ಮುಂದಿನ ವಿಧಾನಸಭೆ ಚುನಾವಣೆಗೆ ಗುಜರಾತ್‌ನಲ್ಲಿ ಹಾಲಿ ಶಾಸಕರಾಗಿರುವ 38 ಮಂದಿಗೆ ಟಿಕೆಟ್‌ ನಿರಾಕರಣೆ ಮಾಡಲಾಗಿದೆ. ಇನ್ನೊಂದೆಡೆ ಕೆಲವು ಹಿರಿಯ ನಾಯಕರು ಸ್ವ ಇಚ್ಛೆಯಿಂದ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಗುಜರಾತ್‌ನ ಈ ಮಾದರಿ ಕರ್ನಾಟಕದಲ್ಲೂ ಜಾರಿಯಾಗಲಿ ಎಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೊಯಾ ಟ್ವೀಟ್‌ ಮಾಡಿದ್ದಾರೆ. 

ಬೆಂಗಳೂರು (ನ.10): ಗುಜರಾತ್‌ ವಿಧಾನಸಭೆಗೆ ಡಿಸೆಂಬರ್‌ 1 ಹಾಗೂ 5ಕ್ಕೆ ಮತದಾನ ನಡೆಯಲಿದೆ. ಗುರುವಾರ ಬಿಜೆಪಿಸ 180 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಸೇರಿದಂತೆ ಅನೇಕ ನಾಯಕರು ಸ್ವ ಇಚ್ಛೆಯಿಂದ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರೆ, ಇನ್ನೂ ಕೆಲವರಿಗೆ ಸ್ವತಃ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಟಿಕೆಟ್‌ ನಿರಾಕರಿಸಿದೆ. ಅಂದಾಜು 38 ಹಾಲಿ ಶಾಸಕರುಗಳಿಗೆ ಬಿಜೆಪಿ ಗುಜರಾತ್‌ನಲ್ಲಿ ಟಿಕೆಟ್‌ ನಿರಾಕರಣೆ ಮಾಡಿದೆ ಎನ್ನುವ ವರದಿಯಿದೆ. ಹಿರಿಯ ನಾಯಕರು ಸ್ವಇಚ್ಛೆಯಿಂದ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು ಕರ್ನಾಟಕ ರಾಜಕೀಯ ವಲಯದಲ್ಲೂ ಸುದ್ದಿ ಮಾಡಿದೆ. ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಗುಜರಾತ್‌ ನಾಯಕರ ನಿರ್ಧಾರ ರಾಜ್ಯಕ್ಕೆ ಮಾದರಿಯಾಗಲಿ ಎಂದು ಟ್ವೀಟ್‌ ಮಾಡಿದ್ದು, ಕರ್ನಾಟಕದಲ್ಲೂ ಮುಂದಿನ ಚುನಾವಣೆಯಲ್ಲಿ ಹಿರಿಯ ನಾಯಕರಿಗೆ ಟಿಕೆಟ್‌ ಸಿಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

Scroll to load tweet…


ಗುಜರಾತ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬಳಿಕ ಟ್ವೀಟ್‌ ಮಾಡಿರುವ ಲೆಹರ್‌ ಸಿಂಗ್‌ ಸಿರೋಯಾ, ' ಗುಜರಾತ್ ನಾಯಕರ ನಿರ್ಧಾರ ರಾಜ್ಯಕ್ಕೆ ಮಾದರಿಯಾಗಲಿ' ಎಂದು ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಮನವಿ ಮಾಡಿದ್ದಾರೆ. 'ಮುಂದಿನ ಚುನಾವಣೆಯಲ್ಲಿ ಹಿರಿಯ ನಾಯಕರು ಸ್ಪರ್ಧಿಸೋದು ಬೇಡ. ಕಿರಿಯರಿಗೆ ಅವಕಾಶ ಮಾಡಿ ಕೊಡಿ. ಗುಜರಾತ್ ನಲ್ಲಿ‌ ಪ್ರಭಾವಿ ನಾಯಕರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಮಾದರಿ ನಿಮಗೂ ಮಾದರಿ ಆಗಲಿ' ಎಂದು ಲೆಹರ್‌ ಸಿಂಗ್‌ ಹೇಳಿದ್ದಾರೆ. ಆ ಮೂಲಕ ಟ್ವಿಟರ್‌ನಲ್ಲಿ ರಾಜ್ಯಸಭಾ ಸದಸ್ಯ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮುನ್ನವೇ ಲೆಹರ್‌ ಸಿಂಗ್‌ ಈ ಹೊಸ ಸೂತ್ರ ಮುಂದಿಟ್ಟಿದ್ದಾರೆ. “ಗುಜರಾತಿನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ಮಾಜಿ ಸಚಿವರಾದ ಭೂಪೇಂದ್ರ ಸಿನ್ಹ್ ಚುಡಸಾಮ ಮತ್ತು ಪ್ರದೀಪ್ ಸಿನ್ಹ್ ಜಡೇಜಾ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.” ಎಂದು ಮೊದಲ ಟ್ವೀಟ್‌ ಮಾಡಿದ್ದಾರೆ.

“ಮುಂದಿನ ಪೀಳಿಗೆಯ ಬದಲಾವಣೆಗೆ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಶ್ಲಾಘನೀಯ ಕ್ರಮವಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯದ ಹಿರಿಯ ನಾಯಕರು ಕಿರಿಯರಿಗೆ ದಾರಿ ಮಾಡಿಕೊಡಬೇಕು.” ಎಂದು ಅವರು ಬರೆದಿದ್ದಾರೆ.

Gujarat Election 2022: ರವೀಂದ್ರ ಜಡೇಜಾ ಪತ್ನಿ, ಮೊರ್ಬಿ ದುರಂತದಲ್ಲಿ ಜನರ ಜೀವ ಉಳಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್‌!

ಬುಧವಾರ ದೆಹಲಿಯಲ್ಲಿ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಗುಜರಾತ್‌ ರಾಜ್ಯದ 180 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಯಿತು. ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ಸ್ಪರ್ಧೆ ಮಾಡಲಿದ್ದರೆ, ಮಾಜಿ ಸಿಎಂ ವಿಜಯ್‌ ರೂಪಾನಿ ತಮ್ಮ ಸ್ಥಾನವನ್ನು ವೈದ್ಯೆಯಾಗಿರುವ ದರ್ಶಿತಾ ಶಾಗೆ ಬಿಟ್ಟುಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಹಿರಿಯ ನಾಯಕ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸಭೆಯಲ್ಲಿದ್ದರು.

ಪತ್ನಿಗೆ ಬಿಜೆಪಿ ಟಿಕೆಟ್‌: ಪ್ರಧಾನಿ ಮೋದಿ, ಅಮಿತ್‌ ಶಾಗೆ ರವೀಂದ್ರ ಜಡೇಜಾ ಧನ್ಯವಾದ

ಈ ಸಭೆಯ ನಡೆಯುವ ಮುನ್ನವೇ ಗುಜರಾತ್ ಮಾಜಿ ಸಿಎಂ, ಉಪ ಮುಖ್ಯಮಂತ್ರಿ ಸೇರಿದಂತೆ ಐವರು ಹಿರಿಯ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿ ಪತ್ರ ಕೂಡ ಬರೆದಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅವರಿಗೆ ಈ ಕುರಿತಾಗಿ ಪತ್ರ ಬರೆದ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ತಮ್ಮನ್ನು ವಿಧಾನಸಭೆ ಚುನಾವಣೆಗೆ ಪರಿಗಣಿಸಬೇಡಿ ಎಂದಿದ್ದರು. ಆ ಬಳಿಕ ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ, ಮಾಜಿ ಕಾನೂನು ಮತ್ತು ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮಾ ಮತ್ತು ಮಾಜಿ ಸಚಿವ, ಬೊಟಾಡ್‌ನ ಸೌರಭ್ ಪಟೇಲ್, ರಾಜ್ಯಾಧ್ಯಕ್ಷರಾಗಿದ್ದ ಆರ್.ಸಿ.ಫಲ್ದು ಕೂಡ ಪತ್ರ ಬರೆದು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದಿದ್ದರು.