Asianet Suvarna News Asianet Suvarna News

ಸಿದ್ದರಾಮಯ್ಯ ಅಹಂಕಾರಕ್ಕೆ ಎಂಪಿ ಚುನಾವಣೇಲಿ ಉತ್ತರ: ಎಚ್‌.ಡಿ.ದೇವೇಗೌಡ

ಜೆಡಿಎಸ್ ಪಕ್ಷದಲ್ಲೆ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. 

Lok Sabha Election 2024 Ex PM HD Devegowda Slams On CM Siddaramaiah gvd
Author
First Published Apr 1, 2024, 11:14 AM IST

ಹಾಸನ (ಏ.01): ಜೆಡಿಎಸ್ ಪಕ್ಷದಲ್ಲೆ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಹಾಸನ ತಾಲೂಕಿನ ಸಾಲಗಾಮೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನಮ್ಮ ಪಕ್ಷದಲ್ಲೇ ಬೆಳೆದು ಈಗ ಅಧಿಕಾರದ ಅಹಂನಿಂದ ಬಾಯಿಗೆ ಬಂದಂತೆ ಮಾತನಾಡುವ ಜತೆಗೆ ಹಾಸನಕ್ಕೆ ಮೂರು ಬಾರಿ ಬಂದು ಪ್ರಜ್ವಲ್ ಸೋಲಿಸಲು ಮುಂದಾಗಿರುವ ಕಾಂಗ್ರೆಸ್ ನಾಯಕರಿಗೆ ಈ ಬಾರಿ ಮುಖಭಂಗ ಮಾಡುವ ಕೆಲಸವನ್ನು ನನ್ನ ಜಿಲ್ಲೆಯ ಜನರು ಮಾಡಬೇಕಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ಕೇಂದ್ರ ಹಣ ನೀಡುತ್ತಿಲ್ಲ ಎಂದು ಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ಧಾವೆ ಹೂಡಿದೆ, ಪ್ರಬಲವಾದ ಪ್ರಧಾನಿ ದೇಶಕ್ಕೆ ಇರಬಾರದು ಎಂಬ ಹೇಳಿಕೆ ನೀಡಿದ್ದಾರೆ. ಪ್ರಬಲವಾದ ಪ್ರಧಾನ ಮಂತ್ರಿ ಇದ್ದರೆ ಇವರು ಕೇಳಿದಂತೆ ಹಣ ನೀಡುವುದಿಲ್ಲ ಎಂದು ಈ ರೀತಿ ಹೇಳಿದ್ದಾರೆ’ ಎಂದು ದೂರಿದರು. ‘ದೇಶದ ಆಡಳಿತ ವ್ಯವಸ್ಥೆಯಲ್ಲಿ ಫೈನಾನ್ಸ್ ಕಮಿಷನ್ ಪ್ರತಿ ರಾಜ್ಯದ ಆರ್ಥಿಕ ಸ್ಥಿತಿ ಗತಿಗಳ ಬಗ್ಗೆ ಪರಿಶೀಲನೆ ನಡೆಸಿ ಆರ್ಥಿಕ ಸಮಸ್ಯೆ ಹೊಂದಿರುವ ಹಣವನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಧಾವೆ ಹೂಡುವುದು ಸರಿಯಲ್ಲ. 

ಸಂಸದನಾಗಿ ಜನಮೆಚ್ಚುವ ಅಭಿವೃದ್ಧಿ ಮಾಡಿದ್ದೇನೆ: ಬಿ.ವೈ.ರಾಘವೇಂದ್ರ

ಜೆಡಿಎಸ್ ಎಲ್ಲಿದೆ ಎಂದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ. ಅವರಿಗೆ ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುತ್ತೇನೆ, ಈ ಭಾಗದ ಎಲ್ಲರೂ ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಅಧಿಕ ಮತಗಳ ಹಂತರದಿಂದ ಗೆಲ್ಲಿಸುವ ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.. ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಈ ಹಿಂದೆ ಫಲವತ್ತಾದ ಜಮೀನಿನಲ್ಲಿ ಬೆಳೆಗಳಿಗೆ ಮಾರಕವಾಗಿ ಬೆಳೆಯುತ್ತಿದ್ದ ಕಾಂಗ್ರೆಸ್ ಗಿಡ ಕಿತ್ತು ಹಾಕುತ್ತಿದ್ದೆವು. ಅದೇ ರೀತಿ ಈ ಬಾರಿಯ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ದಿ ಮರೀಚಿಕೆಯಾಗಿದೆ’ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಾಗಿದೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿ ಹೇಗೆ ಕೆಲಸ ಮಾಡುವುದು ಎಂಬ ಭಾವನೆ ಕೆಲವರಲ್ಲಿ ಇದೆ. ಆದರೆ ಇಂತಹ ಭಾವನೆಗಳನ್ನು ದೂರ ಮಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಒಂದೇ ಉದ್ದೇಶದಿಂದ ಎಲ್ಲರೂ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ವರ್ಷವೆಲ್ಲ ರಾಜ್ಯಕ್ಕೆ ಬರಗಾಲ ಬಂದಿದೆ. ರೈತರಿಗೆ ನೀರಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. 

ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸೋದೆ ನಮ್ಮ ಗುರಿ: ದಿಂಗಾಲೇಶ್ವರ ಶ್ರೀ ಘೋಷಣೆ

ಸರಿಯಾದ ವಿದ್ಯುತ್ ನೀಡದೆ ಇರುವ ಬೋರ್ವೆಲ್‌ಗಳಿಂದಲೂ ನೀರನ್ನು ಪಡೆಯಲಾಗದಂತಹ ಪರಿಸ್ಥಿತಿಯಲ್ಲಿ ಹಾಸನ ಜಿಲ್ಲೆಯ ರೈತರಲ್ಲಿ ಇದೆ. ಆದುದರಿಂದ ಮುಂದಿನ ದಿನಗಳಲ್ಲಿ ರೈತ ಪರ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಶಾಸಕ, ವೈ ಎಸ್.ವಿ.ದತ್ತ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಮೂರ್ತಿ, ಸತ್ಯನಾರಾಯಣ, ಸೀಗೆ ನಂಜುಂಡಪ್ಪ, ಶಿವನಂಜಪ್ಪ, ಶಿವಣ್ಣ , ಕುಮಾರ್ ಇದ್ದರು. ಹಾಸನ ತಾಲೂಕಿನ ಸಾಲಗಾಮೆಯಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು.

Follow Us:
Download App:
  • android
  • ios