‘ಮೋದಿ ಮೋದಿ’ ಎನ್ನುತ್ತಿದ್ದ ಯುವಕರಿಗೆ ನಾಮ: ಸಿಎಂ ಸಿದ್ದರಾಮಯ್ಯ
‘ಮೋದಿ... ಮೋದಿ...’ ಎಂದು ಕೂಗುತ್ತಿದ್ದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಪತಿ ನಾಮ ಹಾಕಿದರು. ಅಚ್ಛೇದಿನ್ ಬರುತ್ತದೆ ಅಂತಾ ಹೇಳಿದ್ರು, ಅಚ್ಛೇದಿನ್ ಬಂದಿದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಶಿವಮೊಗ್ಗ (ಮೇ.03): ‘ಮೋದಿ... ಮೋದಿ...’ ಎಂದು ಕೂಗುತ್ತಿದ್ದ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಪತಿ ನಾಮ ಹಾಕಿದರು. ಅಚ್ಛೇದಿನ್ ಬರುತ್ತದೆ ಅಂತಾ ಹೇಳಿದ್ರು, ಅಚ್ಛೇದಿನ್ ಬಂದಿದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕಾಂಗ್ರೆಸ್‌ನ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಪರ ಮತಯಾಚಿಸಿ ಮಾತನಾಡಿದ ಅವರು, ಕೆಲಸ ಕೊಡಿ ಎಂದರೇ ಮೋದಿ ಪಕೋಡಾ ಮಾರಿ ಎಂದರು.
ಇವರು ಬಂದ ಬಳಿಕ ಅಕ್ಕಿ, ಬೇಳೆ, ಗ್ಯಾಸ್ ಬೆಲೆ ಎಷ್ಟು ಏರಿಕೆಯಾಗಿವೆ ಎಂದು ಜನರಿಗೆ ಗೊತ್ತಿದೆ ಎಂದು ಮಾತಿನಲ್ಲಿ ತಿವಿದರು. ರಾಜ್ಯದಲ್ಲಿ ಸುಮಲತಾ ಸೇರಿ 26 ಮಂದಿ ಬಿಜೆಪಿ ಸಂಸದರಿದ್ದರು. ಆದರೆ, ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಬಾಯಿ ಬಿಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟಿದ್ದೆವು. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯದ ಬರಗಾಲದ ಪ್ರದೇಶಕ್ಕೆ ಭೇಟಿಕೊಟ್ಟು ವರದಿ ಕೊಟ್ಟರೂ ಕೇಂದ್ರ ಸರ್ಕಾರ ಒಂದು ರುಪಾಯಿ ಹಣ ನೀಡಲಿಲ್ಲ. ಏಳು ತಿಂಗಳು ಕಾದರೂ ಒಂದು ರುಪಾಯಿ ಕೊಡಲಿಲ್ಲ.
45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಸುಮಾರು 38000 ಕೋಟಿ ರು.ನಷ್ಟು ನಷ್ಟವಾಯ್ತು. ನಮ್ಮ ಸಂಪನ್ಮೂಲದಿಂದ 34 ಲಕ್ಷ ರೈತರಿಗೆ ಪರಿಹಾರ ನೀಡಿದೆವು ಎಂದರು. ಸಾಲಮನ್ನಾ ಮಾಡಿ ಎಂದು ರೈತರು ಹೋರಾಟ ನಡೆಸಿದರೆ ಮೋದಿ ಜಪ್ಪಯ್ಯ ಅನ್ನಲ್ಲಿಲ್ಲ. ಬಿಜೆಪಿ ಸರ್ಕಾರ ರೈತರ ವಿರೋಧಿ, ಬಡವರ ವಿರೋಧಿ, ಮಹಿಳೆಯರ ವಿರೋಧಿ. ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನ ನೀಡಿದ್ದೆವು. ಅಧಿಕಾರಕ್ಕೆ ಬಂದ ತಕ್ಷಣವೇ ಕೊಟ್ಟ ಮಾತಿನಂತೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಮಾವ ಖರ್ಗೆ ಸೋಲಿಗೆ ಸೇಡು ತೀರಿಸಿಕೊಳ್ತಾರಾ ಅಳಿಯ ರಾಧಾಕೃಷ್ಣ?
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಇದು ಕುವೆಂಪು, ಬಂಗಾರಪ್ಪ ಅವರ ನಾಡು, ಶಾಂತಿಯ ತೋಟ. ಇಲ್ಲಿಂದಲೇ ನಮ್ಮ ಯುವ ನಿಧಿ ಗ್ಯಾರಂಟಿಗೆ ಚಾಲನೆ ನೀಡಿದ್ದೇವೆ. ಈ ಬಾರಿ ರಾಜ್ಯದಲ್ಲಿ ಬಹುತೇಕ ಸ್ಥಾನ ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು. ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ದುನಿಯಾ ವಿಜಯ್, ಚುನಾವಣಾ ಉಸ್ತುವಾರಿ ಅನಿಲ್ ತಡಕಲ್ ಸೇರಿದಂತೆ ಹಲವರಿದ್ದರು.