Asianet Suvarna News Asianet Suvarna News

ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳನ್ನು ಗೆಲ್ಲೋಣ: ಶಾಸಕ ತಿಪ್ಪಾರೆಡ್ಡಿ

ಕಾರ್ಯಕರ್ತರಿಗೆ ಮುಜುಗರವಾಗುವ ಯಾವ ಕೆಲಸವನ್ನು ಮಾಡಿಲ್ಲ. ಎದೆಗುಂದದೆ ಪ್ರತಿ ಮನೆ ಮನೆಗೆ ಹೋಗಿ ಧೈರ್ಯವಾಗಿ ಬಿಜೆಪಿಗೆ ಮತ ಕೇಳಿ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕರೆ ನೀಡಿದರು. 

Lets Win 6 Constituencies of Chitradurga district Says MLA GH Thippareddy gvd
Author
First Published Jan 14, 2023, 11:33 PM IST

ಚಿತ್ರದುರ್ಗ (ಜ.14): ಕಾರ್ಯಕರ್ತರಿಗೆ ಮುಜುಗರವಾಗುವ ಯಾವ ಕೆಲಸವನ್ನು ಮಾಡಿಲ್ಲ. ಎದೆಗುಂದದೆ ಪ್ರತಿ ಮನೆ ಮನೆಗೆ ಹೋಗಿ ಧೈರ್ಯವಾಗಿ ಬಿಜೆಪಿಗೆ ಮತ ಕೇಳಿ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಕರೆ ನೀಡಿದರು. ಕೆಳಗೋಟೆಯಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ನಡೆದ ಬೂತ್‌ ವಿಜಯ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಗುರುವಾರ ಭಾಗವಹಿಸಿ ಮಾತನಾಡಿದ ಅವರು, ಬೂತ್‌ ವಿಜಯ ಅಭಿಯಾನ ಕಾರ್ಯಕ್ರಮ ಅತ್ಯಂತ ಮಹತ್ವವಾದುದು. ಬೇರೆ ಯಾವ ಪಕ್ಷಗಳಲ್ಲಿಯೂ ಇಂತಹ ವ್ಯವಸ್ಥೆಯಿಲ್ಲ. ಶೇ. 51ರಷ್ಟು ಮತಗಳನ್ನು ಪಡೆದರೆ ಅಂತಹ ಬೂತ್‌ ಗೆದ್ದಂತೆ. 

ಕೆಲವು ಬೂತ್‌ಗಳಲ್ಲಿ ಕಳೆದ ಚುನಾವಣೆಯಲ್ಲಿ ಹಿನ್ನೆಡೆ ಯಾಕಾಯಿತು, ನೂನ್ಯತೆಗಳೇನು ಎನ್ನುವುದನ್ನು ತಿಳಿದುಕೊಂಡು ಸರಿಪಡಿಸುವ ಕೆಲಸ ಮಾಡಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳನ್ನು ಗೆದ್ದುಕೊಳ್ಳೋಣ ಎಂದು ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದರು. ಚಿತ್ರದುರ್ಗ ನಗರ, ಗ್ರಾಮಾಂತರ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ 287 ಬೂತ್‌ಗಳಿದ್ದು, ಎಲ್ಲಾ ಬೂತ್‌ನಲ್ಲಿಯೂ ವಿಜಯ ಅಭಿಯಾನ ನಡೆದಿದೆ. ಬೂತ್‌ಗಳ ಕಡೆ ಹೆಚ್ಚಿನ ಗಮನ ಕೊಡುವಂತೆ ಪಕ್ಷ ಸೂಚಿಸಿದೆ. ಜ. 21ರಿಂದ ಬೂತ್‌ ವಿಜಯ ಸಂಕಲ್ಪ ಯಾತ್ರೆ ಆರಂಭಗೊಳ್ಳಲಿದೆ. 

ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾರ್ಷಿಕ ಘಟಿಕೋತ್ಸವ: ಸಚಿವ ಅಶ್ವಥ್ ಭಾಗಿ

ನಗರದ ಸ್ಲಂಗಳಲ್ಲಿ ಹನ್ನೆರಡು ಸಾವಿರ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ಕೊಡುತ್ತಿದ್ದೇವೆ. ಎಂಟೊಂಬತ್ತು ಲಕ್ಷ ರು. ಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಹಾಗಾಗಿ ಕಾರ್ಯಕರ್ತರು ನಿರಾಶರಾಗುವುದು ಬೇಡ. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಅವಕಾಶ ಸಿಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಮಾಡಲಾಗುವುದು. ಕಾಂಗ್ರೆಸ್‌ನಲ್ಲಿ ಅನೇಕ ವಂಚನೆಯಾಗಿದೆ. 2013 ರಲ್ಲಿ ಚಿತ್ರದುರ್ಗಕ್ಕೆ ಮಂಜೂರಾದ ಮೆಡಿಕಲ್‌ ಕಾಲೇಜನ್ನು ಬೇರೆಡೆ ವರ್ಗಾಯಿಸಲಾಯಿತು. ಆದರೆ ಈಗಿನ ಸಿಎಂ ಬೊಮ್ಮಾಯಿ ಕಾಲದಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ಆರಂಭಗೊಳ್ಳಲಿದೆ ಎಂದು ಹೇಳಿದರು.

ಬೂತ್‌ ವಿಜಯ ಅಭಿಯಾನದ ಸಂಚಾಲಕ ಮಲ್ಲಿಕಾರ್ಜುನ್‌ ಮಾತನಾಡಿ, ಹತ್ತು ದಿನಗಳ ಕಾಲ ಜಿಲ್ಲೆಯಲ್ಲಿ ಬೂತ್‌ ಅಭಿಯಾನ ನಡೆಯಿತು. ಎಲ್ಲೆಡೆ ಜನರ ಸ್ಪಂದನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿಯಾಗಿದೆ. ಹಿಂದೆ ಮಾಡಿದ ಬೂತ್‌ ಸಮಿತಿಯನ್ನು ಪರಿಶೀಲಿಸಿದ್ದೇವೆ. 45 ಬೂತ್‌ನಲ್ಲಿ ಕಾರ್ಯಕರ್ತರ ಉತ್ಸಾಹವಿದೆ. ಬೂತ್‌ ಮಟ್ಟದಲ್ಲಿ ಸಂಘಟನೆಯಾಗಬೇಕು. ಪೇಜ್‌ ಪ್ರಮುಖ್‌, ಮನ್‌ಕಿಬಾತ್‌ ಲಿಂಕ್‌ ಮಾಡಿ ಪ್ರತಿ ಮನೆ ಮನೆಗೆ ಧ್ವಜಗಳನ್ನು ಕಟ್ಟಲಾಗಿದೆ. ಚಿತ್ರದುರ್ಗ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಉತ್ತಮ ಗುಣಮಟ್ಟದ ರಸ್ತೆ, ನೀರು, ಬೀದಿ ದೀಪದ ವ್ಯವಸ್ಥೆ ಕಲ್ಪಿಸಿದ್ದಾರೆ. 

ದೇಶದ ಪ್ರಧಾನಿ ಮೋದಿರವರು ಕಪ್ಪುಚುಕ್ಕೆಯಿಲ್ಲದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಿಳಿಸಿ ಎಂದು ಮನವಿ ಮಾಡಿದರು. ಬೂತ್‌ ವಿಜಯ ಅಭಿಯಾನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಮಂಡಲ ಅಧ್ಯಕ್ಷ ನವೀನ್‌ ಚಾಲುಕ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯದ ಅಭಿವೃದ್ಧಿ ಕೆಲಸಗಳು ಎಲ್ಲರ ಕಣ್ಣಿಗೆ ಕಾಣುತ್ತಿವೆ. ಚಿತ್ರದುರ್ಗದಲ್ಲಿ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಬೇರೆ ಯಾರು ಮಾಡಿಲ್ಲ. ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಜಿ.ಎಚ್‌.ತಿಪ್ಪಾರೆಡ್ಡಿರವರನ್ನು ಗೆಲ್ಲಿಸಿ ಎದುರಾಳಿಗಳು ಧೂಳಿಪಟವಾಗುವ ರೀತಿಯಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕೆಂದು ವಿನಂತಿಸಿದರು.

ಸ್ಪೀಕರ್‌ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಶಿರಸಿಯಲ್ಲಿ ಸಿದ್ಧತೆ: ಬಿಜೆಪಿಗೆ ತಟ್ಟುತ್ತಾ ಕಪ್ಪುಪಟ್ಟಿ ಪ್ರದರ್ಶನ?

ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಪ್ರಧಾನ ಕಾರ್ಯದರ್ಶಿ ಜೈಪಾಲ್‌, ನರೇಂದ್ರ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾ​ಕಾರದ ಅಧ್ಯಕ್ಷ ಜಿ.ಟಿ. ಸುರೇಶ್‌ ಸಿದ್ದಾಪುರ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್‌ ವೇದಿಕೆಯಲ್ಲಿದ್ದರು. ಸಂಪತ್‌ ಕುಮಾರ್‌, ಶಿವಣ್ಣಾಚಾರ್‌, ನಾಗರಾಜ್‌ ಬೇದ್ರೆ, ನಗರಸಭೆ ಸದಸ್ಯ ಹರೀಶ್‌, ರವಿಕುಮಾರ್‌, ಕವನ, ರಾಮು, ಕಿರಣ್‌, ಕೃಷ್ಣ, ಉಷಾಭಾಯಿ ಸೇರಿದಂತೆ ಬೂತ್‌ ಅಧ್ಯಕ್ಷರು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಸಮಾರೋಪ ಸಮಾರಂಭದಲ್ಲಿ ಹಾಜರಿದ್ದರು.

Follow Us:
Download App:
  • android
  • ios