ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಹಿಡಿತ ತಪ್ಪಿಸಲೆಂದೇ ನನ್ನ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ಮಹತ್ತರ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಕೆ. ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಶಿವಮೊಗ್ಗ (ಮಾ.24): ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ಮಹತ್ತರ ಬದಲಾವಣೆಯಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡಿದರೆ, ಇನ್ನೊಂದಡೆ ಕಡಿಮೆ ಸ್ಥಾನ ಗಳಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕಾಗಬಹುದು ಎಂದರು. ಬಿಜೆಪಿ ಮೇಲೆ ಯಡಿಯೂರಪ್ಪ ಕುಟುಂಬದ ಹಿಡಿತ ತಪ್ಪಿಸಲೆಂದೇ ನನ್ನ ಸ್ಪರ್ಧೆ ಎಂದ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಸೋಲುತ್ತಾರೆ. ಅಲ್ಲಿಗೆ ಪಕ್ಷದ ಮೇಲಿನ ಯಡಿಯೂರಪ್ಪ ಕುಟುಂಬದ ಹಿಡಿತ ಶೇ.30 ಕಡಿಮೆಯಾಗುತ್ತದೆ. ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಇಳಿದರೆ ಶೇ.60 ಹಿಡಿತ ಕಡಿಮೆಯಾಗಲಿದೆ ಎಂದರು.
ಗೀತಾ ಡಮ್ಮಿ ಕ್ಯಾಂಡಿಡೇಟ್: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೀತಾಗೆ ಟಿಕೆಟ್ ಸಿಗಲು ಯಡಿಯೂರಪ್ಪ-ಸಿದ್ದರಾಮಯ್ಯನವರ ಹೊಂದಾಣಿಕೆ ರಾಜಕಾರಣ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಬಿ.ವೈ.ರಾಘವೇಂದ್ರ ಸುಲಭವಾಗಿ ಗೆಲ್ಲಬೇಕೆಂಬ ಕಾರಣಕ್ಕೆ ದುರ್ಬಲ ಅಭ್ಯರ್ಥಿಯಾಗಿ ಗೀತಾರನ್ನು ಕಣಕ್ಕೆ ಇಳಿಸಲಾಗಿದೆ. ಗೀತಾ ಡಮ್ಮಿ ಕ್ಯಾಂಡಿಡೇಟ್ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ.
ಇದು ನಾನು ಹೇಳುವ ಮಾತಲ್ಲ, ಇದು ಆ ಪಕ್ಷದ ನೊಂದ ಕಾರ್ಯಕರ್ತರ ಮಾತು ಎಂದರು. ಇದರಿಂದ ಕಾಂಗ್ರೆಸ್ ನಲ್ಲಿ ಅನೇಕರಿಗೆ ಅಸಮಾಧಾನ ಉಂಟಾಗಿದೆ. ಇವರೆಲ್ಲರೂ ಇದೀಗ ನನಗೆ ಬೆಂಬಲಕ್ಕೆ ನಿಂತಿದ್ದಾರೆ. ನಾನು ರಾಷ್ಟ್ರಭಕ್ತರ ವೇದಿಕೆಯಿಂದ ಸ್ಪರ್ಧಿಸುತ್ತಿದ್ದು, ಸ್ಪರ್ಧೆ ಘೋಷಣೆ ಮಾಡಿದ ಬಳಿಕ ಎಲ್ಲ ಭಾಗಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲ ವಿಧಾನಸಭಾ ಕ್ಷೇತ್ರಕ್ಕೆ ಹೋಗಿದ್ದೇನೆ, ಈ ವೇಳೆಯಲ್ಲಿ ಸಿಕ್ಕ ಬೆಂಬಲ ಅಭೂತಪೂರ್ವ ನಾನು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ ಎ೦ದರು.
33 ವರ್ಷಗಳ ನಂತರ ಅಪ್ಪನ ಬದಲು ಮಗನ ಸ್ಪರ್ಧೆ: ಸುನಿಲ್ ಬೋಸ್‌ಗೆ ಕಾಂಗ್ರೆಸ್ ಟಿಕೆಟ್
ಅದೃಶ್ಯ ನಾಯಕರ ಬೆಂಬಲ: ನನ್ನ ಜೊತೆಗೆ ಶಿವಮೊಗ್ಗ ನಗರದ ನಗರಪಾಲಿಕೆ ಮಾಜಿ ಸದಸ್ಯರು, ಮಾಜಿ ಮೇಯರ್‌ಗಳು, ಮುಖಂಡರು ಇದ್ದಾರೆ. ಕೆಲವರಿಗೆ ಅನಿವಾರ್ಯವಾಗಿ ಇಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಅವರು ಅದೃಶ್ಯ ನಾಯಕರಾಗಿ ನನ್ನ ಜೊತೆಗಿರುತ್ತಾರೆ ಎಂದರು. ಈಗಲೂ ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಬಿಜೆಪಿ ನನ್ನ ತಾಯಿ. ಕೆಲವರು ತಾಯಿಯಿಂದ ನನ್ನ ಬೇರ್ಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದರು. ಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಸುವರ್ಣ ಶಂಕರ್, ಏಳು ಮಲೈ ಬಾಬು ಮತ್ತು ಶಿವಕುಮಾರ್, ಮಾಜಿ ಉಪ ಮೇಯರ್‌ಗಳಾದ ಶಂಕರ್‌ಗನ್ನಿ, ಲಕ್ಷ್ಮೀನಾ, ಮಾಜಿ ಸದಸ್ಯರಾದ ವಿಶ್ವಾಸ್, ಪ್ರಭು ಮತ್ತಿತರರಿದ್ದರು.