Asianet Suvarna News Asianet Suvarna News

Interview: ವರ್ಷದ ಹಿಂದೆ ಸೋತಿರಬಹುದು, ಆದರೆ ಈ ಚುನಾವಣೆ ಗೆಲ್ಲುತ್ತೇನೆ -ಶ್ರೀರಾಮುಲು

ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತೆ. ಒಂದು ವೇಳೆ ಗೆದ್ದಿದ್ದರೆ ಉಪ ಮುಖ್ಯಮಂತ್ರಿ ಆಗುತ್ತಿದ್ದೆ. ಆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಸಂಖ್ಯೆಯಲ್ಲಿ ಗೆಲುವಾಗಲಿಲ್ಲ. 104 ಸ್ಥಾನಗಳಷ್ಟೇ ಬಂತು. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತ್ತು. ಹೀಗಾಗಿ ನಾನು ಅಲ್ಲಿ ಸ್ಪರ್ಧಿಸಿದೆ.

Lok sabha election 2024 in Karnataka bellary bjp candidate Sriramulu Interview rav
Author
First Published May 3, 2024, 6:27 AM IST

ಕೆ.ಎಂ.ಮಂಜುನಾಥ್

ಬಳ್ಳಾರಿ (ಮೇ.3) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎದುರು ಪರಾಭವಗೊಂಡ ಬಳಿಕ ಕಂಗಾಲಾದ ಬಿಜೆಪಿಯ ಎಸ್ಟಿ ಸಮುದಾಯದ ನಾಯಕ ಬಿ.ಶ್ರೀರಾಮುಲು, ಇದೀಗ ಲೋಕಸಭಾ ಚುನಾವಣೆ ಮೂಲಕ ಮತ್ತೆ ರಾಜಕೀಯ ಮುನ್ನಲೆಗೆ ಬರುವ ವಿಶ್ವಾಸದಲ್ಲಿದ್ದಾರೆ. ಮೂರೂವರೆ ದಶಕದ ರಾಜಕೀಯದಲ್ಲಿ ಸೋಲಿಗಿಂತ ಗೆಲುವನ್ನೇ ಹೆಚ್ಚಾಗಿ ಸವಿದ ಶ್ರೀರಾಮುಲುಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಮತ್ತೆ ಸೋಲಾದರೆ ರಾಜಕೀಯವಾಗಿ ಮೂಲೆಗುಂಪಾಗುವ ಆತಂಕವೂ ಇದೆ. ಮೋದಿ ಅಲೆ ಹಾಗೂ ಜನಾರ್ದನ ರೆಡ್ಡಿ ಪಕ್ಷಕ್ಕೆ ಮರಳಿ ಬಂದಿದ್ದರಿಂದ ಆಗಿರುವ ರಾಜಕೀಯ ಲಾಭ ಕುರಿತು ‘ಕನ್ನಡಪ್ರಭ’ ಎದುರು ಮನಬಿಚ್ಚಿ ಹೇಳಿಕೊಂಡಿದ್ದಾರೆ.

ತೀವ್ರ ಬಿಸಿಲಿನ ತಾಪವಿದೆ. ಪ್ರಚಾರ ಹೇಗಿದೆ?

- ಬಿಸಿಲು ಲೆಕ್ಕಿಸದೆ ಎರಡು ತಿಂಗಳಿನಿಂದ ಓಡಾಡುತ್ತಿರುವೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು. ದೇಶದ ಭದ್ರತೆ ವಿಚಾರದಲ್ಲಿ ಮೋದಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಹೀಗಾಗಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುತ್ತೇವೆ. ಮೋದಿ ಕೈ ಬಲಪಡಿಸುತ್ತೇವೆ ಎಂದು ಜನರೇ ಹೇಳುತ್ತಿದ್ದಾರೆ.

ಬಿಎಸ್ಸಾರ್ ಪಕ್ಷದಿಂದ ಮಾಡಿದ ಸ್ಪರ್ಧೆಗೂ, ಬಿಜೆಪಿ ಅಭ್ಯರ್ಥಿಯಾಗಿ ಮಾಡುವ ಸ್ಪರ್ಧೆಗೂ ಏನು ವ್ಯತ್ಯಾಸ?

-ನಾವೇ ಸ್ಥಾಪಿಸಿದ ಸ್ವಂತ ಪಕ್ಷದಿಂದ ಸ್ಪರ್ಧಿಸುವುದಕ್ಕೂ, ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೂ ವ್ಯತ್ಯಾಸವಿದೆ. ಸ್ವಂತ ಪಕ್ಷದಿಂದ ಸ್ಪರ್ಧಿಸುವಾಗ ಪ್ರತಿಯೊಂದನ್ನೂ ನಾವೇ ನೋಡಿಕೊಳ್ಳಬೇಕಿತ್ತು. ಒತ್ತಡ ವಿಪರೀತವಾಗಿರುತ್ತಿತ್ತು. ಆದರೆ, ಮೋದಿ ಅವರಂತಹ ಮಹಾನ್ ವ್ಯಕ್ತಿಯ ನೇತೃತ್ವದ ಬಿಜೆಪಿಯ ಅಭ್ಯರ್ಥಿಯಾಗಿರುವುದರಿಂದ ಸಾವಿರಾರು ಕಾರ್ಯಕರ್ತರು, ಲಕ್ಷಾಂತರ ಅಭಿಮಾನಿಗಳ ಪಡೆಯೇ ನಮ್ಮೊಂದಿಗಿದ್ದು ಗೆಲುವಿಗಾಗಿ ಶ್ರಮಿಸುತ್ತಿದೆ. 

Interview: ಜಯ ನಮ್ಮದೇ ದಾಖಲೆ ಮತದ ಅಂತರದಿಂದ ಗೆಲ್ಲುವೆ: ವಿಶ್ವೇಶ್ವರ ಹೆಗ್ಡೆ ಕಾಗೇರಿ

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಇದೀಗ ಲೋಕಸಭೆಗೆ ಸ್ಪರ್ಧಿಸಿದ್ದೀರಿ. ಇದು ಹೈಕಮಾಂಡ್ ನಿರ್ಧಾರವಾ ಅಥವಾ ನಿಮ್ಮ ನಿರ್ಧಾರವಾ?

- ಪಕ್ಷದ ತೀರ್ಮಾನ. ಸ್ಪರ್ಧಿಸುವಂತೆ ಪಕ್ಷ ಸೂಚನೆ ನೀಡಿದ ಬಳಿಕ ನಾನು ಅಖಾಡಕ್ಕೆ ಇಳಿದಿರುವೆ. ಪಕ್ಷದಲ್ಲಿ 35 ವರ್ಷಗಳಿಂದ ಸೇವೆ ಮಾಡಿರುವೆ. 8 ಚುನಾವಣೆ ಎದುರಿಸಿರುವೆ, ಎರಡು ಬಾರಿ ಸೋತು, ಆರು ಚುನಾವಣೆಯಲ್ಲಿ ಗೆದ್ದಿರುವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತರೂ ಪಕ್ಷಕ್ಕೆ ನಾನು ಮಾಡಿದ ಸೇವೆ ರಾಜಕಾರಣದಲ್ಲಿ ಕಳೆದು ಹೋಗಬಾರದು ಎಂಬ ಕಾರಣಕ್ಕಾಗಿ ಪಕ್ಷ ನನ್ನ ಗುರುತಿಸಿ, ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ವಿಧಾನಸಭಾ ಚುನಾವಣೆಯ ನಿಮ್ಮ ಸೋಲಿಗೆ ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ಕಾರಣ ಎಂದಿದ್ದೀರಿ. ಈಗಲೂ ಕಾಂಗ್ರೆಸ್ಸಿನ ಗ್ಯಾರಂಟಿ ಕಠಿಣ ಸವಾಲು ಆಗಬಹುದಲ್ಲವೇ?

- ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ನನಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೇ ಭಾವಿಸಿದ್ದೇನೆ. ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಸುರಕ್ಷತೆ, ಭದ್ರತೆ ಹಾಗೂ ಸಮಗ್ರತೆಯ ಬಗ್ಗೆ ಜನರು ಯೋಚಿಸುತ್ತಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ಮೋದಿಯವರು ದೇಶದ ಸುರಕ್ಷತೆ ದೃಷ್ಟಿಯಿಂದ ಕೈಗೊಂಡ ಕ್ರಮಗಳ ಕುರಿತು ಜನರಿಗೆ ತಿಳಿದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕು. ನರೇಂದ್ರ ಮೋದಿ ಪ್ರಧಾನಿಯಾಗಿರಬೇಕು ಎಂದು ಜನ ಬಯಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಅತಿಯಾಗಿ ಟೀಕಿಸಿದ್ದು ಕುರುಬ ಸಮಾಜದ ಅಸಮಾಧಾನಕ್ಕೆ ಕಾರಣವಾಯ್ತು ಎನ್ನುವ ಮಾತಿದೆಯಲ್ಲ?

- ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತೆ. ಒಂದು ವೇಳೆ ಗೆದ್ದಿದ್ದರೆ ಉಪ ಮುಖ್ಯಮಂತ್ರಿ ಆಗುತ್ತಿದ್ದೆ. ಆ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಸಂಖ್ಯೆಯಲ್ಲಿ ಗೆಲುವಾಗಲಿಲ್ಲ. 104 ಸ್ಥಾನಗಳಷ್ಟೇ ಬಂತು. ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವಂತೆ ಪಕ್ಷ ಸೂಚಿಸಿತ್ತು. ಹೀಗಾಗಿ ನಾನು ಅಲ್ಲಿ ಸ್ಪರ್ಧಿಸಿದೆ. ಈ ಬಗ್ಗೆ ಕುರುಬರಿಗೆ ನನ್ನ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಬಳ್ಳಾರಿ ಕ್ಷೇತ್ರದ ಕುರುಬರು ನನ್ನ ಜೊತೆಗಿದ್ದಾರೆ.

ನೀವು ಶಾಸಕ, ಸಚಿವ, ಸಂಸದರಾಗಿ ಕೆಲಸ ಮಾಡಿದವರು. ಆದರೆ, ಈ ಚುನಾವಣೆಯಲ್ಲಿ ನರೇಂದ್ರ ಮೋದಿ ವರ್ಚಸ್ಸನ್ನು ಮಾತ್ರ ನಂಬಿದಂತಿದೆ?

- ಹಾಗೇನಿಲ್ಲ, ಶಾಸಕ ಹಾಗೂ ಸಚಿವನಾಗಿ ಮಾಡಿರುವ ಕೆಲಸವನ್ನು ಜಿಲ್ಲೆಯ ಜನರು ಗಮನಿಸಿದ್ದಾರೆ. ನಾನು ಮೊದಲಿನಿಂದ ಅಭಿವೃದ್ಧಿ ಬಗ್ಗೆ ಚಿಂತಿಸುವವ. ನನ್ನ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರವಷ್ಟೇ ಅಲ್ಲ; ಇಡೀ ದೇಶದಲ್ಲೇ ಮೋದಿ ಗುಣಗಾನ ಕೇಳಿ ಬರುತ್ತಿದೆ. ಮೋದಿ ಮತ್ತೆ ಪ್ರಧಾನಿಯಾಗಬೇಕು. ಈ ದೇಶ ಮತ್ತಷ್ಟು ಸುರಕ್ಷತೆಯಾಗಬೇಕು. ಅಭಿವೃದ್ಧಿಯಲ್ಲಿ ಮತ್ತಷ್ಟು ಮುಂಚೂಣಿಗೆ ಬರಬೇಕು ಎಂದು ದೇಶದ ಜನರು ಆಶಿಸುತ್ತಿದ್ದಾರೆ.

ರಾಮುಲು ಈ ಜಿಲ್ಲೆಗೆ ನೀಡಿದ ಕೊಡುಗೆ ಏನು? ಬಿಜೆಪಿ ನೀಡಿದ ಕೊಡುಗೆ ಏನು ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ?

- ಕಾಂಗ್ರೆಸ್‌ನವರು ಚುನಾವಣೆಗಾಗಿ ಆರೋಪಿಸುತ್ತಾರಷ್ಟೇ. ಕೇಂದ್ರದಲ್ಲಿರುವ ನಮ್ಮ ಪಕ್ಷ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದೆ. ಹೊಸಪೇಟೆಯಿಂದ ಚಿತ್ರದುರ್ಗ ಹೈವೇ ರಸ್ತೆ ಈ ಮೊದಲು ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರೇ ಹೇಳಲಿ. ಹೊಸ ರೈಲು ಪ್ರಾರಂಭವಾಗಿವೆ. ರೈಲ್ವೆ ನಿಲ್ದಾಣಗಳು ಅಭಿವೃದ್ಧಿಗೊಂಡಿವೆ. ಇವು ಕಾಂಗ್ರೆಸ್ ನಾಯಕರ ಕಣ್ಣಿಗೆ ಕಾಣುವುದಿಲ್ಲವೇ?

ಈ ಚುನಾವಣೆ ವೇಳೆ ನಿಮ್ಮ ಆಪ್ತಮಿತ್ರ ಜನಾರ್ದನ ರೆಡ್ಡಿ ಪಕ್ಷಕ್ಕೆ ವಾಪಸ್ಸಾಗಿರುವುದು ಆನೆ ಬಲ ಬಂದಂತಿದೆ?

- ಜನಾರ್ದನ ರೆಡ್ಡಿ ಆಗಮನದಿಂದ ಖಂಡಿತ ನನಗೆ ಶಕ್ತಿ ಬಂದಿದೆ. ರೆಡ್ಡಿ ನಾನಾ ಕಾರಣಗಳಿಂದ ಬಳ್ಳಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ನನ್ನ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ಈ ಹಿಂದಿನಿಂದಲೂ ನನ್ನ ಶ್ರೇಯಸ್ಸು ಬಯಸಿದವರು. ಬಳ್ಳಾರಿಗೆ ಬರಲು ಸಾಧ್ಯವಾಗದ ಕಾರಣ ರೆಡ್ಡಿ ಪತ್ನಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ತಾವು ಉಪಮುಖ್ಯಮಂತ್ರಿ ಆಗುತ್ತೀರಿ ಎನ್ನುವ ಚರ್ಚೆಯಿತ್ತು. ಆದರೆ, ಆಗಲಿಲ್ಲ. ತಾವು ಸೋಲುಂಡಾಗ ಬಿಜೆಪಿ ಪರಿಷತ್ತಿಗೂ ತಮ್ಮನ್ನು ನೇಮಕ ಮಾಡಲಿಲ್ಲವಲ್ಲ?

- ವಿಧಾನಸಭಾ ಚುನಾವಣೆಯಲ್ಲಿ ಸೋತು ಒಂದೇ ವರ್ಷದಲ್ಲಿ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಎಂದೂ ಚುನಾವಣೆಯಿಲ್ಲದೇ ನೇರವಾಗಿ ಆಯ್ಕೆಗೊಂಡಿಲ್ಲ. 35 ವರ್ಷಗಳ ಅವಧಿಯ ರಾಜಕೀಯದಲ್ಲಿ ಜನರಿಂದ ಮತ ಪಡೆದೇ ಆಯ್ಕೆಗೊಂಡಿದ್ದೇನೆ. ಆದರೆ ವಿಧಾನಪರಿಷತ್ ಮತ್ತಿತರ ಸ್ಥಾನಗಳಿಗೆ ನೇಮಕವಾಗಿಲ್ಲ. ಅದು ನನಗಿಷ್ಟವೂ ಇಲ್ಲ. ನಾನು ಜನರ ಮಧ್ಯೆ ಇರಬೇಕು. ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಜನರಿಂದಲೇ ಆಯ್ಕೆಗೊಳ್ಳಬೇಕು. ಇದುವೇ ನನಗಿಷ್ಟ.

ಕಾಂಗ್ರೆಸ್‌ನಲ್ಲಿ ಸತೀಶ ಜಾರಕಿಹೊಳಿ, ಬಿಜೆಪಿಯಲ್ಲಿ ಶ್ರೀರಾಮುಲು ಪ್ರಬಲ ಎಸ್ಟಿ ನಾಯಕರು ಎನ್ನುವ ಮಾತಿದೆ. ಆದರೆ, ಶ್ರೀರಾಮುಲು ವರ್ಚಸ್ಸು ಕುಸಿಯುತ್ತಿದಂತೆ ಕಾಣುತ್ತಿದೆ?

- ನನ್ನ ವರ್ಚಸ್ಸು ಕಡಿಮೆಯಾಗಿದೆಯೋ ಅಥವಾ ಹೆಚ್ಚಾಗಿದೆಯೋ ನನಗೆ ಗೊತ್ತಿಲ್ಲ. ಆದರೆ, ಕಳೆದ ಒಂದೂವರೆ ವರ್ಷದಿಂದ ನೋವು ಪಟ್ಟಿದ್ದೇನೆ. ಚುನಾವಣೆಯಲ್ಲಿ ಸೋತಿದ್ದೇಕೆ, ನಾನು ಮಾಡಿದ ತಪ್ಪೇನು ಎಂದು ಅವಲೋಕನ ಮಾಡಿಕೊಂಡಿದ್ದೇನೆ. ಪಶ್ಚಾತ್ತಾಪವನ್ನೂ ಪಟ್ಟಿದ್ದೇನೆ. ಎಲ್ಲಿ ತಪ್ಪು ಮಾಡಿದ್ದೇನೋ ಅಲ್ಲಿ ಸರಿಮಾಡಿಕೊಳ್ಳುವ ಕೆಲಸವನ್ನೂ ಮಾಡಿದ್ದೇನೆ. ನಮಗೆ ಗೊತ್ತಿಲ್ಲದೆ ಅನೇಕ ಬಾರಿ ನಮ್ಮಿಂದ ತಪ್ಪಾಗಿರಬಹುದು. ಅದನ್ನು ತಿದ್ದಿಕೊಂಡರೆ ಮಾತ್ರ ಜನ ನಮ್ಮನ್ನು ಗುರುತಿಸುತ್ತಾರೆ. ಮತ್ತೆ ಮತ್ತೆ ಆಶೀರ್ವದಿಸುತ್ತಾರೆ.

Interview: ನನ್ನ ಮಾವ ಖರ್ಗೆ ಸಾಧನೆಯೇ ನನಗೆ ಶ್ರೀರಕ್ಷೆ - ರಾಧಾಕೃಷ್ಣ ದೊಡ್ಮನಿ

ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಬಿಜೆಪಿ-ಕಾಂಗ್ರೆಸ್ ನಡುವೆ ಯುದ್ಧವೇ ನಡೆದಿದೆ. ವಾಸ್ತವದಲ್ಲಿ ಬಳ್ಳಾರಿಗೆ ಏನೇನಾಗಬೇಕಿದೆ? ತಾವೇನು ಮಾಡಬಲ್ಲಿರಿ?

- ಬಳ್ಳಾರಿ ಅಭಿವೃದ್ಧಿ ನೆಲೆಯಲ್ಲಿ ಸಾಕಷ್ಟು ಕನಸು ಹೊತ್ತಿದ್ದೇನೆ. ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ ರಸ್ತೆ ಸಂಪರ್ಕ ಜಾಲ ವಿಸ್ತರಿಸಬೇಕು. ಜಿಲ್ಲೆಗೆ ವಂದೇ ಭಾರತ್‌ ರೈಲು ತರಬೇಕು. ಬುಲೆಟ್ ಟ್ರೈನ್ ತರಬೇಕು. ಈ ಭಾಗದಲ್ಲಿ ರೈಲ್ವೆ ಯೋಜನೆಗಳು ಮತ್ತಷ್ಟು ಹೆಚ್ಚಾಗಬೇಕು. ಬಳ್ಳಾರಿಯ ಜೀನ್ಸ್‌ ಗೆ ಉತ್ತೇಜನ ನೀಡಬೇಕು. ಅಂತರಾಷ್ಟ್ರೀಯ ಮಟ್ಟದಲ್ಲೂ ಬಳ್ಳಾರಿ ಜೀನ್ಸ್ ಗೆ ಮಾರುಕಟ್ಟೆ ಸೃಷ್ಟಿಸಬೇಕು. ಒಣ ಮೆಣಸಿನಕಾಯಿ ರಫ್ತಿಗೆ ಬೇಕಾದ ಪೂರಕ ಯೋಜನೆ ಜೊತೆಗೆ ಕೇಂದ್ರದ ಮಹತ್ವದ ಎಲ್ಲ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದುಕೊಂಡಿರುವೆ.

Latest Videos
Follow Us:
Download App:
  • android
  • ios