Gujarat Election 2022: ರವೀಂದ್ರ ಜಡೇಜಾ ಪತ್ನಿ, ಮೊರ್ಬಿ ದುರಂತದಲ್ಲಿ ಜನರ ಜೀವ ಉಳಿಸಿದ ವ್ಯಕ್ತಿಗೆ ಬಿಜೆಪಿ ಟಿಕೆಟ್!
ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಆಡಳಿತಾರೂಢ ಬಿಜೆಪಿ 180 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಟಿಕೆಟ್ ಅಂತಿಮ ಮಾಡಿದೆ. ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಹಾಗೂ ಮೊರ್ಬಿ ದುರಂತದ ವೇಳೆ ನದಿಗೆ ಹಾರಿ ಜನರನ್ನು ಕಾಪಾಡಿದ್ದ ವ್ಯಕ್ತಿಗೆ ಬಿಜೆಪಿ ಟಿಕೆಟ್ ನೀಡಿದೆ.
ಅಹಮದಾಬಾದ್ (ನ.10): ಭಾರತೀಯ ಜನತಾ ಪಕ್ಷ ಗುರುವಾರ ಗುಜರಾತ್ ವಿಧಾನಸಭೆ ಚುನಾವಣೆಯ 160 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 180 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಘಟ್ಲೋಧಿಯಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಅಮಿ ಯಾಗ್ನಿಕ್ ಇವರಿಗೆ ಎದುರಾಳಿಯಾಗಿದ್ದಾರೆ. ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕ್ಷೇತ್ರವಾಗಿದ್ದ ರಾಜ್‌ಕೋಟ್ ಪಶ್ಚಿಮದಲ್ಲಿ ವೈದ್ಯೆಯಾಗಿರುವ ಡಾ. ದರ್ಶಿತಾ ಶಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಇತ್ತೀಚೆಗೆ ತೂಗುಸೇತುವೆ ದುರಂತದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದ ಮೊರ್ಬಿ ಪ್ರದೇಶದಲ್ಲಿ ಹಾಲಿ ಬಿಜೆಪಿ ಶಾಸಕ ಬ್ರಿಜೇಶ್‌ಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಅವರ ಸ್ಥಾನದಲ್ಲಿ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾಗೆ ಟಿಕೆಟ್ ನೀಡಲಾಗಿದೆ. ಮೊರ್ಬಿ ದುರಂತದ ವೇಳೆ ಸ್ಥಳದಲ್ಲಿದ್ದ ಕಾಂತಿಲಾಲ್, ಮಚ್ಛು ನದಿಗೆ ಹಾರಿ ಜನರ ಪ್ರಾಣ ಉಳಿಸುವಲ್ಲಿ ನೆರವಾಗಿದ್ದರು. ಅಂದಾಜು 70ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದ ಅವರು ಇದರ ವಿಡಿಯೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾಗೆ ಜಾಮ್‌ನಗರ ಉತ್ತರಿಂದ ಟಿಕೆಟ್ ನೀಡಲಾಗಿದೆ.
ಇನ್ನು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿದ ಕೆಲವು ವ್ಯಕ್ತಿಗಳೂ ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ.ಪ್ರದ್ಯುಮಾನ್ ಸಿಂಗ್ ಜಡೇಜಾ (ಅಬ್ದಾಸಾ), ಕುವರ್ಜಿ ಬವ್ಡಿಯಾ (ಜಸ್ದಾನ್), ಜವಾಹರ್ ಚಾವ್ಡಾ (ಮಾನವದಾರ್), ಹರ್ಷದ್ ರಿಬ್ಡಿಯಾ (ವಿಸಾವಾದರ್), ಭಾಗಾ ಬರದ್ (ತಲಾಲಾ), ಅಶ್ವಿನ್ ಕೊತ್ವಾಲ್ (ಜಸ್ದಾನ್). ಬಿಜೆಪಿಯಿಂದ ಖೇಡಬ್ರಹ್ಮ), ಜಿತು ಚೌಧರಿ (ಕಪ್ರದ) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಎಲ್ಲಾ ನಾಯಕರು 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು. ಈಗ ಬಿಜೆಪಿಯಿಂದ ವಿಧಾನಸಭೆ ಕಣಕ್ಕೆ ಇಳಿಯಲಿದ್ದಾರೆ.
ಗುಜರಾತ್ ಚುನಾವಣೆಯ ಪ್ರಮುಖ ಬಿಜೆಪಿ ಅಭ್ಯರ್ಥಿಗಳು: ಘಟ್ಲೋಧಿಯಾ ಕ್ಷೇತ್ರದಿಂದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದರೆ, ಗಾಂಧಿಧಾಮ ಕ್ಷೇತ್ರದಿಂದ ಮಾಲತಿಬೆನ್ ಮಹೇಶ್ವರಿ, ರಾಜ್‌ಕೋಟ್ ಪಶ್ಚಿಮದಿಂದ ಪೆಥಾಲಜಿಸ್ಟ್ ದರ್ಶಿತಾ ಶಾ, ಜಾಮ್‌ನಗರ ಉತ್ತರದಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ, ವಿರಾಮಗಮಮ್ ಕ್ಷೇತ್ರದಿಂದ ಹಾರ್ದಿಕ್ ಪಟೇಲ್ ಸ್ಪರ್ಧೆ ಮಾಡಲಿದ್ದಾರೆ.
Gujarat Election 2022: ಗುಜರಾತ್‌ನಲ್ಲಿ ಡಿಸೆಂಬರ್ 1, 5ಕ್ಕೆ ಎರಡು ಹಂತದ ಮತದಾನ, 8ಕ್ಕೆ ಫಲಿತಾಂಶ!
38 ಹಾಲಿ ಶಾಸಕರಿಗೆ ಟಿಕೆಟ್ ಕಟ್: ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೇತೃತ್ಬದಲ್ಲಿ ನಡೆದ ಮೂರು ಗಂಟೆಗಳ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 38 ಹಾಲಿ ಶಾಸಕತಿಗೆ ಟಿಕೆಟ್ ಕಟ್ ಮಾಡಲಾಗಿದೆ. ಗುಜರಾತ್ ವಿಧಾನಸಭೆ ಅಭ್ಯರ್ಥಿಗಳನ್ನು ಬುಧವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಂತಿಮ ಮಾಡಲಾಯಿತು. ರಾಜನಾಥ್ ಸಿಂಗ್, ದೇವೇಂದ್ರ ಫಡ್ನವಿಸ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಸಭೆಯಲ್ಲಿದ್ದರು. ಒಟ್ಟು 182 ಕ್ಷೇತ್ರಗಳಿಗೆ ಅಭ್ಯರ್ಥಿಯ ಹೆಸರನ್ನು ಚರ್ಚೆ ಮಾಡಲಾಯಿತು. ಮೂಲಗಳ ಪ್ರಕಾರ ಬಿಜೆಪಿ 38 ಕ್ಷೇತ್ರಗಳ ಹಾಲಿ ಶಾಸಕರಿಗೆ ಟಿಕೆಟ್ ಕಟ್ ಮಾಡಿದೆ. ಕಾಂಗ್ರೆಸ್‌ನಿಂದ ಪಕ್ಷಕ್ಕೆ ಬಂದ ಹಾರ್ದಿಕ್ ಪಟೇಲ್ ಹಾಗೂ ಆಲ್ಪೇಶ್ ಠಾಕೂರ್‌ಗೆ ಟಿಕೆಟ್ ನೀಡಲಾಗಿದೆ.
Gujarat Election 2022 Asianet Survey: ಗುಜರಾತ್‌ನಲ್ಲಿ ಮತ್ತೆ ಬಿಜೆಪಿ: ಕುಗ್ಗಿದ ಕಾಂಗ್ರೆಸ್ ಬಲ
ಸಭೆಗೂ ಮುನ್ನವೇ ಗುಜರಾತ್ ಮಾಜಿ ಸಿಎಂ, ಉಪ ಮುಖ್ಯಮಂತ್ರಿ ಸೇರಿದಂತೆ ಐವರು ಹಿರಿಯ ಸಚಿವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಈ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಅವರಿಗೆ ಪತ್ರ ಬರೆದು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಮೊದಲಿಗೆ ಪತ್ರ ಬರೆದಿದ್ದರು. ಆ ಬಳಿಕ ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ, ಮಾಜಿ ಕಾನೂನು ಮತ್ತು ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮಾ ಮತ್ತು ಮಾಜಿ ಸಚಿವ, ಬೊಟಾಡ್‌ನ ಸೌರಭ್ ಪಟೇಲ್, ರಾಜ್ಯಾಧ್ಯಕ್ಷರಾಗಿದ್ದ ಆರ್.ಸಿ.ಫಲ್ದು ಕೂಡ ಪತ್ರ ಬರೆದು ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದಿದ್ದರು.