ಸ್ಪೀಕರ್‌ ಕಾಗೇರಿ ಅಭಿನಂದನಾ ಸಮಾರಂಭಕ್ಕೆ ಶಿರಸಿಯಲ್ಲಿ ಸಿದ್ಧತೆ: ಬಿಜೆಪಿಗೆ ತಟ್ಟುತ್ತಾ ಕಪ್ಪುಪಟ್ಟಿ ಪ್ರದರ್ಶನ?

ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಮಾತ್ರ ಬಾಕಿಯಿದೆ. ರಾಜಕೀಯ ಪಕ್ಷಗಳು ಮತದಾರರನ್ನ ಸೆಳೆಯಲು ಅಖಾಡಕ್ಕೂ ಇಳಿಯಲಾರಂಭಿಸಿವೆ. ಈ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಬಿಜೆಪಿ ಚುನಾವಣೆಗೆ ತಯಾರಿ ನಡೆಸಿದ್ದು, ನಾಳೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದೆ.

Preparations in Sirsi for Speaker Kageris felicitation ceremony Black flag display against BJP gvd

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಶಿರಸಿ (ಜ.14): ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಮಾತ್ರ ಬಾಕಿಯಿದೆ. ರಾಜಕೀಯ ಪಕ್ಷಗಳು ಮತದಾರರನ್ನ ಸೆಳೆಯಲು ಅಖಾಡಕ್ಕೂ ಇಳಿಯಲಾರಂಭಿಸಿವೆ. ಈ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಬಿಜೆಪಿ ಚುನಾವಣೆಗೆ ತಯಾರಿ ನಡೆಸಿದ್ದು, ನಾಳೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಸಿಎಂ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರು ಕೂಡಾ ಆಗಮಿಸಲಿದ್ದಾರೆ. ಈ ನಡುವೆ ಒಂದೆಡೆ ಅರಣ್ಯ ಹಕ್ಕು ಹೋರಾಟಗಾರರು ಕಪ್ಪುಪಟ್ಟಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ರೆ, ಮತ್ತೊಂದೆಡೆ ಕಾಗೇರಿಗೆ ಈ ಅಭಿನಂದನೆ ಯಾವ ಕಾರಣಕ್ಕಾಗಿ? ಎಂದು ಜನರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು! ವಿಧಾನಸಭಾ ಚುನಾವಣೆಗೆ ಕೇವಲ ಮೂರ್ನಾಲ್ಕು ತಿಂಗಳು ಮಾತ್ರ ಬಾಕಿಯಿದೆ. ಈ ಹಿನ್ನೆಲೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿ ತಮ್ಮ ತಾಲೀಮು ಕೂಡಾ ಪ್ರಾರಂಭಿಸಿವೆ. ಅದರಂತೆ ಉತ್ತರಕನ್ನಡದಲ್ಲಿಯೂ ಬಿಜೆಪಿ ಚುನಾವಣಾ ಪೂರ್ವ ತಯಾರಿ ನಡೆಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ 20ಕ್ಕೂ ಅಧಿಕ ಕೇಂದ್ರ ಹಾಗೂ ರಾಜ್ಯ ಸಚಿವರನ್ನು ಆಹ್ವಾನಿಸಲಾಗಿದೆ. ಅಲ್ಲದೇ, ಕಾರ್ಯಕ್ರಮದಲ್ಲಿ ಸುಮಾರು 270 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ. 

ಯಾದಗಿರಿಯಲ್ಲಿ ಮೈಲಾರಲಿಂಗನ ಜಾತ್ರಾ ವೈಭವ: ಭಂಡಾರದ ಒಡೆಯನಿಗೆ ಭಂಡಾರ ಅರ್ಪಿಸಿದ ಭಕ್ತರು

ಇದರ ಜತೆಗೆ 30 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ, ಇದೀಗ ವಿಧಾನಸಭಾಧ್ಯಕ್ಷರಾಗಿಯೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನಾ ಸಮಾರಂಭವನ್ನು ನಾಳೆ ಶಿರಸಿಯಲ್ಲಿ ಏರ್ಪಡಿಸಲಾಗಿದೆ. ಸಿಎಂ ಆಗಮನ ಹಿನ್ನೆಲೆ ಭದ್ರತೆ ಸೇರಿದಂತೆ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಂದಹಾಗೆ, ಬಿಜೆಪಿಯಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದೊಡ್ಡ ಸಮಾರಂಭದ ಮೂಲಕ ಅಭಿನಂದನೆ ಮಾಡುತ್ತಿರೋದಕ್ಕೆ ಜನರು ಟ್ರೋಲ್ ಮಾಡಲಾರಂಭಿಸಿದ್ದಾರೆ. 

ಯಾವ ಕಾರಣಕ್ಕಾಗಿ ಈ ಅಭಿನಂದನಾ ಸಮಾರಂಭ..? ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಜನರು ಪ್ರಶ್ನಿಸಲು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿಲ್ಲ, ಹಲವು ವರ್ಷಗಳಿಂದ ದುಸ್ಥಿತಿಯಲ್ಲಿರುವ ಶಿರಸಿ- ಕುಮಟಾ ರಸ್ತೆ ರಿಪೇರಿ ಕಂಡಿಲ್ಲ, ಹಳ್ಳಿಬೈಲು ಬಸ್ ನಿಲ್ದಾಣ ಬಿದ್ದು 5 ವರ್ಷವಾದ್ರೂ ನೂತನ ನಿಲ್ದಾಣ ನಿರ್ಮಾಣ ಮಾಡಿಲ್ಲ, ಶಿರಸಿ ಜಿಲ್ಲೆಯಂತೂ ಘೋಷಣೆಯಾಗಿಲ್ಲ. ಶಿರಸಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮತ್ಯಾವ ಕಾರಣಕ್ಕೆ ಈ ಸನ್ಮಾನ ಎಂದು ಜನರು ಟ್ರೋಲ್ ಮೇಲೆ ಟ್ರೋಲ್ ಮಾಡಿ ಪ್ರಶ್ನಿಸಲಾರಂಭಿಸಿದ್ದಾರೆ. 

ಇನ್ನು ಸಿಎಂ ಶಿರಸಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಕಪ್ಪುಪಟ್ಟಿ ಕಟ್ಟಿಕೊಂಡು ಶಿರಸಿಯ ಗಾಂಧಿ ಪ್ರತಿಮೆ ಬಳಿ ಧರಣಿಗೆ ಕೂರಲು ಸಜ್ಜಾಗಿದೆ. ಪ್ರತಿಯೊಂದು ಸರ್ಕಾರವೂ ಕಳೆದ 30 ವರ್ಷದಿಂದ ಅರಣ್ಯ ಅತಿಕ್ರಮಣದಾರರಿಗೆ ಸುಳ್ಳು ಭರವಸೆ ನೀಡಿ ವಂಚನೆ ಮಾಡುತ್ತಿದ್ದು, ಇದರಿಂದ 69 ಸಾವಿರಕ್ಕೂ ಹೆಚ್ಚು ಕುಟುಂಬಗಳು ತಾವು ವಾಸಿಸುತ್ತಿರುವ ಮನೆಗೆ ಪಟ್ಟಾ ಸಿಗದೇ ತೊಂದರೆ ಅನುಭವಿಸುತ್ತಿವೆ.‌ ಪ್ರತಿಬಾರಿ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವ ವಿಷಯವನ್ನು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ತಾರೆ. 

Mandya: ರಾಜ್ಯ, ರಾಷ್ಟ್ರಕ್ಕೆ ಕಾಂಗ್ರೆಸ್‌ ಅನಿವಾರ್ಯ: ಚಲುವರಾಯಸ್ವಾಮಿ

ಆದ್ರೆ, ಯಾರೂ ಈವರೆಗೆ ಪಟ್ಟಾ ವಿತರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಸಿಎಂ ಜಿಲ್ಲೆಗೆ ಭೇಟಿ ನೀಡಿದಾಗ ಅರಣ್ಯವಾಸಿಗಳ ಮನವಿ ಆಲಿಸಿ ಸೂಕ್ತ ಕ್ರಮ‌ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೇ ಮುಖ್ಯಮಂತ್ರಿ ಹಾಗೂ ಸಚಿವರ ದಂಡೇ ಜಿಲ್ಲೆಗೆ ಆಗಮಿಸುತ್ತಿರೋದು ರಾಜಕೀಯ ಸಂಚಲನ‌ ಮೂಡಿಸಲಿದೆ.‌ ಆದರೆ, ಒಂದೆಡೆ ಕಾಗೇರಿಯವರ ಹೆಸರಿನಲ್ಲಿ ಬಿಜೆಪಿ ಟ್ರೋಲ್‌ಗೆ ಒಳಗಾಗುತ್ತಿದ್ದರೆ, ಮತ್ತೊಂದೆಡೆ ಸಿಎಂ ಗಮನ ಸೆಳೆಯಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಸನ್ನದ್ಧರಾಗಿದ್ದಾರೆ. ನಾಳೆ ನಡೆಯುವ ಕಾರ್ಯಕ್ರಮ, ಸಿಎಂ ಭೇಟಿ ಯಾರಿಗೆ ಎಷ್ಟು ಲಾಭವಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios