ಹಿಂದುತ್ವದ ಹೆಸರಿನಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆ: ಸಚಿವ ಸಂತೋಷ್ ಲಾಡ್
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ. ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿಯುವುದು ಗ್ಯಾರಂಟಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ಕುಂದಗೋಳ (ನ.26): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ. ಮತದಾರರು ಈ ಬಾರಿ ಕಾಂಗ್ರೆಸ್ ಕೈ ಹಿಡಿಯುವುದು ಗ್ಯಾರಂಟಿ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಪಟ್ಟಣದ ಶಿವಾನಂದ ಮಠದ ಶಾಲೆಯ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಕುಂದಗೋಳ ಹಾಗೂ ಛಬ್ಬಿ ಬ್ಲಾಕ್ ಸಮಿತಿಯ ಕಾರ್ಯಕರ್ತರ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಹಿಂದುತ್ವದ ವಿಷಯವನ್ನೇ ಬಳಸಿ ಚುನಾವಣೆಗೆ ಹೋಗುತ್ತದೆ. ಅಭಿವೃದ್ಧಿ ವಿಷಯಗಳನ್ನೇ ಮಾತನಾಡುವುದಿಲ್ಲ. ಈ ಲೋಕಸಭೆ ಚುನಾವಣೆಯಲ್ಲೂ ಹಿಂದುತ್ವವನ್ನೇ ಮುಂದೆ ತರುತ್ತಿದ್ದಾರೆ.
ಜನರು ತಕ್ಕ ಪಾಠ ಕಲಿಸುವುದು ಖಚಿತ ಎಂದು ನುಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಹತ್ತಿರವಾಗಿರುವ ಕಾಂಗ್ರೆಸ್ ಈ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವುದು ಗ್ಯಾರಂಟಿ ಎಂದು ನುಡಿದರು. 9 ವರ್ಷದಲ್ಲಿ ನಿರುದ್ಯೋಗ, ಅಶಾಂತಿ ಸೃಷ್ಟಿಸಿದ್ದೇ ಮೋದಿ ಸಾಧನೆ ಎಂದು ಕಿಡಿಕಾರಿದ ಅವರು, ರೈತರ ಸಾಲ ಮನ್ನಾ ಮಾಡಲು ಇವರಿಗೆ ಆಗುವುದಿಲ್ಲ. ಆದರೆ, ಕಾರ್ಪೊರೇಟ್ ಉದ್ದಿಮೆಗಳ ಸಾಲವನ್ನು ಮಾತ್ರ ಮನ್ನಾ ಮಾಡಿದ್ದಾರೆ. ಹೀಗಾಗಿ, ಇದು ಜನ ಸಾಮಾನ್ಯರ ಸರ್ಕಾರವಲ್ಲ, ಉದ್ಯಮಿಗಳ ಸರ್ಕಾರವಾಗಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್: ಎಂ.ಪಿ.ರೇಣುಕಾಚಾರ್ಯ ಟೀಕೆ
ಹಿಂದು- ಮುಸ್ಲಿಮರ ನಡುವೆ ವೈಮನಸ್ಸು ಮೂಡಿಸುವ ಮೂಲಕ ದೇಶ ವಿಭಜನೆಗೆ ಕೈ ಹಾಕುತ್ತಿದ್ದಾರೆ. ದೇಶದ ಇತಿಹಾಸ ತಿರುಚಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅಸ್ಥಿರವಾಗಿಲ್ಲ. ನಮ್ಮ ಗ್ಯಾರಂಟಿ ಯೋಜನೆಯು ಸಂಪೂರ್ಣವಾಗಿ ಮತದಾರರಿಗೆ ಮುಟ್ಟಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬಲ ತಂದಿದ್ದಾರೆ. ಶಕ್ತಿ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಂಥ ಯೋಜನೆಯನ್ನು ಬಿಜೆಪಿ ಟೀಕಿಸುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಧರ್ಮವನ್ನು ಎಳೆತಂದು ಹಿಂದುಗಳಿಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಬರಗಾಲವಿದ್ದರೆ ಮೋದಿ ಕೇಂದ್ರದಲ್ಲಿ ರಾಷ್ಟ್ರೀಯ ಬ್ಯಾಂಕ್ ಸಾಲ ಮನ್ನಾ ಮಾಡದೇ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷವು ದೇಶದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಧರ್ಮ, ಜಾತಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ದೇಶದ ಐಕ್ಯತೆಗೆ ರಾಹುಲ್ ಗಾಂಧಿಯವರು ಮುನ್ನಡಿ ಬರೆಯುತ್ತಿದ್ದಾರೆ. ಅವರ ಕೈ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ್ ಉಪ್ಪಿನ ಮಾತನಾಡಿದರು. ಈ ವೇಳೆ ಮಾಜಿ ಸಚಿವ ಪಿ.ಸಿ. ಸಿದ್ದನಗೌಡರ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಅರವಿಂದಪ್ಪ ಕಟಗಿ, ಅನಿಲಕುಮಾರ ಪಾಟೀಲ, ಗೌಡಪ್ಪಗೌಡ ಪಾಟೀಲ್, ಚಂದ್ರಶೇಖರ್ ಜುಟ್ಟಲ, ಶಿವಾನಂದ ಬೆಂತೂರು, ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಹಲವರಿದ್ದರು.
ಕಾರ್ಯಕರ್ತರ ವಾಗ್ವಾದ: ಕಾಂಗ್ರೆಸ್ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಕಾರ್ಯಕರ್ತರು ಸಚಿವರ ಮುಂದೆ ತಮ್ಮ ಅಳಲು ತೋಡಿಕೊಳ್ಳಲು ಮುಂದಾದ ವೇಳೆ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ವೇಳೆ ಸಚಿವರೇ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ಕೆಲವು ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಎಲ್ಲರೂ ಕೇಳಬೇಕೆಂದು ಪಟ್ಟು ಹಿಡಿದರು. ಸಚಿವರು ವೇದಿಕೆ ಮೇಲೆ ಒಬ್ಬರಿಗೆ ಅವಕಾಶ ನೀಡಿದರು.
ನನ್ನ ಮತ್ತು ಹುಲಿನಾಯ್ಕರ್ ಅವರ ಸ್ನೇಹ ರಾಜಕಾರಣ ಮೀರಿದ್ದು: ಬಿ.ಎಸ್.ಯಡಿಯೂರಪ್ಪ
ಈ ವೇಳೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಯಲ್ಲಪ್ಪ ದಾಸರ ಮಾತನಾಡಿ, ಚುನಾವಣೆ ಬಂದಾಗ ಕಾರ್ಯಕರ್ತರು ನೆನಪಾಗುತ್ತಾರೆ. ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಸಮಸ್ಯೆ ಹಾಗೂ ನೋವನ್ನು ಯಾರು ಆಲಿಸಲಿಲ್ಲ. ಕುಂದಗೋಳ ಮತಕ್ಷೇತ್ರ ನಾಯಕರಿಲ್ಲದೇ ಅನಾಥವಾಗಿದೆ. ನಮ್ಮ ನೋವನ್ನು ಯಾರು ಆಲಿಸುತ್ತಿಲ್ಲ. ಮತಕ್ಷೇತ್ರವನ್ನು ಸಚಿವರು ದತ್ತು ಪಡೆಯಬೇಕು ಎಂದು ಪಟ್ಟು ಹಿಡಿದರು. ಕಾರ್ಯಕರ್ತರ ಅಹವಾಲು ಆಲಿಸಿದ ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯಾಧ್ಯಕ್ಷರು ಹಾಗೂ ನಮ್ಮ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.