ಬಿಜೆಪಿ ಭದ್ರಕೋಟೆ ಗಾಂಧೀನಗರದಲ್ಲಿ ಅಮಿತ್ ಶಾ ವಿರುದ್ಧ ಸೋನಲ್ ಪಟೇಲ್ ಸೆಡ್ಡು!

1989ರಿಂದಲೂ ಸತತವಾಗಿ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವ ಗುಜರಾತ್‌ ರಾಜಧಾನಿ ಗಾಂಧಿನಗರ ಕ್ಷೇತ್ರವನ್ನು ಮತ್ತೊಮ್ಮೆ ಗದ್ದುಗೆಗೆ ಪಡೆಯಲು ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಸಜ್ಜಾಗಿದ್ದಾರೆ. ಇವರಿಗೆ ಪ್ರತಿಸ್ಪರ್ಧೆ ಒಡ್ಡಲು ಕಾಂಗ್ರೆಸ್‌ ಗುಜರಾತ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆಯಾಗಿದ್ದ ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೋನಲ್‌ ಪಟೇಲ್‌ ಅವರನ್ನು ಕಣಕ್ಕಿಳಿಸಿದೆ.

Lok sabha election 2024 HM Amit Shah VS Sonal Patel in gandhinagar Lok sabha constituency gujarath rav

1989ರಿಂದಲೂ ಸತತವಾಗಿ ತನ್ನ ತೆಕ್ಕೆಯಲ್ಲಿ ಇರಿಸಿಕೊಂಡಿರುವ ಗುಜರಾತ್‌ ರಾಜಧಾನಿ ಗಾಂಧಿನಗರ ಕ್ಷೇತ್ರವನ್ನು ಮತ್ತೊಮ್ಮೆ ಗದ್ದುಗೆಗೆ ಪಡೆಯಲು ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಸಜ್ಜಾಗಿದ್ದಾರೆ. ಇವರಿಗೆ ಪ್ರತಿಸ್ಪರ್ಧೆ ಒಡ್ಡಲು ಕಾಂಗ್ರೆಸ್‌ ಗುಜರಾತ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷೆಯಾಗಿದ್ದ ಹಾಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೋನಲ್‌ ಪಟೇಲ್‌ ಅವರನ್ನು ಕಣಕ್ಕಿಳಿಸಿದೆ. ಆದರೂ ಕ್ಷೇತ್ರದಲ್ಲಿ ಮಾಡಿರುವ ಅಗಾಧ ಅಭಿವೃದ್ಧಿ ಕೆಲಸಗಳು ಹಾಗೂ ನರೇಂದ್ರ ಮೋದಿ ಅಲೆಯ ಪ್ರಭಾವದಿಂದ ಅಮಿತ್‌ ಶಾ ಕ್ಷೇತ್ರದಲ್ಲಿ ಸುಲಭ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಬಿಜೆಪಿ ವಿಶ್ವಾಸ ಹೇಗಿದೆ?

ಬಿಜೆಪಿಯ ನಿರ್ಮಾತೃಗಳಾದ ಎಲ್‌.ಕೆ ಅಡ್ವಾಣಿ, ಅಟಲ್‌ ಬಿಹಾರಿ ವಾಜಪೇಯಿ ಮುಂತಾದ ಮಹನೀಯರು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಈ ಬಾರಿ ಬಿಜೆಪಿಯ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ಈ ಬಾರಿ ಪ್ರತಿನಿಧಿಸುತ್ತಿದ್ದು, ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದ್ದಾರೆ. 1989ರಿಂದ ಒಮ್ಮೆಯೂ ಸೋಲದ ಬಿಜೆಪಿ ಕ್ಷೇತ್ರದಲ್ಲಿ ಈ ಬಾರಿ ಮತ್ತೊಮ್ಮೆ ಗೆಲ್ಲುವ ವಿಶ್ವಾಸದಲ್ಲಿದೆ. ಅದೇ ಹುಮ್ಮಸ್ಸಿನಲ್ಲಿ ಅಮಿತ್‌ ಶಾ ಕೇವಲ ನಾಮಪತ್ರ ಸಲ್ಲಿಸಲು ಕ್ಷೇತ್ರಕ್ಕೆ ಬಂದು ರೋಡ್‌ಶೋ ನಡೆಸಿ ಉಳಿದ ದಿನಗಳಲ್ಲಿ ದೇಶಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ಆದಾಗ್ಯೂ ಪಕ್ಷದ ಕಾರ್ಯಕರ್ತರು ಅವರ ಪರವಾಗಿ ಕ್ಷೇತ್ರದಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕ್ಷೇತ್ರದಲ್ಲಿ ಮತದಾರರಾಗಿರುವುದು ಅಲ್ಲಿನ ಮತದಾರರಲ್ಲಿ ಬಿಜೆಪಿಯ ಮೇಲೆ ಪ್ರಭಾವವನ್ನು ಬೀರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಕ್ಷೇತ್ರದಲ್ಲಿ ಅಮಿತ್‌ ಶಾ ಕಳೆದ ಐದು ವರ್ಷಗಳಲ್ಲಿ ರಸ್ತೆ, ರೈಲು ಮೇಲುಸೇತುವೆ, ಮೆಟ್ರೋ ವಿಸ್ತರಣೆ ಸೇರಿದಂತೆ ಅಗಾಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ವರವಾಗಿ ಪರಿಣಮಿಸಲಿದೆ.

ಓಡು ರಾಹುಲ್‌ ಓಡು : ಬಿಜೆಪಿ ಮುಖಂಡರಿಂದ ವ್ಯಂಗ್ಯ

ಮತಪ್ರಮಾಣ ಹೆಚ್ಚಳಕ್ಕೆ ಕಾಂಗ್ರೆಸ್‌ ಹರಸಾಹಸ:

ಬಿಜೆಪಿ ಬಿಟ್ಟರೆ ಉಳಿದ ಪಕ್ಷಗಳು ಕ್ಷೇತ್ರದಲ್ಲಿ ನೆಪಮಾತ್ರಕ್ಕೆ ಸೀಮಿತವಾಗಿವೆ. ಆದಾಗ್ಯೂ ಕಾಂಗ್ರೆಸ್‌ ಪಕ್ಷವು ಚುನಾವಣೆಯಿಂದ ಚುನಾವಣೆಗೆ ತನ್ನ ಮತಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ಅದರಂತೆ ಅಮಿತ್‌ ಶಾ ಅವರಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಈ ಬಾರಿ ಮಹಿಳಾ ಅಭ್ಯರ್ಥಿ ಸೋನಲ್‌ ಪಟೇಲ್‌ ಅವರಿಗೆ ಮಣೆ ಹಾಕಿದೆ. ಅವರು 2012-2018ರವರೆಗೆ ಗುಜರಾತ್‌ ಮಹಿಳಾ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿದ್ದಾಗ ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲಲು ಬಹಳ ತ್ರಾಸ ಪಡಬೇಕಾಯಿತು ಎನ್ನುವುದನ್ನು ಮರೆಯುವಂತಿಲ್ಲ. ಆ ಚುನಾವಣೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ 99 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ ಕಾಂಗ್ರೆಸ್‌ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅವರು ಪ್ರಸ್ತುತ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದು, ತಮ್ಮ ರಣತಂತ್ರದಿಂದ ಕೇಂದ್ರ ಗೃಹಮಂತ್ರಿಯ ಗೆಲುವಿನ ಅಂತರವನ್ನು ಎಷ್ಟು ಮತಗಳಿಂದ ಕಡಿಮೆ ಮಾಡಲಿದ್ದಾರೆ ಎಂಬುದೇ ಕುತೂಹಲವಾಗಿದೆ.

ಸ್ಪರ್ಧೆ ಹೇಗೆ?

ಅಮಿತ್‌ ಶಾ ರಾಷ್ಟ್ರಮಟ್ಟದಲ್ಲಿ ತಮ್ಮ ಕ್ರಾಂತಿಕಾರಕ ನಿರ್ಧಾರಗಳಿಂದ ಪ್ರಸಿದ್ಧಿ ಗಳಿಸಿದ್ದರೂ ಸ್ಥಳೀಯವಾಗಿ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೂ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜನತೆಗೆ ಮೂಲಸೌಕರ್ಯ ಒದಗಿಸಿರುವುದು ಅವರ ಗೆಲುವಿನ ನಾಗಾಲೋಟಕ್ಕೆ ಅಡ್ಡಿಯಾಗಲಾರದು. ಆದರೆ ಅತಿಯಾದ ಅತ್ಮವಿಶ್ವಾಸದಿಂದ ಚುನಾವಣಾ ಪ್ರಚಾರವನ್ನು ಕ್ಷೇತ್ರದಲ್ಲಿ ಕಡೆಗಣಿಸಿದರೆ ಗೆಲುವಿನ ಅಂತರ ಕಡಿಮೆಯಾಗುವುದಂತೂ ನಿಶ್ಚಿತ. ಕಳೆದ ಬಾರಿ ದಾಖಲೆಯ 5.5 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಅಮಿತ್‌ ಶಾ ಈ ಬಾರಿಯೂ ಅಷ್ಟೇ ಬೃಹತ್‌ ಪ್ರಮಾಣದಿಂದ ಗೆಲುವು ಸಾಧಿಸುವ ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಸೋನಲ್‌ ಯಾವ ಮಟ್ಟದ ಪ್ರತಿಸ್ಪರ್ಧೆ ನೀಡಲಿದ್ದಾರೆ ಎಂಬುದನ್ನು ಅರಿಯಲು ಜೂ.4ರವರೆಗೂ ಕಾಯಬೇಕಿದೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್; ಮೋದಿ ಮೌನಕ್ಕೆ ರಾಹುಲ್‌ಗಾಂಧಿ ಸಿಡಿಮಿಡಿ

ಸ್ಟಾರ್‌ ಕ್ಷೇತ್ರ: ಗಾಂಧಿನಗರ

ರಾಜ್ಯ: ಗುಜರಾತ್‌

  • ವಿಧಾನಸಭಾ ಕ್ಷೇತ್ರಗಳು: 7
  • ಮತದಾನದ ದಿನ: ಮೇ.7
  • ಪ್ರಮುಖ ಅಭ್ಯರ್ಥಿಗಳು
  • ಬಿಜೆಪಿ- ಅಮಿತ್‌ ಶಾ
  • ಕಾಂಗ್ರೆಸ್‌- ಸೋನಲ್ ಪಟೇಲ್‌
  • ಬಿಎಸ್‌ಪಿ- ಮೊಹಮ್ಮದಾನಿಶ್ ದೇಸಾಯಿ

2019ರ ಫಲಿತಾಂಶ:

  • ಗೆಲುವು- ಅಮಿತ್‌ ಶಾ- ಬಿಜೆಪಿ
  • ಸೋಲು- ಚತುರಸಿಂಹ ಚಾವ್ಡಾ- ಕಾಂಗ್ರೆಸ್‌
Latest Videos
Follow Us:
Download App:
  • android
  • ios