವಿವಿ ಆವರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶದಲ್ಲಿ ಮಾತನಾಡಿ, ದೇವೇಗೌಡರು ಪ್ರಧಾನಮಂತ್ರಿಯಾಗಿದ್ದರು. ಅಲ್ಲಿಂದ ಇಲ್ಲಿವರೆಗೂ ಅವರಿಂದಲೇ ಸಮಸ್ಯೆ ಬಗೆಹರಿಸಲಾಗಿಲ್ಲ. ದೇವೇಗೌಡರಿಗಿಂತ ಕುಮಾರಸ್ವಾಮಿ ದೊಡ್ಡವರಾಗಲು ಸಾಧ್ಯವೇ. ಸುಳ್ಳು ಹೇಳಿದರೂ ಜನರು ನಂಬುವಂತಿರಬೇಕು ಎಂದು ಕುಹಕವಾಡಿದರು.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಜಿಲ್ಲೆಯನ್ನೇ ಅಭಿವೃದ್ಧಿ ಮಾಡದವರು ಈಗ ಲೋಕಸಭಾ ಸದಸ್ಯರಾಗಿ ಏನು ಮಾಡಲು ಸಾಧ್ಯ. ಕಾವೇರಿ ಸಮಸ್ಯೆ ಬಗೆಹರಿಸದೇ ಇದ್ದರೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದಿದ್ದರು. ಪಕ್ಷ ಅಧಿಕಾರಕ್ಕೆ ಬರಲೂ ಇಲ್ಲ. ಇವರು ವಿಸರ್ಜನೆ ಮಾಡಲೂ ಇಲ್ಲ. ಮೊದಲು ನುಡಿದಂತೆ ನಡೆದುಕೊಳ್ಳುವಂತೆ ಯಾರಾದರೂ ಅವರಿಗೆ ಹೇಳಬೇಕಿದೆ. ನೀವು ಹೇಳಿದ್ದನ್ನೆಲ್ಲಾ ಕೇಳುವುದಕ್ಕೆ ಜನರು ದಡ್ಡರೇನಲ್ಲ. ಜನ ನಿಮ್ಮ ಮಾತನ್ನ ಕೇಳುವವರಾಗಿದ್ದರೆ ನಮಗೆ 136 ಸ್ಥಾನ ಬರುತ್ತಿರಲಿಲ್ಲ ಎಂದರು.

ನಿಮ್ಮ ಕರ್ಮ ಭೂಮಿ ಯಾವುದಾದರೂ ಒಂದು ಕ್ಷೇತ್ರವನ್ನು ಹೇಳಿ ಸ್ವಾಮಿ ಎಂದು ಎಚ್‌ಡಿಕೆ ಕಾಲೆಳೆದ ಚುಲುವರಾಯಸ್ವಾಮಿ, ಕುಮಾರಸ್ವಾಮಿ ಈಗ ಮಂಡ್ಯ ನನ್ನ ಕರ್ಮ ಭೂಮಿ ಅಂತ ಹೇಳುತ್ತಿದ್ದಾರೆ. ಸಾತನೂರು ಆಯ್ತು , ಕನಕಪುರ ಆಯ್ತು, ರಾಮನಗರ, ಚನ್ನಪಟ್ಟಣ ಆಯ್ತು.... ಈಗ ಮಂಡ್ಯ ಕರ್ಮಭೂಮಿ ಎನ್ನುತ್ತಿದ್ದಾರೆ. ಯಾವುದಾದರೂ ಒಂದನ್ನ ಕರ್ಮಭೂಮಿ ಮಾಡಿಕೊಳ್ಳಬೇಕು. ಅಗ ಅದಕ್ಕೊಂದು ‌ಅರ್ಥ ಇರುತ್ತೆ. ಇಲ್ಲವೇ, ಕರ್ನಾಟಕ ನನ್ನ ಕರ್ಮಭೂಮಿ ಹೇಳಿಬಿಡಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ತೆಗಳುವುದೇ ಮೋದಿ ಸಾಧನೆ, ಅವರು ಸುಳ್ಳಿನ ಸರದಾರ: ಮಲ್ಲಿಕಾರ್ಜುನ ಖರ್ಗೆ

ನನ್ನನ್ನ ಸೋಲಿಸಲು ರಾಹುಲ್ ಗಾಂಧಿ ಕರೆಸಿದ್ದಾರೆ ಎಂದಿದ್ದಾರೆ. ನಾವು ರಾಹುಲ್ ಗಾಂಧಿ ಕರೆತರುತ್ತೀವೋ. ಬೇರೆಯವರನ್ನ ಕರೆತರುತ್ತೀವೋ ಅದು ನಮಗೆ ಬಿಟ್ಟ ವಿಚಾರ. ಹಾಗಾದರೆ ಇವರು ಮೋದಿ ಕರೆಸಿ ಪ್ರಚಾರ ಮಾಡಿಸಿದ್ದು ಯಾಕೆ?, ಮೋದಿ ಪಕ್ಕ ದೇವೆಗೌಡರನ್ನ ಕೂರಿಸಿ ಭಾಷಣ ಮಾಡಿಸಿದ್ದು ಯಾಕೆ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

Latest Videos
Follow Us:
Download App:
  • android
  • ios