ಮೈಸೂರಿಗೆ ಮೋದಿ ಎಂಟ್ರಿಗೂ ಮುನ್ನವೇ ಅಲರ್ಟ್ ಆದ ಸಿಎಂ; 8 ವರ್ಷಗಳ ಮುನಿಸು ಬಿಟ್ಟು ಶ್ರೀನಿವಾಸ್ ಪ್ರಸಾದ್ ಭೇಟಿ!
ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಕಳೆದ 8 ವರ್ಷಗಳ ಮುನಿಸುಬಿಟ್ಟು ಶ್ರೀನಿವಾಸ ಪ್ರಸಾದರನ್ನ ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.
ಚಾಮರಾಜನಗರ (ಏ.13): ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ಕಳೆದ 8 ವರ್ಷಗಳ ಮುನಿಸುಬಿಟ್ಟು ಶ್ರೀನಿವಾಸ ಪ್ರಸಾದರನ್ನ ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.
ಹೌದು, ಶ್ರೀನಿವಾಸ್ ಪ್ರಸಾದ್ ಮನೆಗೆ ನಾನು ಹೋಗಲ್ಲ ಅಂತಾ ವಾರದ ಹಿಂದೆಯಷ್ಟೇ ಕಡ್ಡಿ ಮುರಿದಂತೆ ಹೇಳಿದ್ದ ಸಿಎಂ ಸಿದ್ದರಾಮಯ್ಯ. ಆದರೆ ಇದೀಗ ಒಂದೇ ವಾರದಲ್ಲಿ ನಿಲುವು ಬದಲಿಸಿಕೊಂಡ ಸಿಎಂ. ಪ್ರತಿಷ್ಠೆ ಮುನಿಸು ಬಿಟ್ಟು ಶ್ರೀನಿವಾಸ ಪ್ರಸಾದ್ ಮನೆಗೆ ಹೋಗದಿದ್ದಲ್ಲಿ ದುಬಾರಿ ಬೆಲೆ ತೆತ್ತಬೇಕಾಗುತ್ತೆ ಎಂಬ ಸುಳಿವು ಸಿಕ್ಕಿದ್ದೇ ತಡ ಪ್ರಸಾದ್ ನಿವಾಸ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ. ಪ್ರಸಾದ್ ಭೇಟಿ ಮಾಡದಿದ್ರೆ ಆಗುವ ನಷ್ಟದ ಬಗ್ಗೆ ನಿನ್ನೆ ರಾತ್ರಿಯೇ ವಿವರಣೆ ಕೊಟ್ಟಿದ್ದ ಸ್ಥಳೀಯ ನಾಯಕರು. ನಾಳೆ ಮೋದಿ ಜೊತೆ ಶ್ರೀನಿವಾಸ್ ಪ್ರಸಾದ್ ವೇದಿಕೆ ಹಂಚಿಕೊಂಡರೆ ಸಮಸ್ಯೆಯಾಗುತ್ತೆ. ಕಾಂಗ್ರೆಸ್ ಬೆಲೆ ತೆತ್ತಬೇಕಾಗುತ್ತೆ ಹೀಗಾಗಿ ಹಠ ಪ್ರತಿಷ್ಠೆ ಆರು ವರ್ಷಗಳ ಮುನಿಸು ಬದಿಗಿಟ್ಟು ಶ್ರೀನಿವಾಸ ಪ್ರಸಾದ್ ಭೇಟಿಗೆ ಬಂದ ಸಿಎಂ.
ಶ್ರೀನಿವಾಸ ಪ್ರಸಾದ್‌ಗಾಗಿ 10 ನಿಮಿಷ ಒಂಟಿಯಾಗಿ ಕುಳಿತ ಸಿಎಂ
ಹೌದು ಸಿಎಂ ಸಿದ್ದರಾಮಯ್ಯಗೆ ಇದು ಅನಿವಾರ್ಯವಾಗಿದೆ. ಯಾರಿಗಾಗಿ ಕಾದಿದ್ದೇ ಇಲ್ಲ. ಆದರೆ ಶ್ರೀನಿವಾಸ ಪ್ರಸಾದ್ ಭೇಟಿಗಾಗಿ ಕೊಂಚವೂ ಬೇಸರಿಸಿಕೊಳ್ಳದೆ 10ನಿಮಿಷ ಒಂಟಿಯಾಗಿಯೇ ಕುಳಿತು ಕಾದಿದ್ದಾರೆ. ಶ್ರೀನಿವಾಸ ಪ್ರಸಾದ್ ಬರುತ್ತಿದ್ದಂತೆ ಎದ್ದು ನಿಂತು ಗೌರವ ತೋರಿರುವ ಸಿದ್ದರಾಮಯ್ಯ. ಬಳಿಕ ತಮ್ಮ ಪಕ್ಷದ ನಾಯಕರನ್ನೆಲ್ಲ ಪರಿಚಯ ಮಾಡಿಸಿಕೊಟ್ಟಿದ್ದಾರೆ.
ಭೇಟಿ ಬಳಿಕ ಸಿಎಂ ಹೇಳಿದ್ದೇನು?
ಶ್ರೀನಿವಾಸ ಪ್ರಸಾದ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀವು ಕಾಂಗ್ರೆಸ್‌ನಲ್ಲಿದ್ದವರು. ಕಾಂಗ್ರೆಸ್ ಬಗ್ಗೆ ಸಿಂಪಥಿ ಇರಲಿ ಎಂದು ಹೇಳಿದ್ದೇನೆ. ಸುದೀರ್ಘವಾಗಿ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರು ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರೊಂದಿಗೆ ರಾಜಕೀಯದ ಬಗ್ಗೆ ಹೆಚ್ಚು ಏನು ಮಾತನಾಡಲಿ? ಶ್ರೀನಿವಾಸ ಪ್ರಸಾದ್ ನನ್ನ ಹಳೇಯ ಸ್ನೇಹಿತ. ರಾಜಕೀಯವಾಗಿ ಅವರು ಬಿಜೆಪಿಗೆ ಹೋಗಿದ್ದರು. ಈಗ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇ ಅಷ್ಟೇ ಎನ್ನುವ ಮೂಲಕ ನಡೆದ ಚರ್ಚೆ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ.
ಶ್ರೀನಿವಾಸ ಪ್ರಸಾದ್ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಮನೆಗೆ ಬಂದಿದ್ದು ಸಂತೋಷ ಆಗಿದೆ. ನಾಳೆಯ ಮೋದಿ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ, ಬರುವುದೂ ಇಲ್ಲ. ಬಂದಿಲ್ಲ, ಕರೆದಿಲ್ಲ, ಕರೆಯೋದೂ ಇಲ್ಲ, ನಾನು ಹೋಗೋದೂ ಇಲ್ಲ ಎಂದರು.
ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯ ನಿವೃತ್ತಿಯಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣ ಇದೆ. ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ.ಬಹಿರಂಗವಾಗಿ ಯಾವುದೆರ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ ಎಂದಷ್ಟೇ ತಿಳಿಸಿದರು.
ಶ್ರೀನಿವಾಸ ಪ್ರಸಾದ್ ಕಾಂಗ್ರೆಸ್ ಬೆಂಬಲ?
ವಿ ಶ್ರೀನಿವಾಸ ಪ್ರಸಾದ್ ರಾಜಕೀಯದಿಂದ ನಿವೃತ್ತಿ ಬಳಿಕವೂ ಪ್ರಾಬಲ್ಯ ಮೆರೆದ ರಾಜಕಾರಣಿಯಾಗಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಭೇಟಿ ಆಗಿ ಮಾತುಕತೆ ನಡೆಸಿರುವುದರಿಂದ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಬೆಂಬಲ ಘೋಷಿಸುವ ಸಾಧ್ಯತೆಯಿದೆ. ಆರೇಳು ವರ್ಷದ ಮುನಿಸು ಬಿಟ್ಟು ಸ್ವತಃ ಸಿಎಂ ಸಿದ್ದರಾಮಯ್ಯರೇ ಮನೆಗೆ ಬಂದು ಭೇಟಿ ಮಾಡಿರುವುದರಿಂದ ಹಳೆಯದೆಲ್ಲ ಮರೆತು ಸಕರಾತ್ಮಕವಾಗಿಯೇ ಸ್ಪರ್ಧಿಸಿರುವ ಶ್ರೀನಿವಾಸ ಪ್ರಸಾದ್. ರೆಸಾರ್ಟ್‌ನಲ್ಲಿ ಇದ್ದಾಗಲೇ ಸಿಎಂ ಸಿದ್ದರಾಮಯ್ಯ ಫೋನ್ ಕಾಲ್‌ನಲ್ಲಿ ಮಾತನಾಡಿದ್ದರು. ಬಳಿಕ ಸಚಿವ ಹೆಚ್‌ಸಿ ಮಹದೇವಪ್ಪ, ಕೆ ವೆಂಕಟೇಶ್ ಸಹ ಮನೆಗೆ ಬಂದು ಬೆಂಬಲ ಕೋರಿದ್ದರು. ಇದೀಗ ಸ್ವತಃ ಸಿಎಂ ಸಿದ್ದರಾಮಯ್ಯ ಖುದ್ದಾಗಿ ಮನೆಗೆ ಬಂದು ಭೇಟಿ ಮಾಡಿ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮೈಸೂರಿಗೆ ಮೋದಿ ಬರೋದಕ್ಕೆ ನನ್ನ ಅಭ್ಯಂತರ ಇಲ್ಲ; ರಾಜ್ಯಕ್ಕೆ ಅವರ ಕೊಡುಗೆ ಏನು? : ಸಿಎಂ
ಶ್ರೀನಿವಾಸ್ ಪ್ರಸಾದ್ ಪ್ರಸಾದ್ ಆಶೀರ್ವಾದ ನನ್ನ ಮೇಲಿದೆ: ಸುನೀಲ್ ಬೋಸ್
ಶ್ರೀನಿವಾಸ್ ಪ್ರಸಾದ್ ಅವರ ಹಲವಾರು ಬೆಂಬಲಿಗರು ಕಾಂಗ್ರೆಸ್ ಸೇರಿದ್ದಾರೆ. ಶ್ರೀನಿವಾಸ ಪ್ರಸಾದ್ ಅವರ ಅನುಮತಿ ಇಲ್ಲದೆ ಬೆಂಬಲಿಗರು ಕಾಂಗ್ರೆಸ್ ಸೇರಿಲ್ಲ. ಹಾಗಾಗಿ ಶ್ರೀನಿವಾಸಪ್ರಸಾದ್ ಅವರ ಆಶೀರ್ವಾದ ನನ್ನ ಮೇಲಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಿಳಿಸಿದರು.
ನಾನೂ ಸಹ ಶ್ರೀನಿವಾಸ್ ಪ್ರಸಾದ್‌ರನ್ನು ಭೇಟಿ ಮಾಡಿದ್ದೇನೆ. ಆರಿಸಿ ಬಾ ಎಂದು ಆಶೀರ್ವಾದ ಮಾಡಿದ್ದಾರೆ.ಅವರ ಬೆಂಬಲಿಗರ ಕಾಂಗ್ರೆಸ್ ಸೇರ್ಪಡೆಯಿಂದ ನನಗೆ ಹೆಚ್ಚಿನ ಶಕ್ತಿ ಬಂದಿದೆ. ಜೊತೆಗೆ ಬಿಜೆಪಿ ಬೆಂಬಲಿಸೋದಾಗಿ ಶ್ರೀನಿವಾಸಪ್ರಸಾದ್ ಎಲ್ಲಿಯೂ ಹೇಳಿಲ್ಲ. ಶ್ರೀನಿವಾಸ ಪ್ರಸಾದ್ ಅಳಿಯ ಡಾ.ಎನ್ ಎಸ್ ಮೋಹನ್ ಬಿಜೆಪಿಯಲ್ಲೇ ಇರೋದಾಗಿ ಹೇಳಿದ್ದಾರೆ. ಹಾಗಾಗಿ ಅವರ ಬಗ್ಗೆ ಮಾತನಾಡೋದು ಅಪ್ರಸ್ತುತ ಎಂದರು.