ಸಂಸದನಾಗಿ ಜನಮೆಚ್ಚುವ ಅಭಿವೃದ್ಧಿ ಮಾಡಿದ್ದೇನೆ: ಬಿ.ವೈ.ರಾಘವೇಂದ್ರ
ಅಭಿವೃದ್ಧಿ ಮುಂದೆ ಅಧಿಕಾರದ ಅಮಲಿನ ಚುನಾವಣೆ ನಡೆಯುತ್ತಿದ್ದು ಮತದಾರರು ದೇಶದ ಹಿತದೃಷ್ಟಿಯಿಂದ ಆತ್ಮಾವಲೋಕನ ಮಾಡಿಕೊಂಡು ಮತ ನೀಡಬೇಕು ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ರಿಪ್ಪನ್‍ಪೇಟೆ (ಏ.01): ಅಭಿವೃದ್ಧಿ ಮುಂದೆ ಅಧಿಕಾರದ ಅಮಲಿನ ಚುನಾವಣೆ ನಡೆಯುತ್ತಿದ್ದು ಮತದಾರರು ದೇಶದ ಹಿತದೃಷ್ಟಿಯಿಂದ ಆತ್ಮಾವಲೋಕನ ಮಾಡಿಕೊಂಡು ಮತ ನೀಡಬೇಕು ಎಂದು ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು. ಇಲ್ಲಿನ ವಿನಾಯಕ ವೃತ್ತದಲ್ಲಿರುವ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಲಾದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ತಮ್ಮ ಆಶೀರ್ವಾದದಿಂದ ಮೂರು ಬಾರಿ ಸಂಸತ್ ಸದಸ್ಯನಾಗಿ ಜನಮೆಚ್ಚುವ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸರ್ಕಾರದ ಹಿರಿಯರಿಂದಲೂ ಪ್ರಶಂಸೆ ಪಡೆದುಕೊಂಡಿದ್ದೇನೆ.
ಕ್ಷೇತ್ರದಾದ್ಯಂತ ಸಂಪರ್ಕ ರಸ್ತೆ, ಮೆಡಿಕಲ್ ಕಾಲೇಜು, ಕೃಷಿ, ತೋಟಗಾರಿಕೆ ಕಾಲೇಜು, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಅಕಾಶವಾಣಿ. ಸರ್ವಋತು ಪ್ರವಾಸಿ ತಾಣವಾಗಿ ಜೋಗ ಅಭಿವೃದ್ಧಿ ಹಾಗೂ ತುಮರಿ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿಗಳಿಗಾಗಿ ಕೇಂದ್ರದಿಂದ 20 ಸಾವಿರ ಕೋಟಿ ಅನುದಾನ ತಂದಿದ್ದೇನೆ. ಕೊಲ್ಲೂರಿಗೆ ಹೊಸನಗರದಿಂದ ಅಡಗೋಡಿ ತಿರುವು ರಹಿತ ರಸ್ತೆ ಸೇತುವೆ, ಕೊಡಚಾದ್ರಿಗೆ ರೋಪ್‍ಕಾರು ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿವೆ. ಹಾಗೆಯೇ ಮೇಗರವಳ್ಳಿಯಿಂದ ಮಣಿಪಾಲದವರೆಗೆ ₹12 ಕೋಟಿ ವೆಚ್ಚದ ಸುರಂಗ ಮಾರ್ಗ ಕಾಮಗಾರಿಗೆ ಯೋಜನಾ ವರದಿ ನೀಡಲಾಗಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇವಲ ಒಂದೇ ವಾರದಲ್ಲಿ ಅನುದಾನ ಬಿಡುಗಡೆ ಮಾಡಿದ್ದಾರೆಂದು ಹೇಳಿದರು.
ವಾಮಮಾರ್ಗದಿಂದ ಗೆಲ್ಲುವ ಹುನ್ನಾರ: ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿಯೂ ವಿಫಲವಾಗಿದೆ. ಕಾನೂನು ಸುವ್ಯವಸ್ಥೆಯ ಪುಂಡರ ಕೈಯಲ್ಲಿ ಅಡವಿಟ್ಟಿದೆ. ನಮ್ಮ ಅಭ್ಯರ್ಥಿ ಬಿ.ವೈ.ರಾಘವೇಂದ್ರರನ್ನು ವಿರೋಧ ಪಕ್ಷದವರು ಅರ್ಹತೆ ಮೇಲೆ ಗೆಲ್ಲಲು ಸಾಧ್ಯವಿಲ್ಲ. ಅದ್ದರಿಂದ ಕಾಂಗ್ರೆಸ್ ಏಜೆಂಟರು ಚುನಾವಣೆಯನ್ನು ಸುಳ್ಳು, ವಾಮಮಾರ್ಗದಿಂದ ಗೆಲ್ಲುವ ಹುನ್ನಾರ ಮಾಡುತ್ತಿದ್ದಾರೆ. ಭವಿಷ್ಯದ ಭಾರತ ನಾರಿಶಕ್ತಿಯ ಮೂಲಕ ಮುನ್ನಡೆಯುವುದಿದೆ. ಇದನ್ನು ಸಾಕಾರಗೊಳಿಸಬೇಕಾದರೆ ಪ್ರತಿ ಮಹಿಳೆ ಮತದಾರರನ್ನು ಸಂಪರ್ಕಿಸಿ ಬಿಜೆಪಿ ಬೆಂಬಲಿಸುವಂತೆ ಮನಪರಿವರ್ತನೆ ಮಾಡಿ ಪಕ್ಷಕ್ಕೆ ಮತ ಕೊಡಿಸಬೇಕೆಂದು ಮನವಿ ಮಾಡಿದರು.
ಪ್ರಲ್ಹಾದ್ ಜೋಶಿ ಅವರನ್ನು ಸೋಲಿಸೋದೆ ನಮ್ಮ ಗುರಿ: ದಿಂಗಾಲೇಶ್ವರ ಶ್ರೀ ಘೋಷಣೆ
ಸಮಾವೇಶದಲ್ಲಿ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ, ಮಹಿಳಾ ಅಧ್ಯಕ್ಷೆ ಆಶಾ ರವೀಂದ್ರ, ಮುಖಂಡರಾದ ವೀಣಾಶೆಟ್ಟಿ, ಜೆಡಿಎಸ್ ಮುಖಂಡ ಆರ್.ಎ. ಚಾಬುಸಾಬ್, ಎನ್. ವರ್ತೇಶ್, ಜಿ.ಎಸ್.ವರದರಾಜ್, ಜಿಪಂ ಮಾಜಿ ಸದಸ್ಯೆ ಎ.ಟಿ.ನಾಗರತ್ನಾ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನಾ ದೇವರಾಜ್, ಸರಸ್ವತಿ, ಲೀಲಾ ಉಮಾಶಂಕರ್, ರೇಖಾ ರವಿ, ಪದ್ಮಾ ಸುರೇಶ್, ಗಣಪತಿ ಬೆಳಗೋಡು,ಇನ್ನಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.